ಚಿಕ್ಕಬಳ್ಳಾಪುರ: ‘ಕತ್ತಿ, ಚಾಕು, ಮಚ್ಚು, ಗುದ್ದಲಿ, ಚನಿಕೆ, ಹಾರೆ, ಕುಡಿಗೋಲು, ಕುಠಾಣಿ ಪ್ರತಿ ದಿನ ಹೊತ್ತು ಮಾರಲು ತರುತ್ತೇನೆ. ಯಥಾ ರೀತಿ ಅವು ಪುನಃ ಮನೆಗೆ ಒಯ್ಯುತ್ತೇನೆ. 6 ತಿಂಗಳಿಗೆ 1 ಗುದ್ದಲಿ ಮಾರಾಟವಾದರೆ ಪುಣ್ಯ. ಇಲ್ಲದಿದ್ದರೆ ಬರಿಗೈಯಲ್ಲಿ ಮರಳಿ, ಒಂದೆರಡು ತುತ್ತು ತಿಂದುಂಡು ಮಲಗೋದು ಇದ್ದೇ ಇದೆ...’ ನಗರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಎದುರು ಕೂತ ಪೆದ್ದನಾರಾಯಣಾಚಾರಿ ಹೇಳಿಕೊಂಡ ಮನದಾಳದ ನೋವಿದು.

ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಎಲ್ಲಿಯೂ ಹೋಗದೇ ಒಂದೇ ಜಾಗದಲ್ಲಿ ಕುಳಿತು ಕೃಷಿ ಮತ್ತು ತೋಟಗಾರಿಕೆ ಉಪಕರಣಗಳನ್ನು ಅವರು ಮಾರುತ್ತಾರೆ.
ಸೂರ್ಯನ ಪ್ರಕೋಪ, ಮಳೆಯ ಆರ್ಭಟ ಮತ್ತು ಚಳಿಯ ನಡುಕದ ಮಧ್ಯೆಯೇ ಹಲವು ವರ್ಷಗಳಿಂದ ಈ ಕಾಯಕ ನಡೆಸಿಕೊಂಡು ಬಂದಿದ್ದಾರೆ. ಇದು ಬಿಟ್ಟರೆ, ಬೇರೆ ಕೆಲಸ ಅವರಿಗೆ ಬಾರದು.

ಚಿಕ್ಕಬಳ್ಳಾಪುರದಿಂದ ಸುಮಾರು 5 ಕಿ.ಮೀ. ದೂರವಿರುವ ಗುಂಡ್ಲಗುರ್ಕಿ ಗ್ರಾಮದ ನಿವಾಸಿಯಾದ ಪೆದ್ದನಾರಾಯಣಾಚಾರಿ ಅವರ ಬಳಿ ಅಗತ್ಯ ಉಪಕರಣಗಳಿವೆ. ದರವೂ ಹೆಚ್ಚೇನಲ್ಲ. ಆದರೆ ಕೊಳ್ಳುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ತೋಟಗಳಲ್ಲಿ ಮರದ ರಂಬೆ ಕಡಿಯಲು, ಕೊಯ್ಯಲು ಮಚ್ಚು, ಹುಲ್ಲು ಕೊಯ್ಯಲು ಕುಡುಗೋಲು ಬೇಕು. ಕಾಲುವೆ ತೋಡಲು ಹಾರೆ ಅಥವಾ ಚನಿಕೆ ಬೇಕು. ತಿಪ್ಪೆಯಿಂದ ಗೊಬ್ಬರ ಕೆದಕಲು ಗುದ್ದಲಿ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕೆಲಸ ಕಡಿಮೆ ಆಗಿದೆ. ವಿವಿಧ ಕೆಲಸ ನಿರ್ವಹಿಸಲು ಯಂತ್ರಗಳು ಬಂದಿವೆ. ಈ ಉಪಕರಣಗಳನ್ನು ಕೇಳುವವರೇ ಇಲ್ಲ ಎಂದು ಅವರು ನೊಂದು ನುಡಿದರು.

ಕುಲುಮೆಯಿಂದ ರೈತರಿಗೆ ಬಳಕೆಯಾಗುವ ಉಪಕರಣ ತಯಾರಿಸಿ ನಗರಕ್ಕೆ ತಂದು ಮಾರುತ್ತೇನೆ. ಆರಂಭದಲ್ಲಿ ವ್ಯಾಪಾರ ಚೆನ್ನಾಗಿ ನಡೆಯಿತು, ಲಾಭ ಬಂತು. ಕೆಲ ರೈತರು ತಮಗೆ ಬೇಕಾದ ಸಲಕರಣೆಗೆ ಮುಂಗಡ ಹಣ ಕೊಟ್ಟು ಖರೀದಿಸಿದರು. ಆದರೆ ನಂತರದ ದಿನಗಳಲ್ಲಿ ಎಲ್ಲವೂ ಬದಲಾಯಿತು ಎಂದು ತಿಳಿಸಿದರು. ಬೇಸಾಯ ಪದ್ಧತಿ ಬದಲಾದಂತೆ ಹೊಸ ಉಪಕರಣ ಮತ್ತು ಯಂತ್ರಗಳ ಬಳಕೆ ಹೆಚ್ಚಾಯಿತು. ಈ ಉಪಕರಣಗಳತ್ತ ಜನರ ಒಲವು ಕಡಿಮೆಯಾಯಿತು. ಅಡುಗೆಮನೆ ಒಡತಿಯರು ಝಗಮಗ ವಸ್ತುಗಳನ್ನು ಅಪೇಕ್ಷಿಸುತ್ತಾರೆ. ನಾವು ತಯಾರಿಸುವ, ಕೊಂಡು ತಂದು ಮಾರುವ ಉಪಕರಣಗಳು ಆಕರ್ಷಣೆ ಉಳಿಸಿಕೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘20 ವರ್ಷದ ಹಿಂದೆ ಪರಿಸ್ಥಿತಿ ಭಿನ್ನವಾಗಿತ್ತು. ಕೃಷಿ ಚಟುವಟಿಕೆಯು ಉತ್ತುಂಗ ಸ್ಥಿತಿಯಲ್ಲಿದ್ದ ಕಾಲವದು. ಎಲ್ಲ ರೈತರು ಸೇರಿ ಹಣ ಹೊಂದಿಸಿಕೊಂಡು ಕೃಷಿ ಉಪಕರಣ ಖರೀದಿಸುತ್ತಿದ್ದೆವು. ಮುಂಗಡವಾಗಿ ಹಣ ನೀಡಿದರೂ 2 ಅಥವಾ 3 ವಾರಗಳಲ್ಲಿ ಉಪಕರಣ ಸಿದ್ಧವಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಗಿಂತ ರೈತರು ಬೇರೆ ಪದ್ಧತಿಯತ್ತ ಒಲವು ತೋರತೊಡಗಿದ್ದಾರೆ’ ಎಂದು ರೈತ ಕೊಳವನಹಳ್ಳಿ ತಿಮ್ಮಪ್ಪ ತಿಳಿಸಿದರು.

ರೈತರಿಗೆ ಈಗ ಆಧುನಿಕತೆಯ ಸ್ಪರ್ಶವಾಗಿದೆ. ಬೆಳೆಗಳಿಗೆ ನೀರು ಹಾಯಿಸಲು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು. ರಂಬೆ, ಕೊಂಬೆ ಕತ್ತರಿಸಲು ಗರಗಸ ಬಳಸುತ್ತಾರೆ. ಮಣ್ಣು, ಮರಳು ತುಂಬಿಸಲು ಜೆಸಿಬಿ ವಾಹನ ಬಳಕೆ ಸಾಮಾನ್ಯವಾಗಿದೆ. ಹೀಗಾಗಿ ಸಾಂಪ್ರದಾಯಿಕ ಉಪಕರಣಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.