ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತವಿಭಜನೆ ಘಟಕ ಸ್ಥಾಪನೆ ನನೆಗುದಿಗೆ

ಜಿಲ್ಲಾಸ್ಪತ್ರೆ: ಜನರೇಟರ್‌ ಒದಗಿಸಲು ಮೀನಮೇಷ
Last Updated 19 ಜುಲೈ 2019, 6:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಗೆ ಅಧಿಕ ಸಾಮರ್ಥ್ಯದ (110 ಕೆ.ಡಬ್ಲ್ಯು) ಜನರೇಟರ್‌ ಒದಗಿಸಲು ಮೀನಮೇಷ ಎಣಿಸುತ್ತಿದ್ದು, ಆಸ್ಪತ್ರೆಯ ರಕ್ತನಿಧಿಯಲ್ಲಿ ರಕ್ತ ವಿಭಜನೆ ಘಟಕ(ಬ್ಲಡ್‌ ಕಾಂಪೊನೆಂಟ್‌ ಸೆಪರೇಷನ್‌ ಯುನಿಟ್‌–ಬಿಸಿಎಸ್‌ಯು) ತೆರೆಯುವ ಪ್ರಕ್ರಿಯೆ ನನೆಗುದಿಗೆಬಿದ್ದಿದೆ.

ರಕ್ತ ವಿಭಜನೆ ಘಟಕ ಕಾರ್ಯಾರಂಭ ನಿಟ್ಟಿನಲ್ಲಿ ಆರು ತಿಂಗಳ ಹಿಂದೆಯೇ ಪರವಾನಗಿ ಪಡೆಯಲಾಗಿದೆ. ಅಗತ್ಯವಾದ ಹಲವು ಉಪಕರಣಗಳು ಪೂರೈಕೆಯಾಗಿವೆ. ಜನರೇಟರ್‌ ಸಮಸ್ಯೆಯಿಂದಾಗಿ ಇದ್ದೂ ಇಲ್ಲದಂತಾಗಿವೆ.

ಚಿಕ್ಕಮಗಳೂರಿನಲ್ಲಿ ಡೆಂಗಿ ಪ್ರಕರಣಗಳು ಉಲ್ಬಣಿಸುತ್ತಿವೆ. ರಾಜ್ಯದಲ್ಲಿ ಡೆಂಗಿ ಸಂಖ್ಯೆಗಳ ಶ್ರೇಯಾಂಕ ಪಟ್ಟಿಯಲ್ಲಿ ಜಿಲ್ಲೆ ‘ಮುಂಚೂಣಿ’ ಸ್ಥಾನದಲ್ಲಿದೆ. ಡೆಂಗಿ ಪ್ರಕರಣದಲ್ಲಿ ಪ್ಲೆಟ್‌ಲೆಟ್‌ ಸಂಖ್ಯೆ ತೀವ್ರ ಕುಸಿದಾಗ ಹಾಕಿಸಲು ಹಾಸನ, ಶಿವಮೊಗ್ಗ, ಮಂಗಳೂರು, ಮಣಿಪಾಲಕ್ಕೆ ಒಯ್ಯಬೇಕಾದ ಸ್ಥಿತಿ ಇದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ವಿಭಜನೆ ಘಟಕ ಸ್ಥಾಪಿಸಿದರೆ ಇಲ್ಲಿಯೇ ಪ್ಲೆಟ್‌ಲೆಟ್‌ ಹಾಕಿಸಲು ಅನುಕೂಲವಾಗುತ್ತದೆ.

ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 50 ಕೆ.ಡಬ್ಲ್ಯು ಸಾಮರ್ಥ್ಯದ ಜನರೇಟರ್‌ ಇದೆ. ಎಲ್ಲ ವಿಭಾಗಗಳನ್ನು (ವಾರ್ಡ್‌ಗಳು, ಶಸ್ತ್ರಚಿಕಿತ್ಸಾ ವಿಭಾಗ, ತೀವ್ರ ನಿಗಾಘಟಕ, ಸಿಟಿ ಸ್ಕ್ಯಾನ್‌, ಡಯಾಲಿಸ್‌ ಕೇಂದ್ರ, ರಕ್ತ ನಿಧಿ) ಅದರಲ್ಲಿ ನಿಭಾಯಿಸಲಾಗುತ್ತಿದೆ.

ರಕ್ತ ವಿಭಜನೆ ಘಟಕ ಸ್ಥಾಪನೆಗೆ ಅಧಿಕ ಸಾಮರ್ಥ್ಯದ ಜನರೇಟರ್‌ ಪೂರೈಸುವಂತೆ ಪತ್ರ ಬರೆಯಲಾಗಿದೆ. ಆದರೆ, ಈವರೆಗೆ ವ್ಯವಸ್ಥೆ ಆಗಿಲ್ಲ.

‘ಘಟಕ ಶುರುವಾದರೆ ‘ಫ್ರೆಶ್‌ ಫ್ರೊಸನ್‌ ಪ್ಲಾಸ್ಮಾ ’ ಕ್ರಿಯೆ, ‘ಪ್ಲೆಟ್‌ಲೆಟ್‌’ ಸಂಗ್ರಹ ಮೊದಲಾದವಕ್ಕೆ ಅನುಕೂಲವಾಗಲಿದೆ. ಘಟಕ ನಿರ್ವಹಣೆಗೆ ಏಳು ತಂತ್ರಜ್ಞರ ಅಗತ್ಯ ಇದೆ. ಈಗ ಮೂವರು ಇದ್ದು, ನಾಲ್ವರು ನೇಮಕ ಆಗಬೇಕಿದೆ’ ಎಂದು ಜಿಲ್ಲಾಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಎನ್‌.ಮುರಳೀಧರ್‌ ತಿಳಿಸಿದರು.

ಡೆಂಗಿ ದೃಢ: 80 ಪ್ರಕರಣ, ಎನ್‌ಎಸ್‌1 ಪತ್ತೆ: 25ಪ್ರಕರಣ

ಜಿಲ್ಲೆಯಲ್ಲಿ ಈವರೆಗೆ ಡೆಂಗಿ 80 ಪ್ರಕರಣಗಳು ದೃಢಪಟ್ಟಿವೆ. 25 ಪ್ರಕರಣಗಳಲ್ಲಿ ಎನ್‌ಎಸ್‌–1 ಪತ್ತೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ತಾಲ್ಲೂಕಿನ ಇಂದಾವರ, ಗೌಡನಹಳ್ಳಿ, ಮರ್ಲೆ ತಿಮ್ಮನಹಳ್ಳಿ, ಅಂಬಳೆ, ನೆಟ್ಟೆಕೆರೆಹಳ್ಳಿ, ಕುರುಬರಹಳ್ಳಿ, ಕ್ಯಾತನಬೀಡು ಭಾಗದಲ್ಲಿ ಹೆಚ್ಚು ಪತ್ತೆಯಾಗಿವೆ.

ನಗರದ ರಾಮನಹಳ್ಳಿ, ಗೌರಿಕಾಲುವೆ, ಶಂಕರಪುರ, ಆದಿಶಕ್ತಿನಗರ, ರಾಮನಹಳ್ಳಿ, ಗವನಹಳ್ಳಿಯಲ್ಲಿ ಹೆಚ್ಚು ಪತ್ತೆಯಾಗಿವೆ.

ರಕ್ತವಿಭಜನೆ ಘಟಕಕ್ಕೆ ದಿನದ 24 ಗಂಟೆಯೂ ವಿದ್ಯುತ್‌ ಬೇಕು. ಅಧಿಕ ಸಾಮರ್ಥ್ಯದ ಜನರೇಟರ್‌ ಒದಗಿಸುವಂತೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಪೂರೈಸುವುದಾಗಿ ತಿಳಿಸಿದ್ದಾರೆ.

–ಡಾ.ಎಸ್‌.ಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಲ್ಲಾಸ್ಪತ್ರೆ

ಜಿಲ್ಲೆಯ ಡೆಂಗಿ, ಚಿಕುನ್‌ ಗುನ್ಯಾ ಪ್ರಕರಣಗಳ ಅಂಕಿಅಂಶ

ತಾಲ್ಲೂಕು; ಡೆಂಗಿ ದೃಢ; ಎನ್‌ಎಸ್‌1ಪತ್ತೆ; ಚಿಕುನ್‌ಗುನ್ಯಾ;

ಚಿಕ್ಕಮಗಳೂರು; 61; 23; 17;

ತರೀಕೆರೆ; 6; 1; 1;

ಕೊಪ್ಪ; 6; –; –;

ಶೃಂಗೇರಿ; 4; –; –;

ಕಡೂರು; 2; –; 1;

ಮೂಡಿಗೆರೆ ; 1; 1; –;

ಒಟ್ಟು ; 80; 25; 19;

*ಎನ್.ಆರ್‌.ಪುರ ತಾಲ್ಲೂಕಿನಲ್ಲಿ ಡೆಂಗಿ, ಚಿಕುನ್‌ ಗುನ್ಯಾ ಪ್ರಕರಣ ಕಂಡುಬಂದಿಲ್ಲ

(ಅಂಕಿಅಂಶ ಮಾಹಿತಿ: ಜಿಲ್ಲಾ ಸರ್ವೇಕ್ಷಣಾ ಘಟಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT