ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಕಲಾವಿದರ ಬದುಕು- ಮಾಯವಾಗುತ್ತಿರುವ ತೊಗಲು ಬೊಂಬೆಯಾಟ

Last Updated 6 ಅಕ್ಟೋಬರ್ 2021, 3:36 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಜೀಕೆವಾಂಡ್ಲಪಲ್ಲಿ ಗ್ರಾಮದ ತೊಗಲುಬೊಂಬೆ ಆಟದ ಕಲಾವಿದರ ಬದುಕು ಕಮರಿದೆ.

ಜಿಲ್ಲೆಯ ಪೈಕಿ ತೊಗಲುಬೊಂಬೆ ಆಡಿಸುವ ಕಲಾವಿದರು ತಾಲ್ಲೂಕಿನ ಗೊರ್ತಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀಕೆವಾಂಡ್ಲಪಲ್ಲಿ ಗ್ರಾಮದಲ್ಲಿ ಇದ್ದಾರೆ. ಇಡೀ ಗ್ರಾಮದಲ್ಲಿ ತೊಗಲುಬೊಂಬೆ ಆಟ ಆಡಿಸುವವರು 30 ಕುಟುಂಬಗಳು ಇವೆ.

ವೃತ್ತಿಯಲ್ಲಿ ಕೃಷಿಕ, ಕೂಲಿಕಾರ್ಮಿಕರಾಗಿದ್ದಾರೆ. ಪ್ರವೃತ್ತಿಯಾಗಿ ತೊಗಲುಬೊಂಬೆಗಳನ್ನು ಪರದೆಯ ಹಿಂದೆ ಆಡಿಸುವಕಲಾ ಚಾತುರ್ಯವನ್ನು ಹೊಂದಿದ್ದಾರೆ. ಗೊಂಬೆಗಳನ್ನು ಪರದೆ ಹಿಂದೆ ನಿಂತು ಜೀವತುಂಬಿ ಆಡಿಸುತ್ತಿರುವ ಕಲಾವಿದರ ಕುಟುಂಬದ ಜೀವನ ನಿರ್ವಹಣೆ ಶೋಚನೀಯ ಆಗಿದೆ. ಬದುಕಿಗೆ ಆಧಾರವಾಗಿರುವ ತೊಗಲುಬೊಂಬೆಗಳ ಕಲಾ ಪ್ರದರ್ಶನ ಮಾಡುವ ಕಲಾವಿದರಿಗೆ ಸರ್ಕಾರದ ಪಿಂಚಣಿ, ಆರ್ಥಿಕ ನೆರವು ಸಿಗದೇ ಪರಿತಪಿಸುತ್ತಿದ್ದಾರೆ.

ತಾಲ್ಲೂಕಿನ ಜೀಕೆವಾಂಡ್ಲಪಲ್ಲಿ ಗ್ರಾಮದಲ್ಲಿ 5 ಕುಟುಂಬಗಳ ಕಲಾವಿದರು ಎತ್ತಿನ ಬಂಡಿಗಳಲ್ಲಿ ಗ್ರಾಮಗಳಲ್ಲಿ ತೊಗಲುಬೊಂಬೆ ಆಟ ಆಡಿಸುತ್ತಿದ್ದಾರೆ. ಜನರಿಂದ ದವಸ, ಧಾನ್ಯಗಳನ್ನು ಪಡೆಯುತ್ತಿದ್ದಾರೆ. ತೊಗಲುಬೊಂಬೆ ಆಟವನ್ನು ವಿಶೇಷ ಕಾರ್ಯಕ್ರಮ, ಸಮಾರಂಭಗಳಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ.

ಮೇಕೆ, ಆಡುಗಳ ಚರ್ಮವನ್ನು ಬಿಸಿನೀರಿನಲ್ಲಿ ಹದವರಿತು ಅದ್ದಿ ತೆಗೆದು ಚರ್ಮವನ್ನು ಶುದ್ಧಗೊಳಿಸಿ ನೆರಳಿನಲ್ಲಿ ಎಳೆದು ಕಟ್ಟಿ 3-4 ದಿನಗಳ ಕಾಲ ಒಣಗಿಸಿದಚರ್ಮದ ಮೇಲೆ ಬೊಂಬೆಗಳನ್ನು ಮೂಡಿಸಿದ್ದಾರೆ. ರಾಮಾಯಣ, ಮಹಾಭಾರತದ ಪಾತ್ರಗಳನ್ನು ಬೊಂಬೆಗಳನ್ನಾಗಿ ಮಾಡಿಕೊಂಡ ಕಲಾವಿದರು ಕಥೆ, ಪರದೆ, ಬೆಳಕು, ಸಂಗೀತ ಹಾಗೂ ಪಾತ್ರಗಳಿಗೆ ಧ್ವನಿ ಕೊಡುವ ವ್ಯಕ್ತಿಗಳ ಸಂಯೋಗದಲ್ಲಿ ತೊಗಲುಬೊಂಬೆ ಪ್ರದರ್ಶನ ಮಾಡುತ್ತಾರೆ.

ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕೃತ ಕಲಾವಿದ ದಿವಂಗತ ಪಿ.ರಾಮರಾವ್ ಅವರ ನಂತರ, ಅವರ ಮಗ ಶ್ರೀನಿವಾಸ್, ಮೊಮ್ಮಗಳಾದ ವೀಣಿಬಾಯಿ ಅವರು ತೊಗಲುಬೊಂಬೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಜತೆಗೆ ಗ್ರಾಮದ ವೀಣಿಬಾಯಿ, ಮನೋಹರ್, ಕೃಷ್ಣವೇಣಿ, ಅರುಣಾಕುಮಾರಿ, ರಾಮಾಂಜಿನಪ್ಪ, ಸುನಂದಮ್ಮ, ಹನುಮಂತರಾವ್, ಭಾನುಮತಿ, ರಮಣ, ಶ್ರೀನಿವಾಸ್‍ ಅವರು ತೊಗಲುಬೊಂಬೆ ಆಟವನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಸರ್ಕಾರ, ಸಂಘ-ಸಂಸ್ಥೆಗಳು, ದಾನಿಗಳು ತೊಗಲುಗೊಂಬೆ ಪ್ರದರ್ಶನಕ್ಕೆ ನೆರವು ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ, ಯಕ್ಷಗಾನ ಅಕಾಡೆಮಿಯಿಂದ ಈ ಕಲಾವಿದರನ್ನು ಗುರುತಿಸಬೇಕು ಎಂದು ಹಿರಿಯ ಕಲಾವಿದ ಶ್ರೀನಿವಾಸ್ ಹೇಳಿದರು.

ತೊಗಲುಬೊಂಬೆ ಪ್ರದರ್ಶನ

‘ತೊಗಲುಬೊಂಬೆ ಅಪರೂಪದ ಕಲೆ ಆಗಿದೆ. ಕಾರ್ಯಕ್ರಮ ಇಲ್ಲದೇ ಕಲಾವಿದರು ಇದೀಗ ಕೂಲಿ ಕಾರ್ಮಿಕರಾಗಿದ್ದಾರೆ. 15 ಮಂದಿ ಹೆಚ್ಚು ಕಲಾವಿದರಿಗೆ ಕನಿಷ್ಠ ಮಾಸಿಕ ಗೌರವಧನ ಸಿಗುತ್ತಿಲ್ಲ. ಈ ಹಿಂದೆ ನಮ್ಮ ತಲೆಮಾರಿನವರು ತೊಗಲುಬೊಂಬೆ ಪ್ರದರ್ಶನ ಮಾಡುತ್ತಿದ್ದರು. ಕೆಲವರು ಹೊಟ್ಟೆ ಪಾಡಿಗಾಗಿ ಕೂಲಿಕೆಲಸಗಳಿಗೆ ಗುಳೇ ಹೊರಟಿದ್ದಾರೆ. ತೊಗಲುಬೊಂಬೆ ಪ್ರದರ್ಶನ ಉಳಿಸಿ-ಬೆಳಿಸಬೇಕು’ ಎಂದು ಜೀಕೆವಾಂಡ್ಲಪಲ್ಲಿ ಗ್ರಾಮದ ತೊಗಲುಗೊಂಬೆ ಆಟದ ಕಲಾವಿದೆ ವೀಣಿಬಾಯಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT