ಸೋಮವಾರ, ಜೂನ್ 21, 2021
30 °C
ನಗರಸಭೆಯಲ್ಲಿ ಪ್ರಾಬಲ್ಯ ಕಾಯ್ದುಕೊಂಡ ಕಾಂಗ್ರೆಸ್‌, ಬಹುಮತದ ಕನಸಿನಲ್ಲಿದ್ದ ಬಿಜೆಪಿ ಪಾಳೆಯಕ್ಕೆ ನಿರಾಸೆ

ಚಿಕ್ಕಬಳ್ಳಾಪುರ: ನಗರದಲ್ಲಿ ‘ಕೈ’ ಹಿಡಿದ ಮತದಾರ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೇ, ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೊರಹೊಮ್ಮಿದ ಬಿಜೆಪಿಯ ಅಚ್ಚರಿಯ ಫಲಿತಾಂಶ ಕಂಡು ಜಂಘಾಬಲವೇ ಕಳೆದುಕೊಂಡಿದ್ದ ಕಾಂಗ್ರೆಸ್ ಪಾಳೆಯದಲ್ಲಿ ಮಂಗಳವಾರ ಪ್ರಕಟವಾದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಫಲಿತಾಂಶ ಆತ್ಮವಿಶ್ವಾಸ ತುಂಬಿದೆ.

ಸ್ಥಳೀಯ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆ ಎದುರು ಸೋತು, ಹತಾಶೆಗೊಂಡಿದ್ದ ಕಾಂಗ್ರೆಸಿಗರು ನಗರದಲ್ಲಿ ಹೊಮ್ಮಿದ ಸಕಾರಾತ್ಮಕ ಫಲಿತಾಂಶದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಇನ್ನೊಂದೆಡೆ ಈ ಚುನಾವಣೆಯಲ್ಲೂ ಬಹುಮತ ಪಡೆದು ನಗರಸಭೆಯಲ್ಲಿ ಕೇಸರಿ ಪತಾಕೆ ಹಾರಿಸುವ ಕನಸಿನಲ್ಲಿದ್ದ ಬಿಜೆಪಿ ಪಾಳೆಯಕ್ಕೆ ನಗರದ ಮತದಾರ ತಣ್ಣೀರು ಎರಚಿದ್ದಾನೆ.

ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಸ್ಪರ್ಧಾ ಕಣದಲ್ಲಿ 101 ಅಭ್ಯರ್ಥಿಗಳು ತಮ್ಮ ‘ಅದೃಷ್ಟ’ದ ಪರೀಕ್ಷೆಗೆ ಮುಂದಾಗಿದ್ದರು. ಸುಧಾಕರ್ ಅವರ ಪಕ್ಷಾಂತರದಿಂದಾಗಿ ಬದಲಾದ ರಾಜಕೀಯ ಲೆಕ್ಕಾಚಾರ ತೀವ್ರ ತುರುಸಿನ ಸ್ಪರ್ಧೆ ಏರ್ಪಡಿಸಿತ್ತು. ಜತೆಗೆ ಮತದಾನದ ಹಿಂದಿನ ದಿನದ ಇರುಳು ಕಳೆದು ಬೆಳಗಾಗುವುದರ ಒಳಗೆ ನಗರದ ಗಲ್ಲಿಗಲ್ಲಿಗಳಲ್ಲಿ ದುಡ್ಡಿನ ಹೊಳೆಯನ್ನೇ ಹರಿಸಿತ್ತು ಎನ್ನುತ್ತಾರೆ ಸ್ಥಳೀಯ ಚುನಾವಣೆಯ ಒಳ ಮರ್ಮ ಅರಿತವರು.

ಜಿದ್ದಾಜಿದ್ದಿನ ಹೋರಾಟದಲ್ಲಿ 31 ಸ್ಥಾನಗಳ ಪೈಕಿ ಕಾಂಗ್ರೆಸ್‌ ಅಭ್ಯರ್ಥಿಗಳು 16 ಸ್ಥಾನಗಳಲ್ಲಿ ಗೆದ್ದು ಬೀಗಿದರೆ, ಬಿಜೆಪಿಗರು ಒಂಬತ್ತು ವಾರ್ಡ್‌ಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಪ್ರಬಲ ಎದುರಾಳಿಯಾಗಿದ್ದ ಜೆಡಿಎಸ್‌ ಈ ಚುನಾವಣೆಯಲ್ಲಿ ಕೇವಲ ಎರಡೇ ಸ್ಥಾನಕ್ಕೆ ಸೀಮಿತವಾಗುವ ಮೂಲಕ ಮೂಲೆಗುಂಪಾಗಿದೆ. ನಾಲ್ಕು ವಾರ್ಡ್‌ಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ.

2013ರ ಮಾರ್ಚ್‌ 7 ರಂದು ನಡೆದ ಈ ಹಿಂದಿನ ನಗರಸಭೆ ಚುನಾವಣೆಯಲ್ಲಿ ನಗರದ 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 10, ಜೆಡಿಎಸ್‌ ಒಂಬತ್ತು, ಬಿಎಸ್‌ಆರ್‌ ಕಾಂಗ್ರೆಸ್‌ ಒಂದು ಮತ್ತು 11 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಆ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ. ಈ ಚುನಾವಣೆಯಲ್ಲಿ ಶೂನ್ಯದಿಂದ ಸಾಧನೆ ಮಾಡಬೇಕಾದ ಸವಾಲು ಎದುರಿಸಿದ ಬಿಜೆಪಿ, ಸುಧಾಕರ್ ಅವರ ವರ್ಚಸ್ಸಿನಿಂದಾಗಿ ಒಂಬತ್ತು ಸ್ಥಾನ ಗಳಿಸಿರುವುದು ಸಹ ಸಣ್ಣ ಸಾಧನೆಯಲ್ಲ ಎನ್ನುತ್ತಾರೆ ರಾಜಕೀಯ ಪರಿಣಿತರು.

2013ರ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆದ್ದರೂ ಸುಧಾಕರ್ ಅವರ ತಂತ್ರಗಾರಿಕೆ ಎದುರು ಅಧಿಕಾರದ ಚುಕ್ಕಾಣಿ ಹಿಡಿಯಲು ವಿಫಲವಾಗಿತ್ತು. ತೆರೆಮರೆಯ ರಾಜಕೀಯ ಲೆಕ್ಕಾಚಾರದಿಂದಾಗಿ ಪಕ್ಷೇತರರ ಸಹಕಾರದೊಂದಿಗೆ ಕಾಂಗ್ರೆಸ್‌ ಅಧಿಕಾರ ಹಿಡಿದಿತ್ತು.

ಅಷ್ಟಕ್ಕೆ ತೃಪ್ತಿಪಡದ ಸುಧಾಕರ್ ಅವರು ನಗರಸಭೆಯಲ್ಲಿ ಜೆಡಿಎಸ್ ಶಕ್ತಿಗುಂದಿಸುವ ಉಪಾಯ ಮಾಡಿ, 2017ರ ಅಕ್ಟೋಬರ್‌ನಲ್ಲಿ ಜೆಡಿಎಸ್‌ನ ಆರು ಸದಸ್ಯರನ್ನು ಅನಾಮತ್ತಾಗಿ ಕಾಂಗ್ರೆಸ್‌ ಪಾಳೆಯದ ತೆಕ್ಕೆಗೆ ತೆಗೆದುಕೊಂಡು, ಜೆಡಿಎಸ್‌ ಸಂಖ್ಯಾಬಲ ಮೂರಕ್ಕೆ ಕುಸಿಯುವಂತೆ ಮಾಡಿದ್ದರು. ಉಪ ಚುನಾವಣೆ ಹೊಸ್ತಿಲಲ್ಲಿ ನಡೆದ ಪಕ್ಷಾಂತರ ಪರ್ವ ಕೂಡ ಜೆಡಿಎಸ್‌ಗೆ ಇನ್ನಿಲ್ಲದ ಗಾಯ ಮಾಡಿತ್ತು. ಪರಿಣಾಮ ಈ ಚುನಾವಣೆಯಲ್ಲಿ ಸಾಕಷ್ಟು ವಾರ್ಡ್‌ಗಳಲ್ಲಿ ಜೆಡಿಎಸ್ ಟಿಕೆಟ್ ಕೇಳುವವರೇ ಇಲ್ಲದಂತಾಗಿತ್ತು ಎನ್ನಲಾಗಿದೆ.

ಹೀಗಾಗಿ, ಸ್ಪರ್ಧಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟಿತ್ತು. ಕಾಂಗ್ರೆಸ್‌ 30 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ ಅಳೆದು ತೂಗಿ 24 ವಾರ್ಡ್‌ಗಳಲ್ಲಿ ತನ್ನ ಅಧಿಕೃತ ಉಮೇದುವಾರರನ್ನು ನಿಲ್ಲಿಸಿತ್ತು. ಇನ್ನು ಕೆಲವೆಡೆ ಸುಧಾಕರ್ ಅವರ ಬೆಂಬಲಿಗರು ಮುಸ್ಲಿಮರ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಕೇಸರಿ ಟಿಕೆಟ್‌ ನಯವಾಗಿ ನಿರಾಕರಿಸಿ, ಪಕ್ಷೇತರರಾಗಿ ನಿಂತಿದ್ದರು ಎನ್ನಲಾಗಿದೆ.

ಈ ಹಿಂದಿನ ಕೆಲ ಚುನಾವಣೆ ಕಂಡವರೆಲ್ಲ ಮತದಾರರಲ್ಲಿ ಆಸೆಬುರಕತನ ಹೆಚ್ಚಿದೆ, ದುಡ್ಡು ಸುರಿದರೆ ಸಾಕು ಯಾವುದೇ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಎಂದೆಲ್ಲ ವಿಶ್ಲೇಷಿಸುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ ಮತದಾರ ಪ್ರಭು ನೀಡಿದ ಫಲಿತಾಂಶ ಆ ಮಾತನ್ನು ಸುಳ್ಳು ಮಾಡಿದೆ.

ಸುಧಾಕರ್ ಅವರೇ ಖುದ್ದಾಗಿ ಪ್ರತಿ ವಾರ್ಡ್‌ಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ, ನಿವೇಶನ, ಮನೆ ನೀಡುವ ಭರವಸೆ ನೀಡಿದರೂ ಮತದಾರರು ಬಿಜೆಪಿಗೆ ಅಧಿಕಾರ ಕೊಡಲು ಮುಂದಾಗಿಲ್ಲ. ಈ ಫಲಿತಾಂಶ ಎಲ್ಲ ರಾಜಕೀಯ ಪಕ್ಷದವರಿಗೂ ಒಂದು ಉತ್ತಮ ಪಾಠದಂತಿದೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು