ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಗಪ್ಪನಹಳ್ಳಿಯು ಸುಂದರವಾದ ಬೆಟ್ಟಗುಡ್ಡಗಳಿಂದ ಆವೃತವಾದ ತಾಣವಾಗಿದೆ.
ಈ ಗ್ರಾಮದ ಬಸವನ ಮಂಟಪದ ಅನತಿ ದೂರದಲ್ಲಿ ವಿಶಾಲವಾದ ಹೊಲದಲ್ಲಿ ಕಲ್ಲಿನಲ್ಲಿ ನಿರ್ಮಿಸಲಾಗಿರುವ ಬೃಹದಾಕಾರದ ಕೊಳವಿದೆ. ಅದನ್ನು ಏಳು ಬಾಗಿಲ ಬಾವಿ ಎನ್ನುತ್ತಾರೆ. ಗಮನಾರ್ಹವಾದ ಕಲ್ಲಿನ ರಚನೆಯನ್ನು ಹೊಂದಿರುವ ಈ ಕೊಳವನ್ನು ನೋಡಿದಾಗ ಒಂದು ಕಾಲದಲ್ಲಿ ಸುಸ್ಥಿತಿಯಲ್ಲಿತ್ತೆಂದು ಹೇಳಬಹುದು. ವಿಶಿಷ್ಟ ಕೆತ್ತನೆಯ ಸೋಪಾನದ ಸಾಲಿನಿಂದ ಕೂಡಿದ ಈ ಕೊಳವು ಗತಕಾಲದ ಜಲಾಶಯಗಳ ವೈಭವದ ಸಂಕೇತವಾಗಿದೆ.
14ನೇ ಶತಮಾನದಲ್ಲಿ, ಸದೇಶ್ವರ ಶಿವಾಚಾರ್ಯರೆಂಬ ಮಹನೀಯರ ಸಲುವಾಗಿ ಮುಪ್ಪ ಭೂಪತಿಯೆಂಬ ವಿಜಯನಗರದ ಪಾಳೆಯಗಾರನು, ಹತ್ತಿರದ ಶಿವಾಲಯದ ಅಭಿಷೇಕ ಕೈಂಕರ್ಯಕ್ಕೆಂದು ಈ ಬಾವಿಯನ್ನು ಕಟ್ಟಿದನೆಂದು ಇಲ್ಲಿ ದೊರೆತ ಶಾಸನ ಹೇಳುತ್ತದೆ.
ಇಂಗ್ಲಿಷ್‌ನ ‘ಎಲ್’ ಆಕಾರದ ಈ ನೆಲಬಾವಿಯ ಕಲ್ಲಿನ ಕಂಬಗಳ ಮೇಲೆ ಕಂಬಳಿ, ಕೋಲುಗಳನ್ನು ಹಿಡಿದ ಕಾವಲುಗಾರರನ್ನು ಕೆತ್ತಲಾಗಿದೆ. ಬಾವಿಯ ಒಳಭಾಗಕ್ಕೆ ಇಳಿಯುವಲ್ಲಿ ಕಲ್ಲಿನ ತೊಲೆಯ ಮೇಲೆ ಗಣಪತಿಯ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ. ಬಾವಿಯ ಒಳಸುತ್ತಿನ ಕಲ್ಲಿನ ನಿರ್ಮಾಣವು ಆಕರ್ಷಕವಾಗಿದೆ. ಕಟ್ಟಡದ ಮೇಲ್ಪಂಕ್ತಿಯ ಕಲ್ಲುಸಾಲಿನ ಮೇಲೆ ಬಗೆಬಗೆಯ ಪ್ರಾಣಿ, ಪಕ್ಷಿ, ಗಿಡ, ಮರಗಳ, ಮಂಗಗಳ, ಮಾನವರ ಉಬ್ಬು ಶಿಲ್ಪಾಲಂಕಾರಗಳು ಕಂಡುಬರುತ್ತವೆ.
ಮರಗಳ ಕೊಂಬೆಗಳ ಮೇಲೆ ನರ್ತನ ಮಾಡುತ್ತಿರುವ ಮಯೂರಗಳೊಂದಿಗೆ ಹಾರುತ್ತಿರುವ ಮಂಗಗಳ ದೃಶ್ಯವು ಮನೋಜ್ಞವಾಗಿದೆ. ಇಲ್ಲಿರುವ ಕಾಳಿಂಗ ಮರ್ದನನ ಕೆತ್ತನೆಯೂ ವಿಶಿಷ್ಠವಾಗಿದೆ. ಜಲಚರಗಳಾದ ಮತ್ಸ್ಯಕೂರ್ಮಗಳನ್ನು ಕೆತ್ತಲಾಗಿದೆ. ವಿವಿಧ ರೀತಿಯ ತಪೋಮಾರ್ಗಗಳಲ್ಲಿ ಸಾಧನೆ ಮಾಡುತ್ತಿರುವ ಋಷಿ ಮುನಿಗಳನ್ನೂ ಸಹ ಈ ಬಾವಿಯ ಮೇಲ್ಪಂಕ್ತಿಗಳಲ್ಲಿ ಸುಂದರವಾಗಿ ಬಿಡಿಸಲಾಗಿದೆ.
‘ಕಿರಾತಾರ್ಜುನೀಯ ಪ್ರಸಂಗ’ವನ್ನು ತಿಳಿಸುವ ಕೆತ್ತನೆ ಮನೋಜ್ಞವಾಗಿದೆ. ವೀರ ಅರ್ಜುನನ ಬೆನ್ನನ್ನು ನೋಡಬೇಕೆಂಬ ಪಾರ್ವತಿಯ ಬಯಕೆಯನ್ನು ಈಡೇರಿಸಲು ಶಿವನು ಬೇಟೆಗಾರನ ರೂಪದಲ್ಲಿ ಬರುತ್ತಾನೆ. ಹಂದಿಗೆ ಬಾಣ ಹೊಡೆಯುತ್ತಾನೆ. ಅದೇ ಸಮಯದಲ್ಲಿ ಅರ್ಜುನನೂ ಹಂದಿಗೆ ಬಾಣವನ್ನು ಬಿಡುತ್ತಾನೆ. ನಂತರ ಇಬ್ಬರ ನಡುವೆ ಯುದ್ಧ ನಡೆಯುತ್ತದೆ. ಮಲ್ಲಯುದ್ಧದಲ್ಲಿರುವಾಗ ಶಿವನನ್ನು ಕೆಳಗೆ ಬೀಳಿಸಿದ ಅರ್ಜುನನ ಬೆನ್ನು ಪಾರ್ವತಿಗೆ ಕಾಣಿಸುತ್ತದೆ. ನಂತರ ಅರ್ಜುನನು ಪಶ್ಚಾತ್ತಾಪದಿಂದ ಶಿವ ಪಾರ್ವತಿಯರ ಶರಣು ಹೋಗಿ ಅವರಿಂದ ವರ ಪಡೆಯುತ್ತಾನೆ. ವಿಶೇಷವೆಂದರೆ ಇಲ್ಲಿ ಪಾರ್ವತಿಯು ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡುತ್ತಿದ್ದಾಳೆ.
‘ವಾಮನ ಅವತಾರ’ದ ಶಿಲ್ಪವೂ ಅಪರೂಪದ್ದಾಗಿದೆ. ಇಲ್ಲಿನ ಶಿಲ್ಪದಲ್ಲಿ ಬಲಿ ಚಕ್ರವರ್ತಿಯ ಕೈಯಲ್ಲಿ ವಾಮನ ತನ್ನ ಪಾದವನ್ನಿಟ್ಟಿದ್ದಾನೆ. ಹಿಂದೆ ಶೈವ ಮುನಿಗಳು ತಮ್ಮ ಜಟೆಯನ್ನು ತಲೆಗೆ ಪೇಟದಂತೆ ಸುತ್ತಿಕೊಂಡು ಅದರಲ್ಲಿ ತಾವು ತ್ರಿಕಾಲ ಪೂಜಿಸುವ ಲಿಂಗವನ್ನು ಇಟ್ಟುಕೊಳ್ಳುತ್ತಿದ್ದರಂತೆ. ಈ ರೀತಿಯ ಮುನಿಯ ಅಭಯ ನೀಡುವ ಭಂಗಿಯ ಅಪರೂಪದ ಶಿಲ್ಪವಿದೆ. ಕೋಲಾರಮ್ಮನ ದೇವಾಲಯ ಮತ್ತು ನಂದಿ ದೇವಸ್ಥಾನದಲ್ಲೂ ಈ ರೀತಿ ಶಿಲ್ಪವಿದೆ.
‘ಈ ರೀತಿಯ ಶಿಲ್ಪಕಲೆಯಿರುವ ಬಾವಿಯು ಜಿಲ್ಲೆಯಲ್ಲಿ ಇರುವುದು ಇದೊಂದೇ. ಆಂಧ್ರದ ಅನಂತಪುರ ಜಿಲ್ಲೆಯ ಉರವುಕೊಂಡ ಎಂಬಲ್ಲಿ ಹಾಗೂ ಅದೇ ಜಿಲ್ಲೆಯ ರತ್ನಗಿರಿ ಪ್ರಾಂತ್ಯದಲ್ಲೂ ಈ ಬಾವಿಯನ್ನು ಹೋಲುವ ಬಾವಿಗಳಿವೆ’ ಎಂದು ಶಾಸನತಜ್ಞ ಡಾ.ಶೇಷಶಾಸ್ತ್ರಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.