ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು | ವಾಯುಮಾಲಿನ್ಯ: ಪಿಎಸ್‌ಐ ಬಳಸುತ್ತಿದ್ದ ಜೀಪ್‍ ವಾಪಸ್‌ ಪಡೆದ ಇಲಾಖೆ

ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಬೈಕ್‌ನಲ್ಲೇ ಗಸ್ತು
Published 9 ಫೆಬ್ರುವರಿ 2024, 16:16 IST
Last Updated 9 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಬೀರೂರು: ಹದಿನೈದ ವರ್ಷಗಳ ಹಳೆಯ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಬೀರೂರು ಪೊಲೀಸ್ ಠಾಣೆಯ ಪಿಎಸ್‌ಐ ಬಳಸುತ್ತಿದ್ದ ಜೀಪ್‍ ಅನ್ನು ಹಿಂಪಡೆಯಲಾಗಿದೆ. ಆದರೆ, 15 ದಿನಗಳು ಕಳೆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಪಿಎಸ್‍ಐ ಬೈಕ್‍ನಲ್ಲಿ ಸಂಚರಿಸುವಂತಾಗಿದೆ.

ಬೀರೂರು ಪೊಲೀಸ್ ಠಾಣೆ 30 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಠಾಣೆಯ ವ್ಯಾಪ್ತಿಯೊಳಗೆ 38 ಕ್ಕೂ ಹೆಚ್ಚು ಗ್ರಾಮಗಳು ಬರುತ್ತವೆ. ಇಲ್ಲಿ ವರ್ಷವಿಡೀ ಜಾತ್ರೆ, ಉತ್ಸವಗಳು ನಡೆಯುತ್ತವೆ.  ಕಳ್ಳತನ, ಆತ್ಮಹತ್ಯೆ, ಕೊಲೆ, ಅಪಘಾತ, ಸಾರ್ವಜನಿಕ ಕಾರ್ಯಕ್ರಮಗಳು, ಮೆರವಣಿಗೆ ಸೇರಿದಂತೆ ಗುಂಪು ಘರ್ಷಣೆಗಳಂತಹ ಅಪರಾಧ ಪ್ರಕರಣಗಳು ನಡೆದಾಗ ಪೊಲೀಸರು ಸ್ಥಳಕ್ಕೆ ಧಾವಿಸಬೇಕಾದ ಅನಿವಾರ್ಯತೆ ಇದೆ. ಆದರೆ, ಜೀಪ್  ಇಲ್ಲದಿದರುವುದು ಸಂಕಷ್ಟ ತಂದೊಡ್ಡಿದೆ.

ಬೀರೂರು ಠಾಣೆಗೆ 2007ನೇ ಸಾಲಿನಲ್ಲಿ ಪಿಎಸ್‌ಐ ತಮ್ಮ ಸರಹದ್ದನಲ್ಲಿ ಸಂಚರಿಸಿ ಬಂದೋಬಸ್ತ್ ನೀಡಲು ಆದ್ಯತೆಯ ಮೇರೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ 17 ವರ್ಷಗಳಿಂದ ಈ ವಾಹನ ಇಲಾಖೆಗೆ ತನ್ನನ್ನು ಸಮರ್ಪಿಸಿಕೊಂಡು ಈಗ ಅದು ಸುವ್ಯವಸ್ಥೆಯಲ್ಲಿಲ್ಲ ಎನ್ನುವ ಕಾರಣಕ್ಕೆ ವಾಹನವನ್ನು ಹಿಂಪಡೆಯಲಾಗಿದೆ. ಪರಿಸರ ಮಾಲಿನ್ಯ ತಡೆಯಲು ವಾಹನ ಹಿಂಪಡೆದಿರುವುದು ಸರಿಯಷ್ಟೆ, ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಹಿಂಪಡೆದಿದ್ದರೆ ಯಾವುದೇ ಸಮಸ್ಯೆಗಳು ಇರುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಬೀರೂರು ಪೊಲೀಸ್ ಪಿಎಸ್‌ಐ ಸಜಿತ್ ಕುಮಾರ್ ಪ್ರತಿಕ್ರಿಯಿಸಿ, ‘ವಾಯು ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ 15 ವರ್ಷ ಹಳೆಯ ವಾಹನಗಳನ್ನು ಚಲಾಯಿಸುವಂತಿಲ್ಲ ಎನ್ನುವುದು ಹಸಿರುಪೀಠದ ಆದೇಶವಾಗಿದ್ದು, ಇಲಾಖೆ ವತಿಯಿಂದ ಹೊಸ ವಾಹನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರ ಅನುಮೊದನೆ ನೀಡುವವರೆಗೂ ದ್ವಿಚಕ್ರ ಅಥವಾ ಗಸ್ತು ವಾಹನವಾಗಿರುವ 112 ಬಳಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ’ ಎಂದರು.

ಬೀರೂರು ಪೊಲೀಸ್‌ಠಾಣೆ
ಬೀರೂರು ಪೊಲೀಸ್‌ಠಾಣೆ

‘ಶೀಘ್ರದಲ್ಲೇ ಹೊಸ ವಾಹನ’

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಪ್ರತಿಕ್ರಿಯಿಸಿ ಈಗಾಗಲೇ ಜಿಲ್ಲೆಯ 5-6 ಠಾಣೆಗಳ ಉಪನಿರೀಕ್ಷಕರ ಜೀಪುಗಳು ಅವಧಿ ಮೀರಿದವಾಗಿವೆ ಅಂತಹ ವಾಹನಗಳನ್ನು ಗುರುತಿಸಿ ಹಿಂಪಡೆಯಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಹೊಸ ವಾಹನಗಳನ್ನು ನೀಡಲಾಗುತ್ತದೆ. ಅಲ್ಲಿಯವರೆಗೆ 112 ಮತ್ತು ಇಆರ್‌ಎಸ್‍ಎಸ್ ವಾಹನಗಳನ್ನು ಬಳಸಲು ನಿರ್ದೇಶನ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT