ಭಾನುವಾರ, ಜೂನ್ 13, 2021
23 °C
ಚಿಕ್ಕಬಳ್ಳಾಪುರದ ರೋಗಿಗಳಿಗೆ ಆಸ್ಪತ್ರೆ ಮೀಸಲು ಆದೇಶ ಕಾನೂನುಬಾಹಿರ; ಸಿ.ಎಂಗೆ ಕೃಷ್ಣಬೈರೇಗೌಡ ಪತ್ರ

ಕೃಷ್ಣ ಬೈರೇಗೌಡ ವಿರುದ್ಧ ಸುಧಾಕರ್ ಬೆಂಬಲಿಗರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರದ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಮೀಸಲಿಟ್ಟು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕಾನೂನು ಬಾಹಿರ’ ಎಂದಿರುವ ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ಅವರ ನಡೆಗೆ ಜಿಲ್ಲೆಯ ಸುಧಾಕರ್ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರ ಚರ್ಚೆಗೂ ಗ್ರಾಸವಾಗಿದೆ.

‘ಕೆಲವರಿಗೆ ಮಾತ್ರ ವೈದ್ಯಕೀಯ ಸೌಲಭ್ಯ ಮೀಸಲಿಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕೂಡಲೇ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಸಿಗುವಂತೆ ಆದೇಶ ಮಾಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೃಷ್ಣ ಬೈರೇಗೌಡ
ಪತ್ರ ಬರೆದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಬರುವ ಕೋವಿಡ್ 19 ರೋಗಿಗಳಿಗೆ ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಬ್ಯಾಪಿಟಿಸ್ಟ್ ಆಸ್ಪತ್ರೆ ಹಾಗೂ ಸಹಕಾರ ನಗರದ ಆಸ್ಟರ್ ಸಿಎಂಸಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದಡಿ ಶೇ 15ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಏ.30ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮವಹಿಸಲಾಗಿತ್ತು.

‘ನಮ್ಮ ಕ್ಷೇತ್ರದಲ್ಲಿರುವ (ಬ್ಯಾಟರಾಯನಪುರ) ಎಸ್ಟಾರ್ ಸಿಎಂಐ ಆಸ್ಪತ್ರೆಯ ಐಸಿಯು, ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ನೀಡಬೇಕು ಎಂದು ಸರ್ಕಾರ ಆದೇಶಿಸಿರುತ್ತದೆ. ಕೋವಿಡ್ ದುರಂತವನ್ನು ನಾವೆಲ್ಲರೂ ಒಂದಾಗಿ ಎದುರಿಸುತ್ತಿರುವ ಸಂದರ್ಭದಲ್ಲಿ, ಈ ರೀತಿಯಾಗಿ ಯಾವುದೇ ಆಸ್ಪತ್ರೆಯ ಸೌಲಭ್ಯವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡಿ ಅವಶ್ಯಕತೆ ಇರುವಂಥ ಇತರರಿಗೆ ಸಿಗದಂತೆ ಮಾಡುವುದು ಅಮಾನವೀಯ ಹಾಗೂ ಅವಿವೇಕದಿಂದ ಕೂಡಿರುವ ನಿರ್ಧಾರ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಕೃಷ್ಣಬೈರೇಗೌಡ ಅವರ ಈ ಪತ್ರ ಜಿಲ್ಲೆಯಲ್ಲಿ ಚರ್ಚೆಗೂ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಆರೋಗ್ಯದ ವಿಚಾರದಲ್ಲಿ ನಿಮಗೆ ಇಷ್ಟವಾದರೆ ಸಹಾಯ ಮಾಡಿ. ಇಲ್ಲವಾದರೆ ಸುಮ್ಮನಿರಿ. ಜಿಲ್ಲೆಯ ಜನರಿಗೆ ಸಿಗುತ್ತಿರುವ ಸವಲತ್ತುಗಳಿಗೆ ನೀವು ಮೂಗು ತೋರಿಸುವುದು ಬೇಡ ಎಂದು ಕೃಷ್ಣಬೈರೇಗೌಡ ಅವರಿಗೆ ಬಿಜೆಪಿ ಯುವ ಮುಖಂಡ ಎಸ್.ಪಿ.ಶ್ರೀನಿವಾಸ್ ಕಟುವಾಗಿ ನುಡಿದಿದ್ದಾರೆ.

ಚುನಾವಣಾ ಸಮಯಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ಭಾಷಣ ಮಾಡುವ ನಿಮಗೆ ಜಿಲ್ಲೆಯ ಜನರ  ಕಷ್ಟಗಳ ಬಗ್ಗೆ ಏನು ಗೊತ್ತಿದೆ. ಸುಧಾಕರ್ ಅವರು ಸಚಿವರಾಗಿರುವುದು ನಿಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದು ನಿಮಗೆ ಶೋಭೆ ತರುವುದಿಲ್ಲ. ಹಿಂದೆ ವೈದ್ಯಕೀಯ ಕಾಲೇಜು ಮಂಜೂರು ಆದಾಗಲೂ ನಿಮ್ಮದೇ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ನಿಮ್ಮ ಪಕ್ಷದವರಿಗೆ ಚಿಕ್ಕಬಳ್ಳಾಪುರದ ಮೇಲೆ ಎಷ್ಟೊಂದು ಪ್ರೀತಿ ಇದೆ ಎನ್ನುವುದು ತೋರುತ್ತದೆ ಎಂದಿದ್ದಾರೆ.

ಇದೇ ರೀತಿ ಮುಂದುವರಿದರೆ ನಿಮ್ಮನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.