ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದನಾಯಕನಹಳ್ಳಿ | ರೈತರ ಮನವೊಲಿಸಿ ವಿವಾದಕ್ಕೆ ತೆರೆ; ಸಸಿ ನೆಟ್ಟ ಅರಣ್ಯ ಇಲಾಖೆ

ಮನವೊಲಿಸಿದ ಅಧಿಕಾರಿಗಳು
Last Updated 28 ಆಗಸ್ಟ್ 2019, 13:52 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಅರಣ್ಯ ಇಲಾಖೆಗೆ ಸೇರಿರುವ ಸರ್ವೆ ನಂಬರ್ 10ರಲ್ಲಿ ಗಿಡಗಳನ್ನು ನೆಡಲು ಹೊರಟಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ತಡೆದು ಪ್ರತಿಭಟಿಸಿದ ವರದನಾಯಕನಹಳ್ಳಿ ಗ್ರಾಮದ ಕೆಲ ದಲಿತ ಕುಟುಂಬಗಳನ್ನು ಮನವೊಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಈ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ವಿವಾದಕ್ಕೆ ತೆರೆ ಎಳೆದರು.

ಅರಣ್ಯ ಇಲಾಖೆಯವರು ಗಿಡ ನೆಡಲು ಗುಂಡಿ ತೋಡಿದ್ದ ಸ್ಥಳದಲ್ಲಿಆಗಸ್ಟ್ 23ರ ರಾತ್ರಿ ವರದನಾಯಕನಹಳ್ಳಿಯ ಕೆಲವು ದಲಿತ ಕುಟುಂಬದವರು ಉತ್ತಿದ್ದರು.ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಅವರು ತಡೆಯಲು ಹೋದಾಗ ಅರಣ್ಯ ಇಲಾಖೆ ಹಾಗೂ ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿತ್ತು.

ಅರಣ್ಯ ಇಲಾಖೆಗೆ ಸೇರಿದ ಎಲ್ಲ ದಾಖಲೆಗಳೊಂದಿಗೆ ಅರಣ್ಯ ಇಲಾಖೆಯ ಸಿಸಿಎಫ್‌ ಆರ್.ಗೋಪಾಲ್, ಡಿಎಫ್ಒ ರವಿಶಂಕರ್, ಎಸಿಎಫ್ ಶ್ರೀಧರ್ ನೇತೃತ್ವದ ಅಧಿಕಾರಿಗಳ ತಂಡ ಸಿಬ್ಬಂದಿಯೊಂದಿಗೆ ಅರಣ್ಯಕ್ಕೆ ಸೇರಿರುವ ಸ್ಥಳದಲ್ಲಿ ಗಿಡಗಳನ್ನು ನೆಡಲು ಬುಧವಾರ ತೆರಳಿದ್ದರು. ಆ ವೇಳೆ ವರದನಾಯಕನಹಳ್ಳಿಯ ಕೆಲವು ದಲಿತ ಕುಟುಂಬದವರು ಸ್ಥಳದಲ್ಲಿ ಧರಣಿ ಕುಳಿತು ತಾವು ಈಗಾಗಲೇ ರಾಗಿ ಬಿತ್ತಿದ್ದು, ಪೈರು ಮೊಳಕೆಯಾಗಿದೆ. ಈ ಸ್ಥಳವನ್ನು ಬಿಡುವುದಿಲ್ಲವೆಂದು ಪ್ರತಿಭಟಿಸಿದರು.

ತಹಶೀಲ್ದಾರ್ ಎಂ.ದಯಾನಂದ್ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ರೈತರಿಗೆ ವಿವರಿಸಿದರು. ‘ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅವರು ನಿಮಗೆ ಪರ್ಯಾಯ ಸ್ಥಳ ನೀಡುವಂತೆ ಸೂಚಿಸಿದ್ದಾರೆ. ಅರಣ್ಯ ಇಲಾಖೆಯ ಸ್ಥಳವನ್ನು ತೆರವುಗೊಳಿಸಬೇಕು’ ಎಂದು ರೈತರ ಮನವೊಲಿಸಿದರು.

ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ಈಗಾಗಲೇ ಪೈರು ಬಂದಿರುವುದರಿಂದ ಜೆಸಿಬಿ ಬಳಸದೆ ಹಾಗೆಯೇ ಚಿಕ್ಕದಾಗಿ ಗುಂಡಿ ತೋಡಿ ಗಿಡಗಳನ್ನು ನೆಡಿ. ಈ ಕುಟುಂಬದವರಿಗೆ ತಲಾ ಎರಡು ಎಕರೆಯಷ್ಟಾದರೂ ಜಮೀನನ್ನು ಬೇರೆಡೆ ನೀಡಬೇಕು’ ಎಂದು ತಹಶೀಲ್ದಾರರಿಗೆ ಕೋರಿದರು.

ಜಿಲ್ಲಾ ಅರಣ್ಯ ಅಧಿಕಾರಿ ರವಿಶಂಕರ್ ಮಾತನಾಡಿ, ‘ಪಟ್ರಹಳ್ಳಿ ರಾಜ್ಯ ಅರಣ್ಯಕ್ಕೆ ಸೇರಿದ ಈ ಪ್ರದೇಶವು 1917ರಲ್ಲಿಯೇ ಅರಣ್ಯ ಇಲಾಖೆಗೆ ನೋಟಿಫಿಕೇಷನ್ ಆಗಿದೆ. 926 ಎಕರೆ ವಿಸ್ತೀರ್ಣದ ಈ ವಲಯ ಸಾಕಷ್ಟು ಒತ್ತುವರಿಯಾಗಿದೆ. ನಮ್ಮ ಇಲಾಖೆಯಿಂದ ಗಿಡ ನೆಡಲು ಮಾಡಿಸಿದ್ದ ಗುಂಡಿಗಳನ್ನೆಲ್ಲಾ ಉತ್ತಿ ಬಿತ್ತಿದ್ದಾರೆ. ಯಾವುದೇ ಕಾರಣಕ್ಕೂ ಅರಣ್ಯಕ್ಕೆ ಸೇರಿದ ಜಮೀನು ಮಂಜೂರು ಆಗುವುದಿಲ್ಲ. ನಮ್ಮ ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ ಸೇರಿದಂತೆ ಸಿಬ್ಬಂದಿ ಅರಣ್ಯಕ್ಕೆ ಸೇರಿದ ಜಮೀನು ಉಳಿಸಲು ಶ್ರಮಿಸಿದ್ದಾರೆ. ಪೊಲೀಸರು ನಮಗೆ ಸಹಕಾರ ನೀಡಿದ್ದಾರೆ. ಈ ದಿನ ಅರಣ್ಯಕ್ಕೆ ಸೇರಿರುವ ಸ್ಥಳದಲ್ಲಿ ಗಿಡಗಳನ್ನು ನೆಡಲಿದ್ದೇವೆ’ ಎಂದರು.

ಪ್ರತಿಭಟನಾನಿರತರ ಮನವೊಲಿಸಿ ಕಳುಹಿಸಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಪೊಲೀಸ್‌ ಭದ್ರತೆಯಲ್ಲಿ ಗಿಡಗಳನ್ನು ನೆಟ್ಟರು. ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಭಾಸ್ಕರ್, ಸಿಬ್ಬಂದಿ ಹುಸೇನ್, ಪ್ರಶಾಂತ್, ಸಂದೀಪ್, ಕಾಶೀನಾಥ್, ವೆಂಕಟರೋಣಪ್ಪ, ಬತ್ಯಪ್ಪ, ರಂಗಪ್ಪ, ಶಿವರಾಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT