ಮಂಗಳವಾರ, ಡಿಸೆಂಬರ್ 1, 2020
18 °C
ಕಚೇರಿಗಳಿಗೆ ತಪ್ಪದ ಅಲೆದಾಟ l ಹತ್ತು ತಹಶೀಲ್ದಾರ್ ಬದಲಾದರೂ ಮಂಜೂರಾಗದ ಜಮೀನು

ತುಂಡು ಜಮೀನಿಗೆ ಯೋಧನ ಹೋರಾಟ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಜಮೀನು ಮಂಜೂರು ಮಾಡಿಸಿಕೊಳ್ಳಲು 16 ವರ್ಷಗಳಿಂದ ಸರ್ಕಾರಿ ಕಚೇರಿಗಳನ್ನು ಅಲೆದು ಸುಸ್ತಾದ ನಿವೃತ್ತ ಅಂಗವಿಕಲ ಯೋಧರೊಬ್ಬರು ಶ್ರೀನಿವಾಸಪುರ ತಾಲ್ಲೂಕು ಕಚೇರಿ ಎದುರು ನವೆಂಬರ್ 11ರಿಂದ ಅನಿರ್ದಿ‌ಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.    

‘ಸಾರ್ವಜನಿಕರು, ಸರ್ಕಾರಿ ಕಚೇರಿಯ ಸಿಬ್ಬಂದಿ ಕೆಲಸಗಳಿಗೆ ಯಾವುದೇ ತೊಂದರೆಯಾಗದಂತೆ ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ. ಅನುಮತಿ ನೀಡುವಂತೆ ಶ್ರೀನಿವಾಸಪುರ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ನಿವೃತ್ತ ಯೋಧ ಶಿವಾನಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹತ್ತು ತಹಶೀಲ್ದಾರ್‌ ಬದಲಾದರು: ಶ್ರೀನಿವಾಸಪುರ ತಾಲ್ಲೂಕು ಕಚೇರಿಗೆ ಅಲೆದು ಭ್ರಮನಿರಸನವಾಗಿದೆ. ಹತ್ತು ತಹಶೀಲ್ದಾರ್‌ಗಳು ಬದಲಾದರೂ ನನ್ನ ಬೇಡಿಕೆಗೆ ನ್ಯಾಯ ಸಿಗಲಿಲ್ಲ. ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದೇನೆ. ನನಗೆ ಬರುವ ನಿವೃತ್ತಿ ವೇತನವನ್ನು ಅಲೆದಾಡಲು ಖರ್ಚು ಮಾಡಿದ್ದೇನೆ. ಉಳಿದ ಹಣದಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳನ್ನು ಸಾಕಬೇಕಿದೆ ಎಂದು ಅವರು ಅಳಲು ತೋಡಿಕೊಂಡರು.

‘ತಹಶೀಲ್ದಾರ್ ಕೇಳಿದರೆ ಶಿರಸ್ತೇದಾರ್ ಬಳಿಗೆ ಕಳುಹಿಸುತ್ತಾರೆ. ಶಿರಸ್ತೇದಾರ್, ಕಂದಾಯ ನಿರೀಕ್ಷಕರ ಬಳಿಗೆ ಹೋಗಿ ಎನ್ನುತ್ತಾರೆ. ಕಂದಾಯ ನಿರೀಕ್ಷಕರು ಗ್ರಾಮ ಲೆಕ್ಕಿಗರನ್ನು ಕೇಳಿ ಎನ್ನುತ್ತಾರೆ. ಇದು ಒಂದು ದಿನದ ಕಥೆಯಲ್ಲ. 15 ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಅಧಿಕಾರಿಗಳ ವರ್ತನೆಯಿಂದ ರೋಸಿ ಹೋಗಿದ್ದೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಅತಿ ಜರೂರು ಎಂದು ಸೆಪ್ಟೆಂಬರ್ 25‌ರಂದು ಜಿಲ್ಲಾಧಿಕಾರಿ ಬರೆದ ಪತ್ರ ಇದುವರೆಗೂ ಟಪ್ಪಾಲು ವಿಭಾಗದಿಂದ ಹೊರಬಂದಿಲ್ಲ. ಪೊಲೀಸ್ ಇಲಾಖೆ, ಬೆಮಲ್‌ ಮತ್ತಿತರ ಕಡೆ ಕೆಲಸಕ್ಕಾಗಿ ಅಲೆದಾಡಿದೆ. ಅಂಗವಿಕಲತೆಯಿಂದ ಎಲ್ಲೂ ಕೆಲಸ ಸಿಗಲಿಲ್ಲ. ಸ್ವಾವಲಂಬಿಯಾಗಿ ಬದುಕಲು ಜಮೀನು ನೀಡುವಂತೆ ಕೇಳಿದರೆ ಮಂಜೂರು ಮಾಡುತ್ತಿಲ್ಲ ಎಂದು ಕಣ್ಣೀರಾದರು.  

ಕಂದಾಯ ಇಲಾಖೆಯ ಅಂದಿನ ಕಾರ್ಯದರ್ಶಿ ಚನ್ನಬಸವರಾಜು ಸಹ ಜಿಲ್ಲಾಧಿಕಾರಿಗೆ ಪತ್ರ ಬರೆದು ಶೀಘ್ರವೇ ಜಮೀನು ಮಂಜೂರಾತಿ ಮಾಡಲು ಸೂಚಿಸಿದ್ದರು. ಆದರೆ, ಇಂದಿನವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹಿಂಬರಹ ಕೂಡ ನೀಡುತ್ತಿಲ್ಲ. ಅಧಿಕಾರಶಾಹಿ ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವುದು ಶಿವಾನಂದ ಅವರ ಆರೋಪ.

ದುರಂತ ಬದುಕು!

ಹಗಲಿರುಳು ಗಡಿ ಕಾಯುವ ಸೈನಿಕರನ್ನು ನಾಗರಿಕ ಸಮಾಜ ಹೇಗೆ ಅಮಾನವೀಯವಾಗಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಕಾರ್ಗಿಲ್‌ ಯೋಧ ಶಿವಾನಂದ ಅವರ ಬದುಕು ಜೀವಂತ ಸಾಕ್ಷಿ.

1987ರಲ್ಲಿ ಭಾರತೀಯ ಸೈನ್ಯ ಸೇರಿದ್ದ ತಾಲ್ಲೂಕಿನ ರಾಯಪ್ಪನಹಳ್ಳಿಯ ಶಿವಾನಂದ 1999ರ ಕಾರ್ಗಿಲ್ ಯುದ್ಧದ ವೇಳೆ ಕಾಲು ಮುರಿದುಕೊಂಡು ನಿವೃತ್ತಿಯಾದರು. ನಿವೃತ್ತಿ ನಂತರ ಜೀವನ ನಡೆಸಲು ಸರ್ಕಾರ ನೀಡುವ ಜಮೀನು ಮಂಜೂರಾತಿಗಾಗಿ 15 ವರ್ಷಗಳ ಹಿಂದೆಯೇ ಕೋಲಾರದ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಶ್ರೀನಿವಾಸಪುರ ತಾಲ್ಲೂಕಿನ ನಾರಮಾಕಲಪಲ್ಲಿ ಸರ್ವೇ ನಂ. 101ರ ಭಾಗ 2ರಲ್ಲಿ ಅಥವಾ ರೋಣೂರು ಹೋಬಳಿ ಮಣಿಗಾನಹಳ್ಳಿಯ ಸರ್ವೇ ನಂ. 17ರಲ್ಲಿ ಅಥವಾ ಕಸಬಾ ಹೋಬಳಿಯ ಕಲ್ಲೂರು ಗ್ರಾಮದ ಸರ್ವೇ ನಂ. 164ರಲ್ಲಿ ಸರ್ಕಾರಿ ಜಮೀನಿಗೆ ಬೇಡಿಕೆ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಈ ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಶ್ರೀನಿವಾಸಪುರದ ತಹಶೀಲ್ದಾರ್ ಕಚೇರಿಗೆ ರವಾನಿಸಿದ್ದರು. ಅಂದಿನಿಂದ ಇಂದಿನವರೆಗೆ ಕಚೇರಿಗೆ ಅಲೆದಾಡಿದರೂ ಇವರ ಫೈಲ್‌ ಸ್ಥಳ ಬಿಟ್ಟು ಕದಲಿಲ್ಲ ಎಂದು ನೋವು ತೋಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.