ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಜ್ಜಂಪುರ: ಸಡಗರದ ದುರ್ಗಾಂಬಾದೇವಿ ರಥೋತ್ಸವ

ಭಕ್ತರ ಜೈಕಾರ; ಮಂಗಳವಾದ್ಯ, ಅಸಾದಿ ಪದ, ಕಹಳೆಯ ಮೆರುಗು
Last Updated 5 ಫೆಬ್ರುವರಿ 2023, 7:28 IST
ಅಕ್ಷರ ಗಾತ್ರ

ಅಜ್ಜಂಪುರ: ಬಯಲು ಸೀಮೆಯ ದೊಡ್ಡ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ, ಪಟ್ಟಣ ಸಮೀಪದ ಅಂತರಘಟ್ಟೆ ದುರ್ಗಾಂಬಾದೇವಿ ರಥೋತ್ಸವ ಸಾವಿರಾರು ಭಕ್ತರ ಭಕ್ತಿ-ಭಾವದ ನಡುವೆ ಸಂಭ್ರಮದಿಂದ ಶನಿವಾರ ಜರುಗಿತು.

ಜಾತ್ರಾ ಮಹೋತ್ಸವ ಹಿನ್ನೆಲೆ ದೇವಾಲಯದಲ್ಲಿ ದೇವಿಯನ್ನು ಹೂವು– ಪತ್ರೆಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು, ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ರಥ ಮೈದಾನಕ್ಕೆ ಸಾಗಿದರು. ಈ ವೇಳೆ ಡೊಳ್ಳು, ಅಸಾದಿ ಪದ, ಮಂಗಳ ವಾದ್ಯ, ಕಹಳೆ ಮೆರವಣಿಗೆಗೆ ಮೆರುಗು ತಂದವು.

ಬಳಿಕ ದುರ್ಗಾಂಬಾದೇವಿ ಉತ್ಸವ ಮೂರ್ತಿಯನ್ನು ವಿವಿಧ ಬಣ್ಣದ ಬಟ್ಟೆ, ಹಲವು ಬಗೆಯ ಹೂವುಗಳು, ಕದಳಿಯಿಂದ ಸಿಂಗರಿಸಿದ್ದ ರಥದಲ್ಲಿ, ಪ್ರತಿಷ್ಠಾಪಿಸಿ, ರಥೋತ್ಸವ ನಡೆಸಲಾಯಿತು.

ಭಕ್ತರು ರಥ ಎಳೆದು, ರಥ ಕಳಸದತ್ತ ಬಾಳೆ ಹಣ್ಣು, ನಿಂಬೆ ಹಣ್ಣು ಎಸೆದು, ರಥ ಚಕ್ರಕ್ಕೆ ತೆಂಗಿನ ಕಾಯಿ ಹೊಡೆದು, ಜೈಕಾರ ಹಾಕಿ ಸಂಭ್ರಮಿಸಿದರು. ದೇವಿ ದರ್ಶನ ಪಡೆದು, ಹೂ-ಹಣ್ಣು ನೀಡಿ, ಭಕ್ತಿ ಸಮರ್ಪಿಸಿದರು.

ಜಾತ್ರೆಯಲ್ಲಿ ನೂರಾರು ಅಂಗಡಿಗಳು ತಲೆ ಎತ್ತಿದ್ದವು. ಆಟಿಕೆ ವಸ್ತುಗಳ ವ್ಯಾಪಾರ ಜೋರಾಗಿತ್ತು. ಮಂಡಕ್ಕಿ-ಖಾರ-ಬೆಂಡು-ಬತ್ತಾಸ್ ವ್ಯವಹಾರ ಹೆಚ್ಚಾಗಿತ್ತು. ಕಲ್ಲಂಗಡಿ, ತಂಪು ಪಾನೀಯ, ಐಸ್ ಕ್ರೀಂ ಕೊಳ್ಳುವವರ ಸಂಖ್ಯೆ ಅಧಿಕವಾಗಿತ್ತು.

ರೈತಾಪಿ ಜನರು ಎತ್ತಿನ ಬಂಡಿ, ಟ್ರ್ಯಾಕ್ಟರ್ ಮೂಲಕ ಬಂದಿದ್ದರು. ಅವರು, ರಥ ಮೈದಾನದಲ್ಲಿ ಪಾನಕ-ಫಲಾಹಾರ ಹಂಚಿದರು. ಜಿಲ್ಲೆ ಹಾಗೂ ನೆರೆಯ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆಯಿಂದಲೂ ಅಪಾರ ಸಂಖ್ಯೆಯ ಭಕ್ತರು ಜಾತ್ರೆಗೆ ಬಂದಿದ್ದರು. ಗ್ರಾಮಸ್ಥರು ಅನ್ನ ಸಂತರ್ಪಣೆ ನಡೆಸಿದರು. ಇದಕ್ಕೂ ಮುನ್ನ ಜಾತ್ರಾ ಮಹೋತ್ಸವ ಪ್ರಯುಕ್ತ ಬೇವಿನ ಸೀರೆ ಉತ್ಸವ, ಉಯ್ಯಾಲೋತ್ಸವ, ನವಿಲೋತ್ಸವ, ಕುಂಕುಮ ಪೂಜೆಯಂತಹ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು ಜರುಗಿದವು.

ಪೊಲೀಸರು, ಎತ್ತಿನ ಬಂಡಿ ನಿಲುಗಡೆಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿದ್ದರು. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿದ್ದರು. ಸಂಚಾರ ದಟ್ಟಣೆಗೆ ಕ್ರಮವಹಿಸಿದರು. ಭಕ್ತರಿಗೆ ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT