ಶುಕ್ರವಾರ, ಜುಲೈ 30, 2021
28 °C
ಸವಾಲು ನಿಭಾಯಿಸಿದ ತೃಪ್ತಿ ಇದೆ

ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ಸಾರ್ಥಕತೆ ಕಂಡ ವೈದ್ಯೆ ಡಾ.ಎಸ್‌.ವಿಜಯಾ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ ಬಿಡಿ. ಡಿಸಿಯಿಂದ ಹಿಡಿದು ಡಿ ಗ್ರೂಪ್‌ ನೌಕರರವರೆಗೆ ಸಂಘಟಿತ ಪ್ರಯತ್ನವಿದೆ. ಅವರಲ್ಲಿ ನಾನೊಬ್ಬಳಷ್ಟೇ. ಇಂತಹ ಅವಕಾಶಗಳು ಜೀವಮಾನದಲ್ಲಿ ಒಮ್ಮೆ ಸಿಕ್ಕರೆ ಅಪರೂಪ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ’

ಕೋವಿಡ್‌ ವಾರ್ಡ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡದ ಸದಸ್ಯರಲ್ಲಿ ಒಬ್ಬರಾದ, ಜಿಲ್ಲಾ ಆಸ್ಪತ್ರೆಯ ಅರವಳಿಕೆ ತಜ್ಞೆ, ಪ್ರಸ್ತುತ ಹಂಗಾಮಿ ನಿವಾಸಿ ವೈದ್ಯಾಧಿಕಾರಿ ಆಗಿರುವ ಡಾ.ಎಸ್‌.ವಿಜಯಾ ಅವರು ಯಾವುದೇ ಹಮ್ಮುಬಿಮ್ಮು ಇಲ್ಲದೆ ವಿನಿತವಾಗಿ ಆಡಿದ ಈ ಮಾತುಗಳು ಅವರೊಳಗಿನ ಆತ್ಮತೃಪ್ತಿ ದ್ಯೋತಕದಂತೆ ಕೇಳಿಸಿತು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ವರದಿಯಾದ ದಿನದಿಂದ ಹಿಡಿದು ಈವರೆಗೂ ಕೋವಿಡ್‌ ವಾರ್ಡ್‌ನಲ್ಲಿ ಸಕ್ರಿಯವಾಗಿರುವ ವಿಜಯಾ ಅವರು ಸಹದ್ಯೋಗಿಗಳನ್ನು ಒಂದು ತಂಡವನ್ನಾಗಿ ಮಾಡಿಕೊಂಡು ಸೋಂಕಿತರ ಆರೈಕೆಯಲ್ಲಿ ತೋರಿದ ಕಾಳಜಿ ಮಾದರಿಯಾದದ್ದು. ‘ಪ್ರಜಾವಾಣಿ’ಯೊಂದಿಗೆ ಅವರು ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ...

ಮಾರ್ಚ್‌ ಮೂರನೇ ವಾರದಲ್ಲಿ ಗೌರಿಬಿದನೂರಿನಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದಂತೆ ನಾವು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮುಂದಾದೆವು. ಆರಂಭದಲ್ಲಿ ಕೋವಿಡ್‌ ವಾರ್ಡ್ ತೆರಳಬೇಕು ಎಂದು ಮೇಲಾಧಿಕಾರಿಗಳು ಹೇಳಿದಾಗ ಸಹಜವಾಗಿಯೇ ಎಲ್ಲ ಸಹದ್ಯೋಗಿಗಳಂತೆ ನನ್ನಲ್ಲೂ ಆತಂಕ, ಭಯ ಮನೆ ಮಾಡಿತ್ತು.

ಪತಿಗೆ ಮಧುಮೇಹ, ರಕ್ತದೊತ್ತಡ ಬೇರೆ. ಹೀಗಾಗಿ, ನನಗೆ ನನಗಿಂತಲೂ ಪತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಆತಂಕ ಕಾಡಿತು. ಆದ್ದರಿಂದ, ಕೋವಿಡ್‌ ವಾರ್ಡ್‌ ಪ್ರವೇಶಿಸಿದ ದಿನದಿಂದ ಆರಂಭದ 15 ದಿನಗಳು ಮನೆಯತ್ತಲೇ ಸುಳಿಯಲಿಲ್ಲ. ಆ ಮೇಲೆ ಕೆಲಸ ಮಾಡುತ್ತ, ಮಾಡುತ್ತ ಧೈರ್ಯ ಬಂತೇನಿ.

ಒಂದು ಬಾರಿಗೆ 111 ಸೋಂಕಿತರಿಗೆ ಚಿಕಿತ್ಸೆ ನೀಡುವುದು ನಮಗೆ ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಎಷ್ಟೋ ಬಾರಿ ಸರಿಯಾಗಿ ಪಿಪಿಇ ಕಿಟ್‌ ಸರಿಯಾಗಿ ಬಳಸದಿದ್ದರೆ, ಶೌಚಾಲಯಗಳು ಸರಿಯಾಗಿ ಶುಚಿಯಾಗಿರದೆ ಎಲ್ಲಿ ನಮಗೆ ಸೋಂಕು ತಗಲುವುದೋ ಎಂದು ಸುಮ್ಮನೇ ಭಯ ಕಾಡುತ್ತಿತ್ತು. ದಿನ ಕಳೆದಂತೆ ಮಾನಸಿಕವಾಗಿ ಒಗ್ಗಿಕೊಂಡೆವು. 

ಒಳ್ಳೆಯ ಕೆಲಸ ಮಾಡಲು ಹೊರಟಾಗ ನಮಗೆ ಕೆಟ್ಟದ್ದು ಆಗಲ್ಲ ಎಂಬ ನಂಬಿಕೆ ನನ್ನದು. ಅದರ ಮೇಲೂ ಏನಾದರೂ ಆದರೆ ದೇವರಿದ್ದಾನೆ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಕೋವಿಡ್ ವಿಚಾರದಲ್ಲಿ ಕೂಡ ನನ್ನದು ಅದೇ ಮನಸ್ಥಿತಿಯಾಗಿತ್ತು. ಹೀಗಾಗಿ, ಆ ಕೆಲಸವನ್ನೂ ಅಷ್ಟೇ ಖುಷಿಯಿಂದ ಆಸ್ವಾದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು