ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ದರ: ಹಾವು-–ಏಣಿ ಆಟ

ಧಾರಣೆ ಕುಸಿತ: ನಷ್ಟದ ಭೀತಿಯಲ್ಲಿ ರೈತರು, ಚೇಣಿದಾರರು
Last Updated 20 ಅಕ್ಟೋಬರ್ 2021, 2:55 IST
ಅಕ್ಷರ ಗಾತ್ರ

ಬೀರೂರು: ಮಲೆನಾಡಿನಲ್ಲಿ ಕಾಫಿ ತೋಟಗಳನ್ನೂ ಮೀರಿ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ತೋಟಗಳು ವಿಸ್ತರಣೆ ಆಗಿವೆ. ದಶಕದ ಹಿಂದೆ ಮಲೆನಾಡಿನ ಕೆಲವು ತಾಲ್ಲೂಕುಗಳು ಹಾಗೂ ಬಯಲುಸೀಮೆಯಲ್ಲಿ ನೀರಾವರಿ ಸೌಲಭ್ಯ ಇದ್ದಲ್ಲಿ ಮಾತ್ರ ನೆಲೆ ಕಂಡು
ಕೊಂಡಿದ್ದ ಈ ತೋಟಗಾರಿಕಾ ಬೆಳೆ, ಇಂದು ಕೊಳವೆಬಾವಿ ನೀರು ಆಧರಿಸಿ ಬೆಳೆಯಲಾಗುತ್ತಿದೆ. ಅಡಿಕೆಗೆ ಇರುವ ಉತ್ತಮ ಧಾರಣೆ ಇದಕ್ಕೆ ಕಾರಣ.

ಎರಡು ದಶಕಗಳಿಂದ ಅಡಿಕೆ ದರ ಮತ್ತು ಕೃಷಿ ಚೇಣಿದಾರರು, ರೈತರು ಹಾಗೂ ವ್ಯಾಪಾರಿಗಳ ನಡುವಿನ ವ್ಯವಹಾರ ಹಾವು- ಏಣಿ ಆಟದಂತೆ ಸಾಗಿದೆ. ಈ ವರ್ಷವೂ ಅದಕ್ಕೆ ಹೊರತಾಗಿಲ್ಲ.

ಐದು ವರ್ಷದ ಹಿಂದೆ ₹80 ಸಾವಿರ ಮುಟ್ಟಿದ್ದ ಕ್ವಿಂಟಲ್ ಒಣ ಅಡಿಕೆ (ಸಂಸ್ಕರಿತ) ಬೆಲೆ ನಂತರದ ದಿನಗಳಲ್ಲಿ ₹40 ಸಾವಿರದ ಆಸುಪಾಸಿನಲ್ಲಿಯೇ ಸಾಗಿಬಂದಿದೆ. 2021ರಲ್ಲಿಆಗಸ್ಟ್ ವೇಳೆಗೆ ₹60ಸಾವಿರ ಮುಟ್ಟಿದ್ದ ಧಾರಣೆ ಈಗ ₹44 ಸಾವಿರದ ಹೊಸ್ತಿಲಲ್ಲಿದೆ.

ಈ ಬಾರಿ ರೈತ, ಚೇಣಿದಾರ, ವ್ಯಾಪಾರಸ್ಥ ಮೂವರೂ ಇಕ್ಕಟ್ಟಿನಲ್ಲಿರುವುದು ಕಂಡು ಬರುತ್ತಿದೆ. ಸಕಾಲದಲ್ಲಿ ಮಳೆ ಆಗದ ಕಾರಣ ಒಂದು ಎಕರೆಯಲ್ಲಿ ಸುಮಾರು ನೂರು ಕ್ವಿಂಟಲ್ ಹಸಿ ಅಡಿಕೆ ಕಾಣುತ್ತಿದ್ದವರು ಶೇ 15-20ರಷ್ಟು ಫಸಲಿನ ಕೊರತೆ ಕಾಣುವಂತಾದರೆ, ದರ ಏರಿಕೆಯ ನಿರೀಕ್ಷೆಯಲ್ಲಿ ಹಸಿ ಅಡಿಕೆಯನ್ನು ₹5,500ರಿಂದ ₹6,200ರವರೆಗೆ ಖರೀದಿ ಕರಾರು ಮಾಡಿಕೊಂಡ ಚೇಣಿದಾರರಿಗೆ ದರ ಕುಸಿದಿರುವುದು ನಷ್ಟದ ತೂಗುಗತ್ತಿಯಂತೆ ಕಾಣುತ್ತಿದೆ. ಇನ್ನು ಕೆಲ ವ್ಯಾಪಾರಸ್ಥರು ₹ 50ಸಾವಿರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸಿ ದಾಸ್ತಾನು ಮಾಡಿಕೊಂಡವರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

‘ನಾವು ಚೇಣಿ ಮಾಡಿ ಈ ಬಾರಿ ಲಾಭ ಕಾಣುವುದು ಕನಸು ಎನ್ನುವಂತಾಗಿದೆ. ಕೂಲಿ ದರ ಹೆಚ್ಚಳ, ಸುಲಿಯುವವರ ಬೇಡಿಕೆ, ಬೆಲೆಯ ಏರಿಳಿತ, ಫಸಲಿನ ನಷ್ಟ, ಬಯಲುಸೀಮೆಯಲ್ಲಿ ಈ ಬಾರಿ ತೋಟಗಳಲ್ಲಿನ ತೇವಾಂಶದಿಂದ ಅಡಿಕೆ ಹಿಂಬದಿ ಒಡೆದು ಉದುರುತ್ತಿರುವುದು, ನಿಗದಿತ ಅವಧಿಯಲ್ಲಿ ಕರಾರಿನಂತೆ ರೈತರಿಗೆ ಹಣ ನೀಡಬೇಕಿರುವುದು ನಮ್ಮನ್ನು ಅನಿವಾರ್ಯವಾಗಿ ಸಿಕ್ಕ ದರಕ್ಕೆ ಮಾರುವ ಒತ್ತಡಕ್ಕೆ ನೂಕುತ್ತದೆ. ನಮ್ಮ ಶ್ರಮಕ್ಕೆ ಪ್ರತಿಫಲ ಸಿಗುವುದೋ ಇಲ್ಲವೋ ಸಮಯವೇ ಹೇಳಬೇಕು’ ಎನ್ನುತ್ತಾರೆ ಕೃಷಿಕ ಕೃಷ್ಣಮೂರ್ತಿ.

ಏರುಪೇರಿನ ಹಾದಿಯಲ್ಲಿ ಸಾಗುತ್ತಿರುವ ಅಡಿಕೆ ಕೃಷಿ ಒಂದು ಮಿತಿಗೆ ಒಳಪಡಬೇಕಿರುವುದು, ದರದಲ್ಲಿ ಸ್ಥಿರತೆ ಕಾಣಬೇಕಿರುವುದು ಇಂದಿನ ಅಗತ್ಯ ಎನ್ನುವುದು ಹಲವು ಬೆಳೆಗಾರರ ಅಭಿಪ್ರಾಯ.

‘ಆದಾಯ ಕುಸಿಯುವ ಚಿಂತೆ’

‘ನಮ್ಮದು ಈಗೀಗ ಫಸಲು ಕೊಡುತ್ತಿರುವ ಸಸಿತೋಟ. ಸಿದ್ಧಪಡಿಸಿದ ಒಣ ಅಡಿಕೆ ಕೊಡುವ (ಒಂದು ಕ್ವಿಂಟ್ ಹಸಿ ಅಡಿಕೆಗೆ 12.5 ಕೆಜಿ) ಕರಾರಿನೊಂದಿಗೆ ಚೇಣಿ ಕೊಟ್ಟಿದೆ. ತೇವಾಂಶ ಹೆಚ್ಚಾಗಿ ಕೊಯಿಲು ತಡವಾಗುತ್ತಿದೆ. ಇದರಿಂದ ಅಡಿಕೆ ಗೋಟು ಆಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಹಸಿ ಅಡಿಕೆಯ ತೂಕನಷ್ಟ, ತೇವ ಹೆಚ್ಚಾಗಿ ಹಿಂಬದಿ ಒಡೆದು ಅಡಿಕೆ ಕಾಯಿ ಉದುರಿದರೆ ಅದು ಏತಕ್ಕೂ ಬಾರದು. ಇದನ್ನೇ ನಂಬಿ ಮನೆಕಟ್ಟುವ, ಮದುವೆ ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಆದಾಯ ಕುಸಿಯುವ ಚಿಂತೆ ಮೂಡಿಸಿದೆ’ ಎನ್ನುತ್ತಾರೆ ರೈತ ಸೋಮಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT