ಮಂಗಳವಾರ, ಸೆಪ್ಟೆಂಬರ್ 21, 2021
21 °C
ಮಳೆಯಿಂದ ಬೆಳೆ ಹಾಳು, ಕಡಿಮೆ ಇಳುವರಿಯಿಂದಾಗಿ ಬೆಲೆ ಏರಿಕೆ

ಚಿಂತಾಮಣಿ: ಟೊಮೆಟೊ ಬೆಳೆಗಾರರ ಮುಖದಲ್ಲಿ ಮಂದಹಾಸ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆ ಚೇತರಿಸಿಕೊಂಡು ಏರಿಕೆ ಕಾಣುತ್ತಿದೆ. ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುತ್ತಿದೆ.

ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ಗುಣಮಟ್ಟಕ್ಕೆ ಅನುಗುಣವಾಗಿ ₹400-600ರವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ₹40-60 ವರೆಗೂ ಮಾರಾಟವಾಗುತ್ತಿದೆ. ಬೆಲೆ ಕುಸಿತದ ಕಾಲದಲ್ಲಿ ಆಯ್ದು ಬಿಸಾಡುತ್ತಿದ್ದ ಟೊಮೆಟೊಗೂ ಬಾಕ್ಸ್‌ಗೆ ₹300 ಬೆಲೆ ಸಿಗುತ್ತಿದೆ.

ಕಳೆದ 15 ದಿನಗಳಿಂದ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಲಾಕ್‌ಡೌನ್ ಕಾರಣ ದಿಂದಾಗಿ 3-4 ತಿಂಗಳಿನಿಂದ ಬೆಲೆ ತೀವ್ರವಾಗಿ ಕುಸಿದಿತ್ತು. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಳೆ ಹೆಚ್ಚಾಗಿ ಬೆಳೆ ಹಾಳಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ತಾಲ್ಲೂಕಿನಲ್ಲಿ ನದಿ, ನಾಲೆ ಸೇರಿದಂತೆ ಯಾವುದೇ ಶಾಶ್ವತ ನೀರಾವರಿ ಮೂಲಗಳಿಲ್ಲ. ಅಂತರ್ಜಲ ತೀವ್ರವಾಗಿ ಕುಸಿದಿದೆ. 1,500 ಅಡಿಗಳು ಕೊರೆದರೂ ನೀರು ಸಿಗುತ್ತಿಲ್ಲ. ಸಿಗುವ ಅಲ್ಪ-ಸ್ವಲ್ಪ ನೀರಿನಿಂದಲೇ ಶ್ರಮಪಟ್ಟು ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ರೈತರು ನಾಲ್ಕು ಕಾಸು ಸಂಪಾದನೆ ಮಾಡುತ್ತಿದ್ದಾರೆ. ಆದರೆ, ನಿರಂತರವಾಗಿ ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಮಳೆಯಿಂದಾಗಿ ಬೆಳೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ.

ಬೆಲೆ ಏರಿಕೆಯಾಗುತ್ತಿರುವುದು ರೈತರಿಗೆ ಸಂತೋಷ ತಂದಿದೆ. ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಟೊಮೆಟೊ ಬೆಲೆ ತೀವ್ರ ಕುಸಿತದಿಂದ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು. ತೋಟದಿಂದ ಹಣ್ಣನ್ನು ಕಿತ್ತು, ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಸಿಗುವುದಿಲ್ಲ ಎಂದು ಅನೇಕ ರೈತರು ಗಿಡಗಳಿಂದ ಹಣ್ಣನ್ನು ಕೀಳದೆ ಉಳುಮೆ ಮಾಡಿದ್ದರು.

ರಾಜ್ಯದಲ್ಲೇ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಇಲ್ಲಿನ ಎಪಿಎಂಸಿಯಲ್ಲಿ ಯಾವ ಕಡೆಗೆ ದೃಷ್ಟಿ ಹಾಯಿಸಿದರೂ ಟೊಮೆಟೊ ರಾಶಿಗಳು ಕಾಣುತ್ತಿದ್ದವು.

ಮಾರುಕಟ್ಟೆಗೆ ಟೊಮೆಟೊ ಆವಕ ಕಡಿಮೆಯಾಗಿದೆ. ಜಿಲ್ಲೆಯ ರೈತರಿಂದ ಮಾಲು ಬರುತ್ತಿರುವುದು ಕಡಿಮೆ, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಆವಕ ಕಡಿಮೆಯಾಗಿ ವಿವಿಧ ಕಡೆಗಳಿಂದ ಬೇಡಿಕೆ ಅಧಿಕವಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಎನ್ನುತ್ತಾರೆ ವ್ಯಾಪಾರಸ್ಥರು.

ಪೂರೈಕೆ ಕಡಿಮೆ

ಪ್ರತಿನಿತ್ಯ ಸುಮಾರು 70-80 ಲೋಡ್ ಪೂರೈಕೆ ಆಗುತ್ತಿತ್ತು. ಈಗ ಕೇವಲ ₹30 ಲೋಡ್‌ಗೆ ಇಳಿದಿದೆ. ಆವಕ ಕಡಿಮೆ ಇರುವುದರಿಂದ ಸಹಜವಾಗಿ ಬೆಲೆ ಏರಿಕೆಯಾಗಿದೆ. ಅಲ್ಲದೆ, ಟೊಮೆಟೊ ಹಣ್ಣುಗಳು ಸ್ಥಳೀಯವಾಗಿ ಮಾತ್ರವಲ್ಲದೇ ದೆಹಲಿ, ಲಕ್ನೋ, ಕಾನ್ಪುರ, ಬನಾರಸ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ವಿಜಯವಾಡಗೆ ರವಾನೆಯಾಗುತ್ತಿದೆ ಎಂದು ಟೊಮೆಟೊ ವ್ಯಾಪಾರಿ ಊಲವಾಡಿ ವಿ.ಕೃಷ್ಣಪ್ಪ ತಿಳಿಸಿದರು.

ಲಾಭ ಮಧ್ಯವರ್ತಿಗಳ ಪಾಲು

ಚಿಂತಾಮಣಿ ಭಾಗದಲ್ಲಿ ಬೆಳೆಗಾರರೂ ಕಡಿಮೆ, ಮಳೆಯಿಂದ ಬೆಳೆ ಹಾಳಾಗುವುದು, ನೋಣಗಳ ಕಾಟದಿಂದ ಅನೇಕರು ಈ ಬೆಳೆಯಿಂದ ವಿಮುಖರಾಗಿದ್ದಾರೆ. ಪ್ರಸ್ತುತ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ. ಇದೀಗ ಬೆಲೆ ಏರಿಕೆಯಾದರೂ ಅದರ ಪೂರ್ಣ ಲಾಭ ರೈತರಿಗೆ ದೊರೆಯದೆ ಮದ್ಯವರ್ತಿಗಳ ಪಾಲಾಗುತ್ತದೆ ಎನ್ನುತ್ತಾರೆ ರೈತ ಸಂಘದ ಮುಖಂಡ ಜೆ.ವಿ.ರಘುನಾಥರೆಡ್ಡಿ.

ಬೆಲೆ ಏರಿಕೆಗೆ ಸಮ

ಕಳೆದ 2-3 ವರ್ಷಗಳಿಂದ ಟೊಮೆಟೊಗೆ ಲಾಭದಾಯಕ ಬೆಲೆ ಸಿಗುವುದು ಅಪರೂಪವಾಗಿದೆ. ಸತತವಾಗಿ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಟೊಮೆಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಈಗಿನ ಬೆಲೆ ಏರಿಕೆಯಿಂದ ರೈತರಿಗೆ ಹೆಚ್ಚಿನ ಲಾಭವೇನು ಸಿಗುವುದಿಲ್ಲ. ಸಾಕಾಣಿಕೆ, ಕಮೀಷನ್. ಬೆಳೆಯುವ ಖರ್ಚು ಸೇರಿದರೆ ಬೆಲೆ ಏರಿಕೆಗೆ ಸಮವಾಗುತ್ತದೆ. ನಷ್ಟವಾಗದೆ ರೈತರ ಶ್ರಮಕ್ಕೆ ಕೂಲಿ ಸಿಗುತ್ತದೆ ಎನ್ನುತ್ತಾರೆ ಪ್ರಗತಿಪರ ರೈತ ಮಂಜುನಾಥ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು