ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾದ ಆಲೂಗಡ್ಡೆ ಬಿತ್ತನೆ: ಬೆಲೆಗೆ ಕಂಗೆಟ್ಟ ಆಲೂಗಡ್ಡೆ ಬೆಳೆಗಾರರು

ಅತಿವೃಷ್ಟಿ ಕಾರಣಕ್ಕೆ ಪಂಜಾಬ್‌ನಲ್ಲಿ ಬಿತ್ತನೆ ಗಡ್ಡೆಯ ಉತ್ಪಾದನೆ ಕುಸಿತ
Last Updated 5 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳಪೆ ಬೀಜ, ಸತತ ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ, ಹೆಚ್ಚಿದ ಉತ್ಪಾದನಾ ವೆಚ್ಚ... ಹೀಗೆ ವಿವಿಧ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ರೈತರು ಆಲೂಗಡ್ಡೆ ಬೆಳೆ ಬಿಟ್ಟು, ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುತ್ತಿರುವಾಗಲೇ, ಈ ಬಾರಿ ಆಲೂಗಡ್ಡೆ ಬಿತ್ತನೆ ಬೀಜದ ಬೆಲೆ ಗಗನಮುಖಿಯಾಗಿ ರೈತರನ್ನು ಮತ್ತಷ್ಟು ಕಂಗೆಡಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಹಲವು ಬಾರಿ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಕೊಳ್ಳುವವರಿಲ್ಲದೆ ಕೊಳೆತು ಹೋದ ಉದಾಹರಣೆಗಳಿವೆ. ಆದರೆ ಈ ಬಾರಿ ಅತಿವೃಷ್ಟಿ ಕಾರಣಕ್ಕೆ ಪಂಜಾಬ್‌ನಲ್ಲಿ ಬಿತ್ತನೆ ಗಡ್ಡೆಯ ಉತ್ಪಾದನೆ ತೀವ್ರವಾಗಿ ಕುಸಿದ ಕಾರಣಕ್ಕೆ ಜಿಲ್ಲೆಗೆ ಬರುವ ಬಿತ್ತನೆ ಗಡ್ಡೆಯ ಆವಕದ ಪ್ರಮಾಣ ಇಳಿಮುಖವಾಗಿ, ಈ ವರ್ಷ ಬೆಲೆ ತೀವ್ರವಾಗಿ ಏರಿಕೆಯಾಗಿದೆ.

ಹಿಂದೆಲ್ಲ ಗರಿಷ್ಠ ₹2,000ರ ವರೆಗೆ ಮಾರಾಟವಾಗುತ್ತಿದ್ದ 50 ಕೆ.ಜಿ ಬಿತ್ತನೆ ಬೀಜದ ಮೂಟೆಯ ದರ ಈ ಬಾರಿ ₹3,000 ರಿಂದ ₹5,000 ವರೆಗೆ ಮಾರಾಟವಾಗುತ್ತಿದೆ. ಮೊದಲೇ ಕೋವಿಡ್-19 ಸೃಷ್ಟಿಸಿದ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಹಾಸನ ಬಿಟ್ಟರೆ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಎರಡನೇ ಅತಿದೊಡ್ಡ ಆಲೂಗಡ್ಡೆ ಬಿತ್ತನೆ ಗಡ್ಡೆ ಮಾರುಕಟ್ಟೆ ಹೊಂದಿದೆ. ಜಿಲ್ಲೆಯಲ್ಲಿ ಸುಮಾರು 5,000 ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತದೆ. ಕುಪ್ರಿ ಜ್ಯೋತಿ ತಳಿ ಈ ಭಾಗದಲ್ಲಿ ಬೆಳೆಯಲಾಗುತ್ತದೆ. ಹಿಂಗಾರು ಋತುವಿನಲ್ಲಿ (ಸೆಪ್ಟೆಂಬರ್‌– ಜನವರಿ 15ರ ವರೆಗೆ) ಆಲೂಗಡ್ಡೆ ಬಿತ್ತನೆ ಕಾರ್ಯ ನಡೆಯುತ್ತದೆ.

ಜಿಲ್ಲೆಯಲ್ಲಿ ಬಿತ್ತನೆ ಗಡ್ಡೆ ಮಾರಾಟ ಮಾಡುವ 40 ವರ್ತಕರಿದ್ದಾರೆ. ಪ್ರತಿ ವರ್ಷ 600 ರಿಂದ 800 ಟ್ರಕ್‌ (ಒಂದು ಟ್ರಕ್ ಸರಾಸರಿ 25 ಟನ್) ಗಡ್ಡೆ ಮಾರಾಟವಾಗುತ್ತದೆ. ಸ್ಥಳೀಯರಲ್ಲದೆ ಮಂಡ್ಯ, ತುಮಕೂರು, ಆಂಧ್ರಪ್ರದೇಶದ ಅನಂತಪುರ, ಧರ್ಮಾವರಂ, ಗೋರಂಟ್ಲಾ, ಕದಿರಿ ಕಡೆಗಳಿಂದ ಸಹ ರೈತರು ಜಿಲ್ಲೆಗೆ ಬಂದು ಬಿತ್ತನೆ ಗಡ್ಡೆ ಖರೀದಿಸುತ್ತಾರೆ.

ಈ ಬಾರಿ ಉತ್ಪಾದನೆ ಕುಸಿತದ ಕಾರಣಕ್ಕೆ ಜಿಲ್ಲೆಗೆ ಸುಮಾರು 400 ಟ್ರಕ್ ಗಡ್ಡೆ ಪೂರೈಕೆಯಾದರೆ ಹೆಚ್ಚು ಎಂಬ ಅಂದಾಜು ವರ್ತಕರದು. ಈ ಬೇಡಿಕೆ–ಪೂರೈಕೆಯ ಅಸಮತೋಲನ ಆಲೂಗಡ್ಡೆ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ. ಸಾಕಷ್ಟು ರೈತರು ಆಲೂಗಡ್ಡೆಗೆ ಬೆಳೆಯಲು ತಗುಲುವ ಖರ್ಚಿನ ಲೆಕ್ಕ ಹಾಕಿ ಬೆಳೆಯುವುದೇ ಬಿಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ಬಾರಿ ಜಿಲ್ಲೆಯಲ್ಲಿ ಶೇ40 ರಷ್ಟು ಬೆಳೆಗಾರರು ಆಲೂಗಡ್ಡೆಯಿಂದ ವಿಮುಖರಾಗುತ್ತಿದ್ದಾರೆ ಎನ್ನಲಾಗಿದೆ.

ರೈತರು ಕಂಗಾಲಾಗಿ ಆತಂಕ್ಕೆ ಈಡಾದರೂ ಇನ್ನೊಂದೆಡೆ ವರ್ತಕರು ಇದೊಂದು ಮಾರುಕಟ್ಟೆಯ ಸಾಮಾನ್ಯ ವಿದ್ಯಮಾನ ಎನ್ನುವಂತೆ ಹೇಳುತ್ತಾರೆ. ‘ಪಂಜಾಬ್‌ನಲ್ಲಿ ಅಧಿಕ ಮಳೆಯಿಂದಾಗಿ ಬಿತ್ತನೆ ಗಡ್ಡೆ ಉತ್ಪಾದನೆ ಕುಂಠಿತಗೊಂಡ ಪರಿಣಾಮ ಬೆಲೆ ಏರಿಕೆಯಾಗಿದೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಇಂತಹ ವಿದ್ಯಮಾನ ನಡೆಯುತ್ತದೆ’ ಎನ್ನುತ್ತಾರೆ ನಗರದ ಆಲೂಗಡ್ಡೆ ವರ್ತಕ ನಾರಾಯಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT