ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಐದು ಶತಮಾನದ ಗೌಡನ ಕೆರೆಗೆ ಉಳಿಗಾಲವಿಲ್ಲ

ಜಾಲಿ, ಒತ್ತುವರಿ, ಊರಿನ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಸುರಿಯುವ ತಾಣ
Published : 9 ಸೆಪ್ಟೆಂಬರ್ 2024, 6:00 IST
Last Updated : 9 ಸೆಪ್ಟೆಂಬರ್ 2024, 6:00 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ನಗರದ ಆಗ್ನೇಯ ದಿಕ್ಕಿನಲ್ಲಿರುವ ‘ಗೌಡನ ಕೆರೆ’ಗೆ ಐದು ಶತಮಾನಗಳ ಇತಿಹಾಸವಿದೆ. ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ ಇದಕ್ಕೆ ‘ಗೌಡನ ಕೆರೆ’ ಎಂಬ ಹೆಸರು ಬಂತೆಂದು ದಾಖಲಾಗಿದೆ.

ಒಂದೆಡೆ ಇತಿಹಾಸ ಪ್ರಸಿದ್ಧ ಗೌಡನ ಕೆರೆ ಈಗ ಜಾಲಿಗಿಡಗಳ ಕಾರುಬಾರಾಗಿದ್ದು ಕೆರೆ ಒಳಗೆ ಮನುಷ್ಯರಿರಲಿ ಜಾನುವಾರುಗಳೂ ಸಹ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಒತ್ತುವರಿಗೆ ಈಡಾಗಿ ತನ್ನ ವಿಸ್ತೀರ್ಣವನ್ನು ಕಳೆದುಕೊಳ್ಳುತ್ತಿದೆ. ಇದೀಗ ನಗರದಲ್ಲಿ ಕೆಡವುವ ಹಳೆ ಮನೆಗಳ ತ್ಯಾಜ್ಯ, ನಗರಸಭೆಯವರು ಸಂಗ್ರಹಿಸುವ ತ್ಯಾಜ್ಯ ಮತ್ತು ನಿಸರ್ಗಕ್ಕೆ ಹಾನಿಕಾರಕವಾದ ಆಸ್ಪತ್ರೆ ತ್ಯಾಜ್ಯದ ರಾಶಿ ಸುರಿಯಲಾಗುತ್ತಿದೆ.

ಕೆರೆ ಈಗ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಪರಿಣಾಮ ಕೆರೆಯ ತುಂಬ ಹೆಮ್ಮರವಾಗಿ ಜಾಲಿ ಗಿಡಗಳು ಬೆಳೆದು ಕೆರೆಯ ಅಸ್ತಿತ್ವವನ್ನೇ ಅಣಕ ಮಾಡುತ್ತಿದೆ. ಇದೇನು ಕೆರೆಯೋ ಅಥವಾ ಜಾಲಿ ಗಿಡಗಳ ವನವೋ ಎಂಬ ಅನುಮಾನ ಕಾಡುವಂತಿದೆ.

ಸಣ್ಣ ನೀರಾವರಿ ಇಲಾಖೆಯಿಂದ ಅದು ಹೇಗೋ ತಪ್ಪಿ ಹೋಗಿ ಡೀಮ್ಡ್ ಅರಣ್ಯಕ್ಕೆ ಸೇರಿಕೊಂಡಿದೆ. ಆದರೆ ಅರಣ್ಯ ಇಲಾಖೆಯವರು ಒತ್ತುವರಿ ತೆರವಿಗೂ ಮುಂದಾಗದೆ, ಜಾಲಿ ಮರಗಳನ್ನೂ ತೆಗೆಯದೆ ಕೆರೆ ನಿರುಪಯುಕ್ತವಾಗಿದೆ.

‘ಗೌಡನ ಕೆರೆ’ ಸರಿಸುಮಾರು 99 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಸುತ್ತಮುತ್ತ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಅವಕಾಶವಿದೆ. ಆದರೆ ಒತ್ತುವರಿಯ ಪರಿಣಾಮದಿಂದ ಇದೀಗ ಎಷ್ಟು ಹೆಕ್ಟೇರ್‌ ಒತ್ತುವರಿಯಾಗಿದೆಯೋ ಅರಿಯದಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ನಗರಕ್ಕೆ ನೀರು ಸರಬರಾಜು ಮಾಡುವ ಹಲವಾರು ಕೊಳವೆ ಬಾವಿಗಳು ಹಾಗೂ ಸುತ್ತಲಿನ ಗ್ರಾಮಗಳ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಆದರೆ, ದಶಕಗಳಿಂದಲೂ ಮಳೆಯ ಕೊರತೆಯಿಂದ ಕೆರೆಗೆ ನೀರು ಬಾರದೆ ಯಥೇಚ್ಛವಾಗಿ ಜಾಲಿಗಿಡಗಳು ಬೆಳೆದಿವೆ. ಕಾಲಕಾಲಕ್ಕೆ ಇವುಗಳನ್ನು ತೆರವು ಮಾಡದ ಪರಿಣಾಮ ಇಡೀ ಕೆರೆಯನ್ನೇ ಜಾಲಿ ಗಿಡಗಳು ಆಕ್ರಮಿಸಿವೆ.

ಬೈಪಾಸ್ ರಸ್ತೆಯುದ್ದಕ್ಕೂ ಗೌಡನ ಕೆರೆಗೆ ಟ್ರ್ಯಾಕ್ಟರ್‌ಗಳ ಮೂಲಕ ಊರ ತ್ಯಾಜ್ಯವನ್ನು ತೆಗೆದುಕೊಂಡು ಹೋಗಿ ಸುರಿಯಲಾಗುತ್ತಿದೆ. ಕೆರೆಯ ಒಳಗೆ ಟ್ರ್ಯಾಕ್ಟರ್‌ ಹೋಗಿ ಬಂದು ರಸ್ತೆಯೇ ಆಗಿಬಿಟ್ಟಿದೆ. ನಗರದಲ್ಲಿ ಕೆಡವುವ ಹಳೆ ಮನೆ, ಕಟ್ಟಡಗಳ ತ್ಯಾಜ್ಯವೆಲ್ಲಾ ಕೆರೆ ಸೇರುತ್ತಿದೆ. ಇದಲ್ಲದೆ ನಗರಸಭೆಯ ಟ್ರ್ಯಾಕ್ಟರ್‌ಗಳಲ್ಲಿ ಸಂಗ್ರಹಿಸುವ ಊರ ತ್ಯಾಜ್ಯವನ್ನು ಸಹ ಅಲ್ಲಿಯೇ ಸುರಿಯಲಾಗುತ್ತಿದೆ.

ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ

ಅತ್ಯಂತ ಅಪಾಯಕಾರಿಯಾದ ಆಸ್ಪತ್ರೆ ತ್ಯಾಜ್ಯ ರಾಶಿ ರಾಶಿ ಕೆರೆಯಲ್ಲಿ ಸುರಿಯಲಾಗಿದೆ. ಈ ತ್ಯಾಜ್ಯವನ್ನು ಜೈವಿಕ ತ್ಯಾಜ್ಯ 1988ರ ಕಾನೂನಿನ ನಿಯಮಾನುಸಾರ ಸಂಬಂಧಿಸಿದವರ ಮೂಲಕ ವಿಲೇವಾರಿ ಮಾಡಬೇಕು. ಆದರೆ, ಕಾಯ್ದೆ, ಕಾನೂನನ್ನು ಉಲ್ಲಂಘಿಸಿ ಪರಿಸರ ಮಾಲಿನ್ಯವಾಗುವ, ಜಾನುವಾರುಗಳಿಗೆ ತೊಂದರೆಯಾಗುವ ಹಾಗೆ ಆಸ್ಪತ್ರೆ(ಜೈವಿಕ) ತ್ಯಾಜ್ಯವನ್ನೆಲ್ಲಾ ಇಲ್ಲಿ ಸುರಿಯಲಾಗುತ್ತಿದೆ. ಅವುಗಳಲ್ಲಿ ಸೂಜಿಗಳು ಸಾಕಷ್ಟು ಸಂಖ್ಯೆಯಲ್ಲಿವೆ.

ಕೆರೆಯಲ್ಲಿ ಉಂಟಾಗಿರುವ ಕಾಲುದಾರಿಗಳಲ್ಲಿ ಹಸುಗಳು, ಕುರಿ, ಮೇಕೆಗಳನ್ನು ಮೇಯಿಸಲೆಂದು ಕರೆದೊಯ್ಯುವ ನಗರ ವ್ಯಾಪ್ತಿಯ ರೈತರಿಗೆ ಈ ತ್ಯಾಜ್ಯ ಕಂಟಕಪ್ರಾಯವಾಗಿ ಪರಿಣಮಿಸಿದೆ. ಈಚೆಗೆ ಉಲ್ಲೂರುಪೇಟೆಯ ಅನಿಲ್ ಕುಮಾರ್ ಅವರ ಮೂರು ಮೇಕೆಗಳು, ಇಲ್ಲಿನ ತ್ಯಾಜ್ಯ ತಿಂದು ಸತ್ತುಹೋದವು.

ಶಿಡ್ಲಘಟ್ಟದ ಗೌಡನ ಕೆರೆಯಲ್ಲಿ ಸುರಿಯುತ್ತಿರುವ ನಗರದಲ್ಲಿ ಕೆಡವುವ ಹಳೆ ಮನೆಗಳ ತ್ಯಾಜ್ಯ
ಶಿಡ್ಲಘಟ್ಟದ ಗೌಡನ ಕೆರೆಯಲ್ಲಿ ಸುರಿಯುತ್ತಿರುವ ನಗರದಲ್ಲಿ ಕೆಡವುವ ಹಳೆ ಮನೆಗಳ ತ್ಯಾಜ್ಯ
ಅರಣ್ಯ ಇಲಾಖೆಗೆ ಸೇರಿದ ಕೆರೆ ಎಚ್.ಎನ್. ವ್ಯಾಲಿ ನೀರು ಹರಿದು ಬರುವ ನಮ್ಮ ತಾಲ್ಲೂಕಿನ ಅಮ್ಮನ ಕೆರೆ ಮತ್ತು ಭದ್ರನ ಕೆರೆಯಲ್ಲಿ ಜಾಲಿ ಮರಗಳನ್ನು ತೆರವು ಮಾಡಲು ಮುಂದಾದಾಗ ಅರಣ್ಯ ಇಲಾಖೆಯವರು ತಡೆಯೊಡ್ಡಿ ಕೇಸ್ ದಾಖಲಿಸಿದ್ದಾರೆ. ಗೌಡನ ಕೆರೆಯು ಡೀಮ್ಡ್ ಅರಣ್ಯಕ್ಕೆ ಸೇರಿರುವುದರಿಂದ ಜಾಲಿ ಮರಗಳನ್ನು ತೆರವು ಮಾಡಲು ಆಗುತ್ತಿಲ್ಲ.
ಭಕ್ತರಹಳ್ಳಿ ಬೈರೇಗೌಡ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ
ಒತ್ತುವರಿ ತೆರವು ಮಾಡುತ್ತಿಲ್ಲ ಶಿಡ್ಲಘಟ್ಟ ತಾಲ್ಲೂಕಿನ ಭದ್ರನ ಕೆರೆಯನ್ನು ಹಲವು ವರ್ಷಗಳ ಹಿಂದೆಯೇ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಒತ್ತುವರಿ ತೆರವು ಮಾಡಿದ್ದರು. ಆದರೆ ನಗರಕ್ಕೆ ಅಂಟಿಕೊಂಡಂತಿರುವ ಗೌಡನ ಕೆರೆಯ ಒತ್ತುವರಿ ಮಾತ್ರ ತೆರವುಗೊಳಿಸಿಲ್ಲ. ಗೌಡನ ಕೆರೆಯನ್ನು ಹಲವಾರು ಮಂದಿ ಪ್ರಮುಖರೇ ಒತ್ತುವರಿ ಮಾಡಿಕೊಂಡಿದ್ದಾರೆ. ನಗರದ ಅಂಚಿನಲ್ಲಿರುವುದರಿಂದ ಇಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ತಹಶೀಲ್ದಾರ್‌ಗೆ ರೈತ ಸಂಘದಿಂದ ಮನವಿ ಸಲ್ಲಿಸಿದ್ದರೂ ಒತ್ತುವರಿ ತೆರವು ಮಾಡುತ್ತಿಲ್ಲ.
ರವಿಪ್ರಕಾಶ್ ರೈತ ಸಂಘ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ
ಜಾನುವಾರುಗಳಿಗೆ ಕಂಟಕ ನಾನು 8 ಹಸುಗಳನ್ನು ಸಾಕಿದ್ದು ಪ್ರತಿದಿನವೂ ಮೇಯಿಸಲೆಂದು ಗೌಡನಕೆರೆಯೊಳಗೆ ಕರೆದುಕೊಂಡು ಹೋಗುತ್ತೇನೆ. ನನ್ನೊಂದಿಗೆ ದೇಶದಪೇಟೆಯ ಕುಮಾರ್ 4 ಹಸುಗಳನ್ನು ತರುತ್ತಾರೆ. ಆನೂರಿನ ರೈತರೊಬ್ಬರು ಹತ್ತು ಹಸುಗಳನ್ನು ಕರೆತರುತ್ತಾರೆ. ಉಲ್ಲೂರುಪೇಟೆಯ ಅನಿಲ್ 20 ಕುರಿ ಮೇಕೆಗಳನ್ನು ಹೊಡೆದುಕೊಂಡು ಬರುತ್ತಾರೆ. ಇಲ್ಲಿ ಸುರಿಯುವ ತ್ಯಾಜ್ಯ ಕೆರೆಗಷ್ಟೇ ಅಲ್ಲ ನಮ್ಮ ಜಾನುವಾರುಗಳ ಪ್ರಾಣ ಕೂಡ ತೆಗೆಯುತ್ತಿದೆ
ಹಯಾತ್ ಖಾನ್ ಜೌಗುಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT