ಗುರುವಾರ , ಜೂನ್ 24, 2021
23 °C
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಜಿಂದಾಲ್ ಕಂಪೆನಿಗೆ ಜಮೀನು ಮಾರಾಟ ಮಾಡದಂತೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಜಿಂದಾಲ್ ಕಂಪೆನಿಗೆ ಜಮೀನನ್ನು ಮಾರಾಟ ಮಾಡಬಾರದು. ಬೋಗ್ಯದ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಆವರಣದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಬಿಜೆಪಿ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, 2006–7ನೇ ಸಾಲಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್ ಕಂಪೆನಿಗೆ 3,667 ಎಕರೆ ಜಮೀನನ್ನು 10 ವರ್ಷಗಳಿಗೆ ಬೋಗ್ಯಕ್ಕೆ ನೀಡಲಾಗಿತ್ತು. ಈ ಪೈಕಿ 330 ಎಕರೆ ಜಮೀನನ್ನು ಮೂಲಸೌಕರ್ಯಗಳಿಗೆ ನೀಡಲಾಗಿತ್ತು. ಈಗ ಬೋಗ್ಯದ ಅವಧಿ ವಿಸ್ತರಿಸುವ ಬದಲು ರಾಜ್ಯ ಸಮ್ಮಿಶ್ರ ಸರ್ಕಾರ ಜಮೀನನ್ನು ಕಂಪೆನಿಗೆ ಕಡಿಮೆ ಹಣಕ್ಕೆ ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಜಿಂದಾಲ್ ಕಂಪೆನಿ ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಕರಾರನ್ನು ಉಲ್ಲಂಘಿಸಿದೆ. ಕಂಪೆನಿಯ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳಿಗೆ ಕನ್ನಡಿಗರನ್ನು ನೇಮಕ ಮಾಡಿಕೊಂಡಿಲ್ಲ. ಕೃಷ್ಣಾ ನದಿಯ 2ಟಿಎಂಸಿ ನೀರಿನ ಬದಲು 5 ಟಿಎಂಸಿ ನೀರನ್ನು ಬಳಕೆ ಮಾಡುತ್ತಿದೆ. ಮೂಲ ಸೌಕರ್ಯಗಳಿಗೆ ನೀಡಿದ್ದ 300 ಎಕರೆ ಜಮೀನನಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಅದರ ಬಗ್ಗೆ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್, ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಜಿಂದಾಲ್ ಕಂಪೆನಿಗೆ ಜಮೀನು ಮಾರಾಟ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿರುವುದನ್ನು ರದ್ದುಗೊಳಿಸಬೇಕು. ಜಮೀನಿನ ಬೋಗ್ಯದ ಅವಧಿ ವಿಸ್ತರಿಸಬೇಕು. ಇಲ್ಲವಾದಲ್ಲಿ ಪಕ್ಷದ ವತಿಯಿಂದ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಐಎಂಎ ಸಂಸ್ಥೆ ಬಡ ಮುಸಲ್ಮಾನರಿಗೆ ಮೋಸ ಮಾಡಿದೆ.

ಈ ಹಗರಣದಲ್ಲಿ ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ರೋಷನ್ ಬೇಗ್ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಐಎಂಎ ಸಂಸ್ಥೆ ದೇಶದ ವಿವಧೆಡೆ ಶಾಖೆಗಳನ್ನು ಹೊಂದಿದೆ. ಅದರ ಮುಖ್ಯಸ್ಥ ದುಬೈಗೆ ಪರಾರಿಯಾಗಿದ್ದಾನೆ. ಎಸ್‌ಐಟಿ ತನಿಖೆಯಿಂದ ಅವ್ಯವಹಾರ ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಇಡಿ(ಜಾರಿ ನಿರ್ದೇಶನಾಲಯ)ಗೆ ವಹಿಸಬೇಕು ಎಂದು ಆಗ್ರಹಿಸಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಪಕ್ಷದ ಮುಖಂಡರಾದ ಎಚ್.ಡಿ.ತಮ್ಮಯ್ಯ, ವರಸಿದ್ಧಿವೇಣುಗೋಪಾಲ್, ಸಿ.ಆರ್.ಪ್ರೇಂ ಕುಮಾರ್, ಪುಣ್ಯಪಾಲ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು