ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು: ಕೈ ಹಿಡಿದ ಹಿಂಗಾರಿ ಬೆಳೆಗಳು

Published 14 ಜನವರಿ 2024, 7:32 IST
Last Updated 14 ಜನವರಿ 2024, 7:32 IST
ಅಕ್ಷರ ಗಾತ್ರ

ಕಡೂರು: ಮುಂಗಾರು ಕೈಕೊಟ್ಟ ಪರಿಣಾಮ ನಷ್ಟ ಅನುಭವಿಸುತ್ತಿದ್ದ ತಾಲ್ಲೂಕಿನ ರೈತರಿಗೆ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಮತ್ತು ಹುರುಳಿ ಬೆಳೆಗಳು ಕೈಹಿಡಿದಿದ್ದು, ತುಸು ಸಮಾಧಾನ ತಂದಿವೆ. 

ಮಳೆಯಾಶ್ರಿತ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಹಾಗೂ ಹುರುಳಿ ನಿಗದಿತ ಗುರಿಗಿಂತ 8,255 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮೊದಲು ತೇವಾಂಶ ಕೊರತೆಯಿಂದ ಬೆಳೆ ಮೇಲೇಳುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಅದರೆ, ನವೆಂಬರ್ ತಿಂಗಳಲ್ಲಿ ಒಂದೆರಡು ದಿನ ಸುರಿದ ಮಳೆ ಹಿಂಗಾರಿ ಬೆಳೆಗಳಿಗೆ ಅನುಕೂಲವಾಯಿತು. ಹಾಗೇ ಚಳಿಗಾಲವಾದ್ದರಿಂದ ಉಷ್ಣಾಂಶದಲ್ಲಿ ಇಳಿಕೆ ಹಾಗೂ ಇಬ್ಬನಿ ಬೀಳುತ್ತಿರುವುದು ಬೆಳೆಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ. ಒಂದಿಷ್ಟು ಲಾಭ ತಂದು ಕೊಡುವ ನಿರೀಕ್ಷೆಯನ್ನು ಹುಟ್ಟಿಸಿವೆ.

ಹಿರೇನಲ್ಲೂರು ಹೋಬಳಿ ಭಾಗದ ಭೂಮಿ ಕಡಲೆ ಬೆಳೆಗೆ ಪೂರಕವಾಗಿದ್ದು, 2,110 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಕಡಲೆಕಾಳು ಬಲಿಯಲಾರಂಭಿಸಿದ್ದು, ಬೆಳೆ ಕಟಾವು ಮಾಡುವ ಹಂತಕ್ಕೆ ಬರುವ ಮೊದಲೇ ಹಸಿಕಡಲೆ ಗಿಡವನ್ನೇ ಮಾರಾಟ ಮಾಡುವವರೇ ಹೆಚ್ಚು. ಎಕರೆ ಲೆಕ್ಕದಲ್ಲಿ ಕಡಲೆ ಗಿಡಗಳನ್ನು ಖರೀದಿಸುವವರಿದ್ದು, ಕೆ.ಜಿ‌.ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಪಟ್ಟಣದಲ್ಲಿ ಕೆ.ಜಿ ಕಡಲೆಗಿಡ ₹12ರಿಂದ ₹15 ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಸಗಟು ಲೆಕ್ಕದಲ್ಲಿ ಕಡಲೆ ಗಿಡವನ್ನು ಬೆಂಗಳೂರು, ಭಧ್ರಾವತಿ ಮುಂತಾದೆಡೆಗೆ ವ್ಯಾಪಾರಿಗಳು ಕಳುಹಿಸುತ್ತಾರೆ.

ಹಿಂಗಾರಿ ಜೋಳ 1,680, ಕಡಲೆ 4,610, ಹುರುಳಿ 1,965 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಹೆಚ್ಚು ಇಳುವರಿ ಬರದಿದ್ದರೂ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.

ಸಖರಾಯಪಟ್ಟಣ ಹೋಬಳಿಯಲ್ಲಿ ಹಿಂಗಾರು ಜೋಳ 388 ಹೆಕ್ಟೇರ್ ಬಿತ್ತನೆಯಾಗಿದ್ದರೆ, ಪಂಚನಹಳ್ಳಿ ಹೋಬಳಿಯಲ್ಲಿ ಕೇವಲ 68 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬೀರೂರು ಹೋಬಳಿಯಲ್ಲಿ ಹುರುಳಿ 528 ಹೆಕ್ಟೇರ್ ಬಿತ್ತನೆಯಾಗಿದ್ದರೆ, ಸಖರಾಯಪಟ್ಟಣ ಹೋಬಳಿಯಲ್ಲಿ 126 ಹೆಕ್ಟೇರ್ ಬಿತ್ತನೆಯಾಗಿದೆ.

ಒಟ್ಟಾರೆ ಹಿಂಗಾರು ಬೆಳೆಗಳು ರೈತರಿಗೆ ಆರ್ಥಿಕವಾಗಿ ಸ್ವಲ್ಪ ಲಾಭ ಮತ್ತು ಜಾನುವಾರುಗಳಿಗೆ ಮೇವು ದೊರಕಿಸುವ ನಿರೀಕ್ಷೆ ಹುಟ್ಟಿಸಿದೆ ಎನ್ನುತ್ತಾರೆ ತಾಲ್ಲೂಕಿನ ರೈತರು.

ಮುಂಗಾರು ವಿಫಲವಾಗಿ ನಷ್ಟ ಅನುಭವಿಸಿದ್ದ ರೈತರಿಗೆ ಹಿಂಗಾರಿ ಬೆಳೆಗಳು ಸಮಾಧಾನ ತಂದಿವೆ. ನಿಗಧಿತ ಗುರಿಗಿಂತ ಹೆಚ್ಚು ಪ್ರದೇಶದಲ್ಲಿ ಹಿಂಗಾರು ಬಿತ್ತನೆಯಾಗಿದೆ
ಎಂ. ಅಶೋಕ ಕೃಷಿ ಸಹಾಯಕ ನಿರ್ದೇಶಕ ಕಡೂರು
ಕಡಲೆ ಉತ್ತಮವಾಗಿ ಬಂದಿದ್ದು ಹಸಿ ಗಿಡಗಳನ್ನೆ ಕೊಡುವ ಯೋಚನೆಯಲ್ಲಿದ್ದೇನೆ. ಕನಿಷ್ಟ ಒಂದು ಎಕರೆಗೆ ₹20 ರಿಂದ ₹25 ಸಾವಿರ ದೊರೆಯುವ ನಿರೀಕ್ಷೆಯಿದೆ
ಹನುಮಂತಪ್ಪ ಮಚ್ಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT