ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿ

ಅತಿವೃಷ್ಟಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಆರಗ ಜ್ಞಾನೇಂದ್ರ ಸೂಚನೆ
Last Updated 8 ಆಗಸ್ಟ್ 2021, 4:24 IST
ಅಕ್ಷರ ಗಾತ್ರ

ಮುತ್ತಿನಕೊಪ್ಪ (ಎನ್.ಆರ್.ಪುರ): ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕುವ ರೈತರ ಬಳಿಗೆ ಅಧಿಕಾರಿಗಳು ತೆರಳಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದರು.

ತಾಲ್ಲೂಕಿನ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮುತ್ತಿನಕೊಪ್ಪದ ಭದ್ರಾ ಮೇಲ್ದಂಡೆ ಉಪವಿಭಾಗ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡದಿದ್ದರೆ ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯುವ ಸಾಧ್ಯತೆಯಿದೆ. ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಾರೆ. ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸವೇ ಇರುವುದಿಲ್ಲ. ನಷ್ಟವಾದ ಎಲ್ಲಾ ಪರಿಹಾರವನ್ನು ಸರ್ಕಾರ ಕೊಡಲು ಸಾಧ್ಯವಾಗುವುದಿಲ್ಲ. ಯಾವುದೇ ಹಾನಿ ಸಂಭವಿಸಿದ್ದರೂ ಅದರ ಮಾಹಿತಿಯನ್ನು ತಕ್ಷಣವೇ ಆನ್‌ಲೈನ್ ನಲ್ಲಿ ಅಪ್‌ಲೋಡ್ ಮಾಡಬೇಕು. ಇದರಿಂದ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ’ ಎಂದರು.

‘ಯಾವುದೇ ಭಾಗದಲ್ಲಿ ಸೇತುವೆ, ರಸ್ತೆಗಳು ಕಡಿತಗೊಂಡಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಳ್ಳಬೇಕು. ಗ್ರಾಮದ ಪ್ರತಿಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾಹಿತಿ ನೀಡಿ, ‘3 ವರ್ಷಗಳಿಂದ ಶೃಂಗೇರಿ, ಬಾಳೆಹೊನ್ನೂರು, ಮಾಗುಂಡಿ, ಮೇಲ್ಪಾಲ್ ಭಾಗದಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿ ಸಂಭವಿಸಿದೆ. ಪ್ರಸಕ್ತ ಸಾಲಿನಲ್ಲಿ ಎನ್.ಆರ್.ಪುರ ತಾಲ್ಲೂಕಿನ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮಣ್ಣಿನಕೊಡುಗೆ, ಮಡಬೂರು, ಕಟ್ಟಿನಮನೆ, ನಾಗಲಾಪುರ, ಮೆಣಸೂರು ಭಾಗದಲ್ಲಿ ಸೇತುವೆ, ಕೃಷಿ ಭೂಮಿಗೆ ಹಾನಿಯಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಜಲಾವೃತವಾದ ಮನೆಯಲ್ಲಿ ಮಗು ಸೇರಿದಂತೆ 8 ಜನರನ್ನು ರಕ್ಷಿಸಲಾಗಿದೆ. ಜಲಾವೃತ್ತವಾದ ಮನೆಯವರನ್ನು ಕಾಳಜಿ ಕೇಂದ್ರದಲ್ಲಿ ಪುನರ್ವಸತಿಕಲ್ಪಿಸಲಾಗಿತ್ತು’ ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾಹಿತಿ ನೀಡಿ, ‘ಜಿಲ್ಲೆಯಲ್ಲಿ ಮಳೆ ಯಿಂದಾಗಿ ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ 405 ಕಿ.ಮೀ ರಸ್ತೆ ಮತ್ತು 42 ಸೇತುವೆಗಳಿಗೆ ಹಾನಿಯಾಗಿದೆ. 1,087 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ₹ 150 ಕೋಟಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ’ ಎಂದರು.

‘47 ಗ್ರಾಮ ಪಂಚಾಯಿತಿಯ 108 ಹಳ್ಳಿಗಳನ್ನು ಅತಿವೃಷ್ಟಿಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರಲ್ಲಿ 58 ಪ್ರದೇಶಗಳಲ್ಲಿ ಭೂ ಕುಸಿತವಾಗುತ್ತದೆ. 7 ಕಡೆ ರಸ್ತೆ ಮತ್ತು ಸೇತುವೆ ಅತಿಹೆಚ್ಚು ಹಾನಿಯಾಗುತ್ತದೆ ಎಂದು ಗುರುತಿಸಲಾಗಿದೆ. 62 ಕಡೆ ಕಾಳಜಿ ಕೇಂದ್ರ ಆರಂಭಿಸಿ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ವಿಪತ್ತು ನಿರ್ವಹಣಾ ತಂಡೆ ರಚಿಸಲಾಗಿದೆ’ ಎಂದರು.

ಸಿಇಒ ಡಿ.ಪ್ರಭು, ಎಸ್ಪಿ ಅಕ್ಷಯ್ ಎಂ.ಹಾಕೆ, ಉಪ ವಿಭಾಗಾಧಿಕಾರಿ ಸಿದ್ಧಲಿಂಗ ರೆಡ್ಡಿ, ತಹಶೀಲ್ದಾರ್ ಜಿ.ಸಿ.ಗೀತಾ, ಇಒ ಎಸ್.ನಯನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT