ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಹಾಲಕ್ಷ್ಮೀ ಹಬ್ಬ: ಗಗನಕ್ಕೇರಿದ ಹೂವಿನ ಬೆಲೆ

ನಗರದ ಮಾರುಕಟ್ಟೆಯಲ್ಲಿ ಜನದಟ್ಟಣೆ, ಪ್ರಮುಖ ರಸ್ತೆಗಳಲ್ಲಿ ಪರದಾಡಿದ ವಾಹನ ಸವಾರರು
Last Updated 8 ಆಗಸ್ಟ್ 2019, 13:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆಷಾಢ ಕಳೆದು ಶ್ರಾವಣ ತಿಂಗಳು ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಗ್ಗಲು ಬದಲಿಸಿದ ಹೂವಿನ ಬೆಲೆ ವರ ಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನವಾದ ಗುರುವಾರ ಗಗನಕ್ಕೆರಿತ್ತು. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬದ ಖರೀದಿಯ ಭರಾಟೆ ಜೋರಾಗಿತ್ತು. ಹಬ್ಬದ ಕಾರಣಕ್ಕೆ ಹಣ್ಣುಗಳ ಬೆಲೆ ಕೂಡ ‘ದುಬಾರಿ’ಯಾಗಿತ್ತು.


ನಗರದ ಮಾರುಕಟ್ಟೆಗೆ ಗುರುವಾರ ಸ್ಥಳೀಯವಾಗಿ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದ ಬಗೆಬಗೆ ಹೂವುಗಳು ಪ್ರವಾಹವೇ ಹರಿದು ಬಂದಿತ್ತು. ಹಬ್ಬದ ಮಾರಾಟಕ್ಕಾಗಿ ಹೂವು ಖರೀದಿಸಲು ಎಪಿಎಂಸಿಯ ಹೂವಿನ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಮುಗಿಬಿದ್ದಿದ್ದರು.


ಮಾರುಕಟ್ಟೆಯಲ್ಲಿ ಕಳೆದ ವಾರ ಕೆ.ಜಿಗೆ ₹150ರ ವರೆಗೆ ಮಾರಾಟವಾಗುತ್ತಿದ್ದ ಸೇವಂತಿಗೆ, ಗುಲಾಬಿ ₹400ಕ್ಕೆ ಏರಿವೆ. ಮಾರಿಗೋಲ್ಡ್‌ ₹150ರ ಆಸುಪಾಸಿನಲ್ಲಿದ್ದ ಮಾರಿಗೋಲ್ಡ್‌ ₹500ರ ವರೆಗೆ ಮಾರಾಟವಾಗುತ್ತಿತ್ತು. ₹400ರ ಗಡಿಯಲ್ಲಿದ್ದ ಕಾಕಡ ಮತ್ತು ಮಲ್ಲಿಗೆ ದಿಢೀರ್‌ ₹1,400 ತಲುಪಿದ್ದವು. ಕೆಲ ದಿನಗಳ ಹಿಂದಷ್ಟೇ ₹600ಕ್ಕೆ ಕೆ.ಜಿಯಂತೆ ಬಿಕರಿಯಾಗುತ್ತಿದ್ದ ಕನಕಾಂಬರ ಅತಿ ಹೆಚ್ಚಿನ ಬೆಲೆ ಪಡೆದು ₹2,000ದ ವರೆಗೆ ಮಾರಾಟವಾಗುತ್ತಿತ್ತು.


ಹಬ್ಬದ ಋತುಮಾನ ಆರಂಭಗೊಳ್ಳುತ್ತಿದ್ದಂತೆ ಎಲ್ಲ ಹೂವುಗಳ ಬೆಲೆ ಏರುಮುಖವಾಗುತ್ತಿದ್ದರೆ, ವಿಪರೀತ ಹೆಚ್ಚಿದ ಆವಕದಿಂದಾಗಿ ಕಳೆದವಾರ ಚೆಂಡು ಹೂವಿನ ಬೆಲೆ ಒಂದು ಕೆ.ಜಿಗೆ ₹40 ರಿಂದ ₹30ಕ್ಕೆ ಕುಸಿದಿತ್ತು. ಆದರೆ ಗುರುವಾರ ಚೆಂಡು ಹೂವಿನ ಬೆಲೆ ₹80ಕ್ಕೆ ಏರಿತ್ತು. ಒಂದು ಕಟ್ಟು ಬಟನ್ಸ್‌ ₹90, ಐದಾರು ಹೂವುಗಳಿರುವ ಜರ್ಬೆರಾ ಕಟ್ಟು ₹40 ರಿಂದ ₹60ಕ್ಕೆ, ತಾವರೆ ಹೂವು ಗಾತ್ರ ಆಧರಿಸಿ ₹10 ರಿಂದ ₹30ರ ವರೆಗೆ ಮಾರಾಟವಾಗುತ್ತಿದ್ದವು.


ಹಣ್ಣುಗಳ ಬೆಲೆ ಸ್ವಲ್ಪ ಏರಿಕೆ
ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ಒಂದು ಕೆ.ಜಿಗೆ ₹70 ರಿಂದ ₹80ರ ವರೆಗೆ ಬಿಕರಿಯಾಗುತ್ತಿತ್ತು. ಇನ್ನು ಪಚ್ಚೆ ಬಾಳೆ ₹50ರ ವರೆಗೆ ಮಾರಾಟವಾಗುತ್ತಿತ್ತು. ಆಸ್ಟ್ರೇಲಿಯಾದಿಂದ ಆಮದುಗೊಂಡ ವಾಷಿಂಗ್ಟನ್ ಸೇಬು ಒಂದು ಕೆ.ಜಿಗೆ ₹200, ಶಿಮ್ಲಾ ಸೇಬು ₹180, ದ್ರಾಕ್ಷಿ ₹200, ಸ್ಥಳೀಯ ಕಿತ್ತಳೆಹಣ್ಣು ₹100, ಆಮದು ಕಿತ್ತಳೆ ₹150, ದಾಳಿಂಬೆ ₹160ಕ್ಕೆ ಮಾರಾಟವಾಗುತ್ತಿದ್ದವು.

ನಾಟಿ ಮೊಸಂಬಿ ₹100, ಹೈಬ್ರಿಡ್ ಮೋಸಂಬಿ ₹180ಕ್ಕೆ ಮಾರಾಟವಾಗುತ್ತಿತ್ತು. ಕಳೆದ ವಾರದವರೆಗೆ ಒಂದು ಕೆ.ಜಿಗೆ ₹30ಕ್ಕೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಹಬ್ಬದ ಕಾರಣಕ್ಕೆ ₹50ಕ್ಕೆ ಏರಿತ್ತು. ಫೈನಾಫಲ್‌ ಒಂದು ಜೋಡಿಗೆ ಗಾತ್ರಕ್ಕೆ ಅನುಸಾರವಾಗಿ ₹40 ರಿಂದ ₹100ರ ವರೆಗೆ ಮಾರಾಟ ಮಾಡಲಾಗುತ್ತಿತ್ತು.

ಚಿಕ್ಕ ಬಾಳೆಕಂದು ಜೋಡಿಗೆ ₹30, ದೊಡ್ಡ ಕಂದುಗಳು ₹50 ರಂತೆ ಮಾರಾಟವಾಗುತ್ತಿದ್ದವು. ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ನಗರದ ಬಜಾರ್ ರಸ್ತೆ, ಎಂ.ಜಿ.ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ಹಬ್ಬದ ವ್ಯಾಪಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT