ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಾದರೂ ಮತದಾರರು ಪ್ರಜ್ಞಾವಂತರಾಗಬೇಕಿದೆ

ಡಿವೈಎಫ್‍ಐ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ‘ರಾಜಕೀಯದ ವ್ಯಾಪಾರೀಕರಣ ಮತ್ತು ದೇಶದ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣ ಆಯೋಜನೆ
Last Updated 22 ಜುಲೈ 2019, 19:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬರಗಾಲ, ರೈತರ ಆತ್ಮಹತ್ಯೆ, ನಿರುದ್ಯೋಗದ ವಿಚಾರದಲ್ಲಿ ಈವರೆಗೆ ಒಬ್ಬೇ ಒಬ್ಬ ಜನಪ್ರತಿನಿಧಿ ರಾಜೀನಾಮೆ ನೀಡಿಲ್ಲ. ಆದರೆ ಇವತ್ತು ಶಾಸಕರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಐಷಾರಾಮಿ ರೆಸಾರ್ಟ್‌ಗಳಲ್ಲಿ ಬಚ್ಚಿಟ್ಟುಕೊಳ್ಳುವ ಸಂಸ್ಕೃತಿ ಆರಂಭಿಸಿದ್ದಾರೆ. ಇನ್ನಾದರೂ ಮತದಾರರು ಪ್ರಜ್ಞಾವಂತರಾಗಬೇಕಿದೆ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ರಾಜಕೀಯದ ವ್ಯಾಪಾರೀಕರಣ ಮತ್ತು ದೇಶದ ಮುಂದಿರುವ ಸವಾಲುಗಳು’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಂವಿಧಾನದ ಆಶಯದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಜನರಿಂದ ಶಾಸಕಾಂಗ ಸ್ಥಾನಕ್ಕೆ ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಹಿತಾಸಕ್ತಿಗಳಿಗಾಗಿ ಸಂವಿಧಾನದ ಆಶಯ ಮಣ್ಣುಪಾಲು ಮಾಡುವ ಕೆಲಸ ಮಾಡುತ್ತಿದ್ದಾರೆ. ಏಕಪಕ್ಷೀಯವಾಗಿ ಸರ್ವಾಧಿಕಾರದ ಧೋರಣೆ ಹೇರುತ್ತಿರುವವರನ್ನು ನಾವ್ಯಾರೂ ಗುರುತಿಸಲು ಪ್ರಯತ್ನಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾಗತೀಕರಣ ಪ್ರಭಾವದ ಬಳಿಕ ರಾಜಕೀಯ ಮಾತ್ರವಲ್ಲದೇ ಎಲ್ಲ ರಂಗಗಳೂ ವ್ಯಾಪಾರೀಕರಣಗೊಳ್ಳುತ್ತಿವೆ. ಅದರೊಂದಿಗೆ ಹಣ ಇದ್ದರೆ ಬೆಲೆ ಎಂಬಂತೆ ಜನರ ಮನಸುಗಳು ಕೂಡ ವ್ಯಾಪಾರೀಕರಣಗೊಂಡಿವೆ. ಪರಿಣಾಮ, ಹಣವಂತರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯುತ್ತಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ’ ಎಂದು ತಿಳಿಸಿದರು.

‘ಇವತ್ತು ಸಂಸತ್ತು, ವಿಧಾನಸೌಧ ಪ್ರವೇಶ ಮಾಡುವವರು ಜನರ ಸಮಸ್ಯೆಗಳನ್ನು ಪರಿಹರಿಸುವ ಆಲೋಚನೆ ಬೆಳೆಸಿಕೊಳ್ಳುತ್ತಿಲ್ಲ. ಕೇವಲ ಸ್ವಾರ್ಥಕ್ಕಾಗಿ ಆಡಳಿತ ನಡೆಸುತ್ತಿದ್ದಾರೆ. ಹಣ, ಜಾತಿ, ಧರ್ಮದಿಂದ ಪ್ರಜಾಪ್ರಭುತ್ವಕ್ಕೆ ಗಂಡಾತರ ಬರಲಿದೆ. ಇನ್ನಾದರೂ ಇದರ ಬಗ್ಗೆ ಯುವಜನತೆ ಗಂಭೀರ ಯೋಚನೆ ಮಾಡಬೇಕು. ಜನರಲ್ಲಿ ದೇಶದ ಭವಿಷ್ಯ ಕುರಿತು ಪ್ರಜ್ಞೆ, ಜವಾಬ್ದಾರಿ ಮೂಡಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ತೀವ್ರ ಬರಗಾಲ ಕಾಣಿಸಿಕೊಂಡಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರುತ್ತಿದೆ. ಜಾನುವಾರಗಳಿಗೆ ಮೇವು ಸಿಗುತ್ತಿಲ್ಲ. ಕಳೆದ 4 ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 4.5 ಹೆಚ್ಚಾಗಿದೆ. ಆರು ಕೋಟಿ ವಿದ್ಯಾವಂತರಿಗೆ ಉದ್ಯೋಗವಿಲ್ಲ’ ಎಂದು ಆರೋಪಿಸಿದರು.

‘ನಮ್ಮ ದೇಶದಲ್ಲಿ ಹಲವು ಭಾಷೆ, ಸಂಸ್ಕೃತಿ, ಧರ್ಮ ಮತ್ತು ಜಾತಿಗಳಿವೆ. ಆದರೆ, ಭಾರತದಲ್ಲಿ ಇತ್ತೀಚೆಗೆ ಒಂದೇ ಧರ್ಮ, ಒಂದೇ ಭಾಷೆ, ಏಕಪಕ್ಷ ಆಡಳಿತ, ಸರ್ವಾಧಿಕಾರ ವ್ಯವಸ್ಥೆ ಜಾರಿಗೊಳಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ’ ಎಂದು ಹೇಳಿದರು.

ಡಿವೈಎಫ್‌ಐ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಎಂ.ಹೇಮಚಂದ್ರ ಮಾತನಾಡಿ, ‘ಯುವ ಜನತೆ ಮೇಲೆ ದೇಶದ ಭವಿಷ್ಯ ನಿಂತಿದೆ. ಈಗಿನ ಚುನಾವಣೆಗಳು ಹಣದ ಮೇಲೆ ನಡೆಯುತ್ತಿದೆ. ನಿರುದ್ಯೋಗ, ಬಡತನ, ಅನಕ್ಷರತೆ ಹೋಗಲಾಡಿಸಲು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಹೀಗಾಗಿ ದೇಶದ ಭವಿಷ್ಯವನ್ನು ರೂಪಿಸಲು ಯುವ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು. ಡಿವೈಎಫ್‍ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಯ, ಜಿಲ್ಲಾ ಕಾರ್ಯದರ್ಶಿ ಮಧು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT