ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಹುಲಿ ಪ್ರದೇಶಕ್ಕೆ 25ರ ಸಂಭ್ರಮ

ಅ.4ರಂದು ರಜತ ಮಹೋತ್ಸವ:
Published : 2 ಅಕ್ಟೋಬರ್ 2024, 0:19 IST
Last Updated : 2 ಅಕ್ಟೋಬರ್ 2024, 0:19 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶ ನಿರ್ಮಾಣವಾಗಿ 25 ವರ್ಷ ಪೂರ್ಣಗೊಂಡಿದ್ದು, ರಜತ ಮಹೋತ್ಸವ ಆಚರಿಸಲು ಅರಣ್ಯ ಇಲಾಖೆ ಸಜ್ಜಾಗಿದೆ.

ಅ. 4ರಂದು ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಸವ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್ ಭಾಗವಹಿಸಲಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ ಅವರು ಅಧ್ಯಕ್ಷತೆ ವಹಿಸುವರು. ಎರಡೂ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

1998ರ ಡಿಸೆಂಬರ್ 23ರಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾಗಿತ್ತು. 1974ರಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಘೋಷಣೆಯಾಗಿದ್ದು, 50 ವರ್ಷ ಪೂರ್ಣಗೊಂಡಿದೆ. ಅಲ್ಲಿಂದ ಇಲ್ಲಿಯ ತನಕ ಅರಣ್ಯ ಸಂಪತ್ತು ಮತ್ತು ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಭದ್ರಾ ಹುಲಿ ಪ್ರದೇಶ ಅಸ್ತಿತ್ವಕ್ಕೆ ಬರಲು ಮತ್ತು ಇಷ್ಟು ಸಮೃದ್ಧವಾಗಲು ಅಧಿಕಾರಿಗಳು ಸೇರಿ ಹಲವರು ಕಾರಣರಾಗಿದ್ದಾರೆ. ಎಲ್ಲರನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗುತ್ತಿದ್ದು, ಅವರನ್ನು ಗೌರವಿಸಲಾಗುವುದು ಎಂದರು.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೊಸ ಜಾಲತಾಣ, ಈ ಪ್ರದೇಶಕ್ಕೆ ಸಂಬಂಧಿಸಿದ ಕಿರುಚಿತ್ರ, ರಜತ ಮಹೋತ್ಸವದ ಸ್ಮರಣೆಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

‘ತರಬೇತಿ ಕಾರ್ಯಕ್ರಮ, ಸೈಕಲ್ ಜಾಥಾ, ಭದ್ರಾ ಉತ್ಸವ, ನಾಲ್ಕು ವಲಯದಲ್ಲಿ ಸ್ಥಳೀಯ ಕಲಾ ತಂಡಗಳಿಂದ ಬೀದಿ ನಾಟಕ, ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ಹೇಳಿದರು.

ಅಭಯಾರಣ್ಯದಲ್ಲಿ ಕಳ್ಳಬೇಟೆ ಕಡಿಮೆಯಾಗಿದ್ದು, ಅದಕ್ಕಾಗಿ ಅರಣ್ಯ ಸಿಬ್ಬಂದಿ ಹಗಲು–ರಾತ್ರಿ ಕಾಡು ಕಾಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ಅರಣ್ಯ ಮತ್ತು ವನ್ಯಜೀವಿ ಸಂಪದ್ಭರಿತವಾಗಿದೆ ಎಂದರು.

35 ಹುಲಿ 447 ಆನೆ

‘ಭದ್ರಾ ವನ್ಯಜೀವಿ ವಿಭಾಗದಲ್ಲಿ 25 ವರ್ಷಗಳ ಹಿಂದೆ ಹುಲಿಗಳ ಸಂಖ್ಯೆ 8 ಇತ್ತು. ಕಳೆದ ವರ್ಷ ನಡೆಸಿದ ಗಣತಿಯಲ್ಲಿ ಹುಲಿಗಳ ಸಂಖ್ಯೆ 35 ದಾಟಿದೆ. ಆನೆಗಳ ಸಂಖ್ಯೆ 447 ಇದ್ದರೆ ಚಿರತೆಗಳು 119 ಇದೆ’ ಎಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದರು. ಮೂರು–ನಾಲ್ಕು ಮಾತ್ರ ಇದ್ದ ಕಾಟಿಗಳು ಸಂಖ್ಯೆ ಈಗ ಜಾಸ್ತಿಯಾಗಿದೆ. ಅಭಯಾರಣ್ಯದಲ್ಲಿ ಯಾವ ಪ್ರದೇಶಕ್ಕೆ ಹೋದರೂ ಎಲ್ಲಾ ವಯಸ್ಸಿನ ಕಾಟಿಗಳು ಕಾಣಿಸುತ್ತಿವೆ ಎಂದು ವಿವರಿಸಿದರು. ಇಲ್ಲಿದ್ದ ಊರುಗಳನ್ನು ಸ್ಥಳಾಂತರ ಮಾಡಿದ ನಂತರ ಗದ್ದೆಗಳು ಹುಲ್ಲುಗಾವಲುಗಳಾಗಿವೆ. ಅವು ಸಸ್ಯಹಾರಿ ಪ್ರಾಣಿಗಳಿಗೆ ಮೇವು ಒದಗಿಸುತ್ತಿವೆ. ಮಳೆಗಾಲದಲ್ಲಿ ನೀರು ಹೀರಿಕೊಳ್ಳವ ಶೋಲಾಕಾಡುಗಳು ಬೇಸಿಗೆಯಲ್ಲಿ ನೀರು ಹರಿಸುವ ಮೂಲಕ ವರ್ಷವಿಡಿ ನೀರಿನ ಹರಿವಿರುವಂತೆ ನೋಡಿಕೊಳ್ಳುತ್ತಿವೆ. ಇದರಿಂದಾಗಿ ಸೋಮವಾಹಿನಿ ನದಿ ವರ್ಷವಿಡೀ ಹರಿಯುತ್ತಿದ್ದು ಕಳೆದ ವರ್ಷ ತೀವ್ರ ಬರಗಾಲವಿದ್ದರೂ ವನ್ಯಜೀವಿಗಳಿಗೆ ನೀರಿನ ತೊಂದರೆ ಆಗಲಿಲ್ಲ ಎಂದು ಹೇಳಿದರು. ಭದ್ರಾ ಅಭಯಾರಣ್ಯದಿಂದ ಆನೆಗಳು ಜನವಸತಿ ಪ್ರದೇಶಕ್ಕೆ ದಾಟಿ ಹೋಗಲು ಎಲ್ಲೂ ಅವಕಾಶ ಇಲ್ಲ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುತ್ತೋಡಿಯಲ್ಲಿ ಎಲ್ಲೂ ವಿದ್ಯುತ್ ಕಂಬಗಳನ್ನು ಅಳವಡಿಸಿಲ್ಲ. ಇಲ್ಲಿಗೆ ಸಾಕಾಗುವಷ್ಟು ಟರ್ಬೈನ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿನ ವನ್ಯಜೀವಿಗಳಿಗೆ ಯಾವುದೇ ತೊಂದರೆ ಇಲ್ಲ. ವನ್ಯಜೀವಿಗಳಿಂದಲೂ ಯಾರಿಗೂ ತೊಂದರೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT