ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಟ್ಟಿಗೆ’ಯಾದ ಹೊಸ ಪಶು ಆಸ್ಪತ್ರೆ!

Last Updated 3 ಸೆಪ್ಟೆಂಬರ್ 2017, 8:55 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಆಂಧ್ರ ಗಡಿಭಾಗದಲ್ಲಿರುವ ತಾಲ್ಲೂಕಿನ ಬಿಳ್ಳೂರು ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯ ನೂತನ ಕಟ್ಟಡ ಈವರೆಗೆ ಸಾರ್ವಜನಿಕರ ಸೇವೆಗೆ ಬಳಕೆಯಾಗದೆ, ದೂಳು ತಿನ್ನುತ್ತ ಕೊಟ್ಟಿಗೆಯಂತಾಗಿದೆ.

ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರನ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಬಿಳ್ಳೂರು ಹೊರವಲಯದಲ್ಲಿ ₹8.62 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಟ್ಟಡ ಅನುಪಯುಕ್ತವಾಗಿದೆ. ಸದ್ಯ ಶಿಥಿಲಾವಸ್ಥೆಯಲ್ಲಿರುವ ಹಳೆ ಕಟ್ಟಡದಲ್ಲಿಯೇ ಪಶು ಆಸ್ಪತ್ರೆ ನಡೆಯುತ್ತಿದೆ.

ಎರಡು ವರ್ಷದ ಹಿಂದೆ ಈ ಕಟ್ಟಡದ ಕಾಮಗಾರಿ ಮುಗಿಸಿದ ಗುತ್ತಿಗೆಗಾರ ಹಸ್ತಾಂತರಿಸಿಕೊಳ್ಳುವಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆಸ್ಪತ್ರೆಗೆ ತೆರಳಲು ಸರಿಯಾದ ರಸ್ತೆ ಇಲ್ಲದೆ, ಕುಡಿಯುವ ನೀರು, ವಿದ್ಯುತ್, ಶೌಚಾಲಯದಂತಹ ಮೂಲಸೌಕರ್ಯಗಳು ಇಲ್ಲ ಎನ್ನುವ ನೆವ ಹೇಳಿ ಅಧಿಕಾರಿಗಳು ಕಟ್ಟಡವನ್ನು ಹಸ್ತಾಂತರಿಸಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಅತ್ತ ಗುತ್ತಿಗೆದಾರನ ಸುಳಿವಿಲ್ಲದಂತೆ, ಇತ್ತ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನದಿಂದ ಸದ್ಯ ನೂತನ ಕಟ್ಟಡದ ಸ್ಥಿತಿ ಅನಾಥ ಮಗುವಿನಂತಾಗಿದೆ.

ಈ ಹಿಂದೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ರಸ್ತೆ ನಿರ್ಮಿಸಿ ಕೊಡುವಂತೆ ಬಿಳ್ಳೂರು ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ಪಂಚಾಯಿತಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ನಡೆದ ಕಾಮಗಾರಿಯೊಂದರ ಮಣ್ಣನ್ನು ಆಸ್ಪತ್ರೆಗೆ ದಾರಿಯಲ್ಲಿ ಸುರಿದು ಹೋಗಿದ್ದು, ಈವರೆಗೆ ಸರಿಯಾಗಿ ರಸ್ತೆ ಅಭಿವೃದ್ಧಿಪಡಿಸುವ ಕೆಲಸ ನಡೆದಿಲ್ಲ.

ದಿನೇ ದಿನೇ ಹೊಸ ಕಟ್ಟಡ ಸುತ್ತ ಗಿಡ–ಗಂಟಿ, ಪೊದೆಗಳು ಬೆಳೆಯುತ್ತಿದ್ದು, ಸಾರ್ವಜನಿಕರ ಸೇವೆಗೆ ಸದ್ಭಳಕೆಯಾಗಬೇಕಿದ್ದ ಕಟ್ಟಡ ಪುಂಡ, ಪೋಕರಿಗಳ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದೆ. ಇತ್ತೀಚೆಗಷ್ಟೇ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಈ ಆಸ್ಪತ್ರೆಯನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸುವಂತೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ.

ಬಿಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 13 ಗ್ರಾಮಗಳ ಜನರು ಅವಲಂಬಿಸಿರುವ ಏಕೈಕ ಆಸ್ಪತ್ರೆಗೆ ಇಂತಹ ದುರ್ಗತಿ ಬಂದಿರುವುದು ಪಶುಪಾಲನೆ ನಂಬಿಕೊಂಡು ಜೀವನ ನಡೆಸುವವರಲ್ಲಿ ಬೇಸರ ತಂದಿದೆ. ಇನ್ನಾದರೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಆಸ್ಪತ್ರೆಯ ಹೊಸ ಕಟ್ಟಡವನ್ನು ಬಳಕೆ ಮಾಡಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT