ನರಸಿಂಹರಾಜಪುರ: ತಾಲ್ಲೂಕಿನ ಮಡಬೂರು ಗ್ರಾಮದ ಬಳಿ ಶಿವಮೊಗ್ಗದ ಮುಖ್ಯ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಇಲ್ಲಿ ರಸ್ತೆಯ ಕೆಳಭಾಗದಿಂದ ಅಂತರ್ಜಲ ಉಕ್ಕಿ ರಸ್ತೆಗೆ ಹಾನಿಯಾಗಿದೆ. ತಾಲ್ಲೂಕು ಕೇಂದ್ರದಿಂದ ಶಿವಮೊಗ್ಗಕ್ಕೆ ಹೋಗುವ ಈ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ರಸ್ತೆ ಕುಸಿದಿದ್ದು, ಈಗ ರಸ್ತೆ ಪಕ್ಕದ ಮರಗಳು ಮತ್ತು ಬಸ್ ತಂಗುದಾಣ ಬೀಳುವ ಸ್ಥಿತಿಯಲ್ಲಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉಬ್ಬುತಗ್ಗಿನಿಂದ ಕೂಡಿದೆ ಎಂಬ ಕಾರಣಕ್ಕೆ, ಎಂಟು ವರ್ಷಗಳ ಹಿಂದೆ ಉಬ್ಬುಗಳಿದ್ದ ಈ ರಸ್ತೆಯನ್ನು ಸಮತಟ್ಟಾಗಿ ನಿರ್ಮಿಸಲಾಯಿತು. ರಸ್ತೆ ಸಮತಟ್ಟು ಮಾಡುವಾಗ ರಸ್ತೆಯ ಎರಡೂ ಬದಿಗಳಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣನ್ನು ಅಗೆದಿದ್ದರಿಂದ, ಎರಡೂ ಭಾಗದಲ್ಲಿ ಎತ್ತರದ ದಿಣ್ಣೆ ನಿರ್ಮಾಣವಾಗಿತ್ತು. ದಿಣ್ಣೆಯ ಮಣ್ಣನ್ನು ಅಗೆಯುವಾಗ ಭಾರಿ ಮರಗಳು ಇರುವ ಜಾಗದಲ್ಲಿ ಮರದ ಬುದಡವರೆಗೂ ಮಣ್ಣನ್ನು ತೆಗೆಯಲಾಗಿತ್ತು. ಇದರಿಂದ ಹಲವು ವರ್ಷಗಳಿಂದ ಈ ಮಣ್ಣು ಕರಗುತ್ತಿದೆ. ಗಾಳಿ, ಮಳೆ ಆರ್ಭಟ ಮುಂದುವರಿದರೆ ಭಾರಿ ಗಾತ್ರದ ಮರಗಳು ರಸ್ತೆಯ ಮೇಲೆ ಬೀಳುವ ಅಪಾಯವಿದೆ. ಕಳೆದ ಮಳೆಗಾಲದಲ್ಲೂ ಅಂತರ್ಜಲ ಸಮಸ್ಯೆಯಿಂದ ಈ ರಸ್ತೆ ಹಾಳಾಗಿತ್ತು. ಆ ನಂತರ ₹74 ಲಕ್ಷ ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಿಸಲಾಗಿತ್ತು. ಇಲ್ಲಿ 33/11 ಕೆ.ವಿ ವಿದ್ಯುತ್ ಮಾರ್ಗ ಹಾದು ಹೋಗಿರುವ ದೊಡ್ಡ ಟವರ್‌ನ ಭಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಸದ್ಯ ಧಾರಾಕಾರ ಮಳೆಯಿಂದ ತಡೆಗೋಡೆ ಒಳಭಾಗದಿಂದಲೂ ನೀರು ಬರುತ್ತಿದೆ.
ಹೊಸ ರಸ್ತೆಯ ಒಂದು ಭಾಗದಲ್ಲಿ ಗುರುವಾರ ಅಂತರ್ಜಲ ಉಕ್ಕಿ ರಸ್ತೆಗೆ ಹಾನಿಯಾಗಿದೆ. ಇದರಿಂದ ಹಲವು ವಾಹನಗಳು ರಸ್ತೆಯಲ್ಲಿ ಸಿಲುಕಿ ಮುಂದೆ ಸಾಗಲು ಹೆಣಗಾಡಬೇಕಾಯಿತು. ಹಾನಿಯಾಗಿದ್ದ ಸ್ಥಳದಲ್ಲಿ ಜಲ್ಲಿ ಕಲ್ಲು ಹಾಕಿ ರಸ್ತೆ ದುರಸ್ತಿಪಡಿಸ ಲಾಗಿದೆ. ಇದು ಪ್ರಮುಖ ರಸ್ತೆಯಾಗಿ ರುವುದರಿಂದ ವಾಹನ ಸಂಚಾರ ನಿರಂತರವಾಗಿರುತ್ತದೆ.ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ತಾತ್ಕಾಲಿಕ ದುರಸ್ತಿ
‘ಹೊಸದಾಗಿ ನಿರ್ಮಿಸಿದ್ದ ರಸ್ತೆಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಅಂತರ್ಜಲ ಉಕ್ಕಿದ್ದರಿಂದ ರಸ್ತೆಗೆ ಹಾನಿಯಾಗಿದೆ. ಇದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಮಳೆ ಕಡಿಮೆಯಾದ ನಂತರ ಮತ್ತೆ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಸ್ತೆ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.