ಗೌರಿಬಿದನೂರು: ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ದೇಶದ ಹೋರಾಟಗಾರರ ತಾಲ್ಲೂಕುಮಟ್ಟದ ಚಳವಳಿಯ ಕೇಂದ್ರಗಳಲ್ಲಿ ಒಂದಾಗಿದ್ದ ವಿದುರಾಶ್ವತ್ಥವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೂ ಮತ್ತು ರಾಜಕೀಯಕ್ಕೂ ತುಂಬಾ ನಂಟು. ಅದರಲ್ಲೂ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರನ್ನು ಹೊಂದಿರುವ ಎಚ್.ನಾಗಸಂದ್ರಕ್ಕೂ ರಾಜಕಾರಣಕ್ಕೂ ಬಿಡಿಸಲಾಗದ ನಂಟು ಬೆಸೆದಿದೆ.

ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆಯಾದ ಎನ್.ಸಿ.ನಾಗಯ್ಯ ರೆಡ್ಡಿ ಅವರಿಂದ ಹಿಡಿದು ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಸತತ ಗೆಲುವಿನ ನಗೆ ಬೀರಿದ ಎನ್.ಎಚ್.ಶಿವಶಂಕರರೆಡ್ಡಿ ಅವರ ತವರೂರು ನಾಗಸಂದ್ರ.

ಒಂದು ಕಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ತಾಲ್ಲೂಕಿನ ಜೀವಾಳವಾಗಿದ್ದ ಉತ್ತರ ಪಿನಾಕಿನಿ ನದಿ ಬತ್ತಿ ಬರಿದಾದರೂ ನಾಗಸಂದ್ರದ ರಾಜಕೀಯ ‘ಪ್ರವಾಹ’ ಇಂದಿಗೂ ಕ್ಷೇತ್ರದ ತುಂಬಾ ಪ್ರವಹಿಸುತ್ತಲೇ ಇದೆ. ಆರೂವರೆ ದಶಕಗಳಲ್ಲಿ ಈ ಕ್ಷೇತ್ರದ ರಾಜಕಾರಣದ ನಾನಾ ಸ್ಥಿತ್ಯಂತರ, ಪಲ್ಲಟಗಳಿಗೆ ಕೇಂದ್ರಬಿಂದುವಾಗಿದ್ದು ಈ ಪುಟ್ಟ.

ಕಸಬಾ, ಮಂಚೇನಹಳ್ಳಿ, ತೊಂಡೇಬಾವಿ, ಹೊಸೂರು, ಡಿ.ಪಾಳ್ಯ ಮತ್ತು ನಗರಗೆರೆ ಹೋಬಳಿಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಕುರುಬ, ಹಿಂದೂ ಸಾದರ, ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ.

ಮತದಾರರಲ್ಲಿ ಬಹುಸಂಖ್ಯಾತರಾಗಿರುವ ಪರಿಶಿಷ್ಟರು ಇಲ್ಲಿ ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ವಂತ ನಿಲುವು ತೆಗೆದುಕೊಂಡಿಲ್ಲ. ಮೊದಲಿನಿಂದಲೂ ಪರಾವಲಂಬಿಗಳಾಗಿಯೇ ಉಳಿದುಕೊಂಡಿರುವ ಅವರು ನಾಗಸಂದ್ರದ ‘ರೆಡ್ಡಿ’ಗಳ ಪ್ರಭಾವದಿಂದ ಹೊರಬಂದು ರಾಜಕೀಯ ಶಕ್ತಿ ವೃದ್ಧಿಸಿಕೊಳ್ಳುವ ಸಾಹಸ ಮಾಡಿದ ಉದಾಹರಣೆಗಳಿಲ್ಲ.

ರಾಜ್ಯದಲ್ಲಿ 1952ರಿಂದ 2013ರ ವರೆಗೆ ನಡೆದ 14 ಸಾರ್ವತ್ರಿಕ ಚುನಾವಣೆಗಳ ಪೈಕಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ (7) ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೊದಲ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಾಗಯ್ಯ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಬಳಿಕ 1957ರಿಂದ ಸತತ ಮೂರು ಅವಧಿಗೆ ಕೆ.ಎಚ್. ವೆಂಕಟರೆಡ್ಡಿ (1957), ಆರ್.ಎನ್. ಲಕ್ಷ್ಮಿಪತಿ (1962–67) ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಪಾರುಪತ್ಯ ಸ್ಥಾಪಿಸಿದ್ದರು. 1972ರಲ್ಲಿ ವಿ.ಕೃಷ್ಣರಾವ್ ಅವರು ಇಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ನೆಲೆ ಕಂಡುಕೊಳ್ಳುವಂತೆ ಮಾಡಿದರು.

1969ರಲ್ಲಿ ಕಾಂಗ್ರೆಸ್ ಒಳಗೆ ಆಂತರಿಕ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡು ಪಕ್ಷ ಒಡೆದು ಇಬ್ಭಾಗವಾಯಿತು. 1978ರಲ್ಲಿ ಇಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಎನ್.ಕೆ.ಪಾಪಯ್ಯ ಅವರು ಜನತಾಪಕ್ಷದ ಹುರಿಯಾಳು ಆರ್.ಎನ್. ಲಕ್ಷ್ಮಿಪತಿ ಅವರನ್ನು ಸೋಲಿಸಿದ್ದರು.

ಈವರೆಗೆ ಕ್ಷೇತ್ರದಲ್ಲಿ 4 ಪಕ್ಷೇತರರು, ಜನತಾಪಕ್ಷದಿಂದ ಇಬ್ಬರು ಮತ್ತು ಜೆಡಿಎಸ್‌ನಿಂದ ಒಬ್ಬರು ಗೆಲುವು ಸಾಧಿಸಿದ್ದಾರೆ. 66 ವರ್ಷಗಳಲ್ಲಿ ಸುಮಾರು 35 ವರ್ಷ ಕಾಂಗ್ರೆಸ್ ಆಳ್ವಿಕೆಯಿಂದಾಗಿ ‘ಕೈ’ ಪಡೆಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ಆದರೆ ಇಷ್ಟು ವರ್ಷಗಳಾದರೂ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಗೌರಿಬಿದನೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದ ಒಂದು ಕಾಲದ ‘ಪ್ರಭಾವಿ’ ರಾಜಕಾರಣಿ ಮಂಚೇನಹಳ್ಳಿ ಸಮೀಪದ ಕಂಬತ್ತನಹಳ್ಳಿಯ ಕೆ.ಎಚ್.ವೆಂಕಟರೆಡ್ಡಿ ಅವರು 1957ರಲ್ಲಿ ಇಲ್ಲಿ ಮೊದಲ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಕ್ಷೇತ್ರದಲ್ಲಿ ಇಪ್ಪತ್ತೈದು ವರ್ಷ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಹೊಸೂರು ಹೋಬಳಿಯ ರಮಾಪುರದ ಜೈನ ಸಮುದಾಯಕ್ಕೆ ಸೇರಿದ ಆರ್.ಎನ್. ಲಕ್ಷ್ಮಿಪತಿ ಅವರು ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 1978ರಲ್ಲಿ ಪಾಪಯ್ಯ ವಿರುದ್ಧ ಸೋತಿದ್ದ ಲಕ್ಷ್ಮಿಪತಿ, 1983ರಲ್ಲಿ ಕಾಂಗ್ರೆಸ್‌ನ ವಿ. ಕೃಷ್ಣರಾವ್ ವಿರುದ್ಧ ಗೆದ್ದರು. ಆಗ ಸಣ್ಣ ನೀರಾವರಿ ಸಚಿವರೂ ಆಗಿದ್ದರು.

ನಗರಗೆರೆ ಹೋಬಳಿಯ ಕುಗ್ರಾಮ ನಕ್ಕಲಹಳ್ಳಿಯಿಂದ ಬಂದ ವಿ.ಕೃಷ್ಣರಾವ್ ಅವರು 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 1983ರಲ್ಲಿ ಲಕ್ಷ್ಮಿಪತಿ ಎದುರು ಸೋತ ಬಳಿಕ ಕೃಷ್ಣರಾವ್ ದಿಲ್ಲಿಯತ್ತ ದೃಷ್ಟಿ ನೆಟ್ಟರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1984ರಿಂದ 1991ರ ವರೆಗೆ ಸತತ ಮೂರು ಅವಧಿಗೆ ಸಂಸದರಾಗಿ ಆಯ್ಕೆಯಾದರು.

ರಾಮಕೃಷ್ಣ ಹೆಗಡೆ ಅವರ ಒತ್ತಾಯದ ಮೇರೆಗೆ 1985ರಲ್ಲಿ ಗೌರಿಬಿದನೂರಿನಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ನಟ ಮುಖ್ಯಮಂತ್ರಿ ಚಂದ್ರು ತಮ್ಮ ಪ್ರತಿಸ್ಪರ್ಧಿ ‘ಕೈ’ ಅಭ್ಯರ್ಥಿ ಪಾಪಯ್ಯ ಅವರಿಗೆ ಸೋಲಿನ ರುಚಿ ತೋರಿಸಿದರು.

1989ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಚೇನಹಳ್ಳಿ ಹೋಬಳಿಯ ಸಾದೇನಹಳ್ಳಿಯ ಎಸ್.ವಿ. ಅಶ್ವತ್ಥನಾರಾಯಣರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್ ಹುರಿಯಾಳಾಗಿದ್ದ ನಾಗಯ್ಯ ರೆಡ್ಡಿ ಅವರ ಮೊಮ್ಮಗಳು ಎನ್.ಜ್ಯೋತಿ ರೆಡ್ಡಿ ಅವರನ್ನು ಪರಾಭವಗೊಳಿಸಿದ್ದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರ ‘ಮಾನಸ ಪುತ್ರಿ’ಯಂತಿದ್ದ ಜ್ಯೋತಿ ರೆಡ್ಡಿ ಅವರು ಮರು ಚುನಾವಣೆಯಲ್ಲೇ (1994) ಅಶ್ವತ್ಥನಾರಾಯಣರೆಡ್ಡಿ ಅವರನ್ನು ಚುನಾವಣಾ ಕಣದಲ್ಲಿ ‘ಚಿತ್’ ಮಾಡಿ ಸೇಡು ತೀರಿಸಿಕೊಂಡರು.

1999ರಿಂದ ಸತತ ನಾಲ್ಕು ಬಾರಿ ಗೌರಿಬಿದನೂರು ಕ್ಷೇತ್ರದಲ್ಲಿ ಸೋಲಿಲ್ಲದ ಸರ್ದಾರನಂತಿದ್ದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರು ಇದೀಗ 5ನೇ ಚುನಾವಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಎರಡು ದಶಕಗಳಲ್ಲಿ ಅನಾಯಾಸವಾಗಿ ಗೆದ್ದು ಬೀಗಿದ್ದ ಅವರಿಗೆ ಕಳೆದ ಚುನಾವಣೆಯ ಫಲಿತಾಂಶ ಕಂಡ ಬಳಿಕ ಆಂತರ್ಯದಲ್ಲಿ ಅಳಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾರಣ ಕೆ.ಜೈಪಾಲ್ ರೆಡ್ಡಿ.

ಸಮಾಜಸೇವೆಯಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಉದ್ಯಮಿ ಜೈಪಾಲ್ ರೆಡ್ಡಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಹವಣಿಸಿದ್ದರು. ಅದು ತಪ್ಪಿದಾಗ ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆರಂಭದಲ್ಲಿ ಇವರ ಸಮಾಜಸೇವೆ, ಪ್ರಚಾರ ಕಾರ್ಯದ ಬಗ್ಗೆ ಉದಾಸೀನರಾಗಿದ್ದ ಶಿವಶಂಕರೆಡ್ಡಿ ಎದುರಾಳಿಯಾಗಿ ಜೈಪಾಲ್‌ರೆಡ್ಡಿ ಮೊದಲ ಪ್ರಯತ್ನದಲ್ಲೇ 44,056 ಮತ ಪಡೆದು ಗಮನ ಸೆಳೆದರು. ಅಂದಿನಿಂದ ಈವರೆಗೆ ಅವರ ಮೇಲೆ ಒಂದು ಕಣ್ಣಿಟ್ಟು, ಕಟ್ಟಿಹಾಕಲು ತಂತ್ರ ರೂಪಿಸುತ್ತಿದ್ದಾರೆ ಎಂದು ಹಿರಿಯರೊಬ್ಬರು ಹೇಳುವರು.

ಇತ್ತೀಚೆಗೆ ಜೈಪಾಲ್ ರೆಡ್ಡಿ ಬಿಜೆಪಿ ಸೇರ್ಪಡೆಗೊಂಡದ್ದು ಶಾಸಕರಿಗೆ ತಳಮಳ ಹುಟ್ಟಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಶತಾಯಗತಾಯ ಖಾತೆ ತೆರೆಯಲು ಹವಣಿಸುತ್ತಿರುವ ಬಿಜೆಪಿಗೆ ಗೌರಿಬಿದನೂರು ‘ಆದ್ಯತೆ’ಯ ಕ್ಷೇತ್ರವಾಗಿದೆ.

ಜೈಪಾಲ್ ಅವರ ಸೇರ್ಪಡೆಯಿಂದ ‘ಕಮಲ’ ಪಡೆಯ ಟಿಕೆಟ್ ಆಕಾಂಕ್ಷಿಗಳ ಕಣ್ಣು ಕೆಂಪಗಾಗಿವೆ. ಬೂದಿ ಮುಚ್ಚಿದ ಕೆಂಡದಂತೆ ಅಸಮಾಧಾನ ಹೊಗೆಯಾಗುತ್ತಿದೆ. ಇದನ್ನೆಲ್ಲ ಅರಿತ ಪಕ್ಷದ ವರಿಷ್ಠರು ಇತ್ತೀಚೆಗೆ ಯಡಿಯೂರಪ್ಪ ಅವರ ಮನೆಯಲ್ಲಿ ಸಭೆ ಕರೆದು ‘ಸಮಾಧಾನ’ದ ಮಾತನಾಡಿ, ಒಗ್ಗಟ್ಟಿನ ಮಂತ್ರ ಜಪಿಸುವಂತೆ ತಿಳಿ ಹೇಳಿ ಕಳುಹಿಸಿದ್ದಾರೆ.

ಕ್ಷೇತ್ರದಲ್ಲಿ ರವಿನಾರಾಯಣರೆಡ್ಡಿ ಮತ್ತು ಜ್ಯೋತಿ ರೆಡ್ಡಿ ಅವರ ನಿರ್ಗಮನದಿಂದ ಬಡವಾದ ಜೆಡಿಎಸ್‌ನಲ್ಲಿ ಆ ‘ಶೂನ್ಯ’ ತುಂಬಿ ಪಕ್ಷ ಚೇತನ್ಯಗೊಳಿಸುವ ಕೆಲಸ ಈವರೆಗೆ ಆಗಿಲ್ಲ. ಹೀಗಾಗಿ ಜೆಡಿಎಸ್ ಆಟ ಗಂಭೀರವಾಗಿಲ್ಲ ಎನ್ನಲಾಗುತ್ತಿದೆ.

ಮೂರೂ ಪಕ್ಷಗಳಲ್ಲೂ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯಾಗಿಲ್ಲ. ಕಣದಲ್ಲಿ ಶಿವಶಂಕರೆಡ್ಡಿ ಮತ್ತು ಜೈಪಾಲ್ ರೆಡ್ಡಿ ಎದುರಾಳಿಗಳಾದರೆ ಚುನಾವಣೆ ಹಿಂದಿಗಿಂತಲೂ ಹೆಚ್ಚು ‘ರೋಚಕ’ವಾಗಿರುತ್ತದೆ ಎನ್ನುವುದು ಸ್ಥಳೀಯ ರಾಜಕಾರಣದ ಆಳ ಅಗಲ ಬಲ್ಲವರ ಅಭಿಮತ.

ಹ್ಯಾಟ್ರಿಕ್ ಸಾಧನೆ

ನಾಗಸಂದ್ರದ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಎನ್.ಎಸ್.ಹನುಮಂತರೆಡ್ಡಿ ಅವರ ಪುತ್ರರಾದ ಶಿವಶಂಕರರೆಡ್ಡಿ ಅವರು ಕಳೆದ ಎರಡು ದಶಕಗಳಲ್ಲಿ ರಾಜಕೀಯದಲ್ಲಿ ಬೆಳೆದು ನಿಂತ ಪರಿ ಅನೇಕರ ಅಚ್ಚರಿಗೆ ಕಾರಣವಾಗಿದೆ. ಸಹೋದರ ಸಂಬಂಧಿ ಎನ್.ಟಿ.ಮದನಗೋಪಾಲ್ ರೆಡ್ಡಿ ಅವರ ಒತ್ತಾಸೆಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಮೊದಲುಗೊಂಡು ರಾಜಕೀಯ ಕೊಳಕ್ಕೆ ಇಳಿದ ಶಿವಶಂಕರರೆಡ್ಡಿ ಅವರು ದಿನೇ ದಿನೇ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತ ಪ್ರವರ್ಧಮಾನಕ್ಕೆ ಬಂದವರು.

ಅಶ್ವತ್ಥನಾರಾಯಣರೆಡ್ಡಿ ಅವರು ಶಾಸಕರಾಗಿದ್ದ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು ಇದೇ ವೇಳೆ ಜನನಾಯಕರಾಗಿ ಬೆಳೆಯುತ್ತ ಹೋದರು. 1999ರಲ್ಲಿ ಮೊದಲ ಬಾರಿಗೆ ಗುರುವಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸಿ ಅಶ್ವತ್ಥನಾರಾಯಣರೆಡ್ಡಿ ಅವರನ್ನು ಸೋಲಿಸಿ ಗೆದ್ದು ಶಾಸಕರಾದ ಶಿವಶಂಕರರೆಡ್ಡಿ ಅವರು ಈವರೆಗೆ ರಾಜಕಾರಣದಲ್ಲಿ ಹಿಂತಿರುಗಿ ನೋಡಿಲ್ಲ. 2004, 2008 ಮತ್ತು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಗೆಲುವಿನ ಮಾಲೆ ಧರಿಸಿ ಶಾಸಕರಾಗಿ ಉಳಿದುಕೊಂಡು ಬಂದಿರುವ ಇವರದು ಸದ್ಯ ಈ ಕ್ಷೇತ್ರ ಪಾಲಿಗೆ ಹ್ಯಾಟ್ರಿಕ್ ಸಾಧನೆ.

ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಹಿನ್ನೋಟ

ಪಕ್ಷಗಳ ಗೆಲುವು
ಒಟ್ಟು ಚುನಾವಣೆ 14

ಕಾಂಗ್ರೆಸ್ 6
ಜನತಾಪಕ್ಷ 2
ಜೆಡಿಎಸ್ 1
ಇಂದಿರಾ ಕಾಂಗ್ರೆಸ್ 1
ಪಕ್ಷೇತರರು 4

1978
ಬಿ.ಎನ್.ಕೆ.ಪಾಪಯ್ಯ (ಇಂದಿರಾ ಕಾಂಗ್ರೆಸ್) 33,756
ಆರ್.ಎನ್.ಲಕ್ಷ್ಮಿಪತಿ (ಜನತಾಪಕ್ಷ) 29,932
ಅಂತರ: 3,824

1983
ಆರ್.ಎನ್.ಲಕ್ಷ್ಮಿಪತಿ (ಜನತಾಪಕ್ಷ) 34,260
ವಿ.ಕೃಷ್ಣರಾವ್ (ಕಾಂಗ್ರೆಸ್) 30,426
ಅಂತರ: 3,834

1985
ಮುಖ್ಯಮಂತ್ರಿ ಚಂದ್ರು (ಜನತಾಪಕ್ಷ) 34,291
ಬಿ.ಎನ್.ಕೆ.ಪಾಪಯ್ಯ (ಕಾಂಗ್ರೆಸ್) 27,660
ಅಂತರ: 6,631

1989
ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ (ಕಾಂಗ್ರೆಸ್) 40,911
ಎನ್.ಜ್ಯೋತಿರೆಡ್ಡಿ (ಜೆಡಿಎಸ್) 30.020
ಅಂತರ: 10,891

1994
ಎನ್.ಜ್ಯೋತಿರೆಡ್ಡಿ (ಜೆಡಿಎಸ್) 42,159
ಎಸ್.ವಿ.ಅಶ್ವತ್ಥನಾರಾಯಣ ರೆಡ್ಡಿ (ಪಕ್ಷೇತರ) 34,274
ಅಂತರ: 7,885

1999
ಎನ್.ಎಚ್.ಶಿವಶಂಕರರೆಡ್ಡಿ (ಪಕ್ಷೇತರ) 34,541
ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ (ಕಾಂಗ್ರೆಸ್) 33,679
ಅಂತರ: 862

2004
ಎನ್.ಎಚ್.ಶಿವಶಂಕರರೆಡ್ಡಿ (ಕಾಂಗ್ರೆಸ್) 49,636
ಎನ್.ಜ್ಯೋತಿರೆಡ್ಡಿ (ಜೆಡಿಎಸ್) 41,611
ಅಂತರ: 8,025

2008
ಎನ್.ಎಚ್.ಶಿವಶಂಕರರೆಡ್ಡಿ (ಕಾಂಗ್ರೆಸ್) 39,127
ಎನ್.ಎಂ.ರವಿನಾರಾಯಣರೆಡ್ಡಿ (ಬಿಜೆಪಿ) 27,959
ಅಂತರ: 11,168

2013
ಎನ್.ಎಚ್.ಶಿವಶಂಕರರೆಡ್ಡಿ (ಕಾಂಗ್ರೆಸ್) 50131
ಕೆ.ಜೈಪಾಲ್ ರೆಡ್ಡಿ (ಪಕ್ಷೇತರ) 44,056
ಅಂತರ: 6,075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.