ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಕಾರ್ಯಪಡೆಗಳ ಪಾತ್ರ ಮುಖ್ಯ: ಜಿಲ್ಲಾಧಿಕಾರಿ ಆರ್.ಲತಾ

ಸ್ಥಳೀಯ ಮಟ್ಟದ ಕಾರ್ಯಪಡೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅಭಿಮತ
Last Updated 3 ಆಗಸ್ಟ್ 2020, 13:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸ್ಥಳೀಯ ಮಟ್ಟದ ಕಾರ್ಯಪಡೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಸ್ಥಳೀಯ ಮಟ್ಟದ ಕೋವಿಡ್ ಕಾರ್ಯಪಡೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ನಿತ್ಯ ಏರಿಕೆ ಆಗುತ್ತಿವೆ. ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಸೋಂಕು ಇತ್ತೀಚೆಗೆ ಹಳ್ಳಿಗಳಲ್ಲಿ ವ್ಯಾಪಿಸುತ್ತಿದೆ. ಆದ್ದರಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ’ ಎಂದು ಹೇಳಿದರು.

‘ಕಾರ್ಯಪಡೆ ಸದಸ್ಯರು ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರ ಆರೋಗ್ಯದ ಮಾಹಿತಿ ಕಲೆ ಹಾಕಬೇಕು. ಯಾರಲ್ಲಾದರೂ ಜ್ವರ, ಕೆಮ್ಮು, ನೆಗಡಿ ಇರುವುದು ಕಂಡುಬಂದರೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತಕ್ಷಣ ತಿಳಿಸಬೇಕು’ ಎಂದು ತಿಳಿಸಿದರು.

‘ಪ್ರತಿಯೊಂದು ಗ್ರಾಮದಲ್ಲಿ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಬೇಕು. ಪ್ರತಿದಿನದ ಬೆಳವಣಿಗೆಯ ಮಾಹಿತಿಯನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ಆ ಗ್ರೂಪ್‌ನಲ್ಲಿ ಹಂಚಿಕೊಳ್ಳಬೇಕು’ ಎಂದರು.

‘ಕೋವಿಡ್‌ ಸೋಂಕಿತರು ತಪಾಸಣೆ ಬರಲು ಹಿಂದೇಟು ಹಾಕಿ, ಮನೆಯಲ್ಲಿಯೇ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟಾಗ ಮಾತ್ರ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಸ್ಥಳೀಯ ಮಟ್ಟದ ಕಾರ್ಯಪಡೆ ಸಕ್ರಿಯವಾಗಿ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ಕ್ವಾರಂಟೈನ್ ಕೇಂದ್ರಗಳು ಮತ್ತು ಸೋಂಕಿತರು ಮನೆಗಳಿಗೆ ಕಿಟಕಿಗಳ ಮೂಲಕ ಆಹಾರ ಸಾಮಾಗ್ರಿಗಳನ್ನು ತಲುಪಿಸಬೇಕು. ಅಧಿಕಾರಿಗಳು ಸೋಂಕಿತರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಕಾರ್ಯಪಡೆ ಅಧಿಕಾರಿಗಳಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ. ಪ್ರತಿಯೊಬ್ಬರೂ ಕೋವಿಡ್ ನಿಯಂತ್ರಣಕ್ಕೆ ಕೈ ಜೋಡಿಸುವ ಮೂಲಕ ಉತ್ಸಾಹದಿಂದ ತಮ್ಮ ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಶೇ 70 ರಷ್ಟು ಭಾಗ ಹಳ್ಳಿಗಳಿವೆ. ಸ್ಥಳೀಯ ಮಟ್ಟದ ಕಾರ್ಯಪಡೆ ಸದಸ್ಯರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸಿದರೆ ಕೋವಿಡ್‌ ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ’ ಎಂದರು.

‘ಮನೆಯಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ, ಸೋಂಕಿನ ಲಕ್ಷಣಗಳು ಇದ್ದಲ್ಲಿ ತಕ್ಷಣ ಸ್ವಯಂಪ್ರೇರಿತರಾಗಿ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕು’ ಎಂದು ತಿಳಿಸಿದರು.

ಉಪನ್ಯಾಸಕ ಸಿ.ಎನ್.ಶಂಕರರೆಡ್ಡಿ ಅವರು ಕಾರ್ಯಪಡೆ ಅಧಿಕಾರಿಗಳಿಗೆ ಕೋವಿಡ್ ನಿಯಂತ್ರಿಸುವ ಬಗ್ಗೆ ತರಬೇತಿ ನೀಡಿದರು. ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ನಗಾರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭಾಸ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT