ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಕುಡಿಯುವ ನೀರಿಗೆ ಕೊಳವೆ ಬಾವಿಯೇ ಆಸರೆ

ಎನ್‌.ಆರ್‌.ಪುರ: ಪಟ್ಟಣ ವ್ಯಾಪ್ತಿಯಲ್ಲಿ ಸದ್ಯಕ್ಕಿಲ್ಲ ನೀರಿನ ಸಮಸ್ಯೆ
Published 3 ಏಪ್ರಿಲ್ 2024, 5:36 IST
Last Updated 3 ಏಪ್ರಿಲ್ 2024, 5:36 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಭದ್ರಾನದಿ ಹಾಗೂ ಹಲವು ಹಳ್ಳಗಳು ಹರಿಯುತ್ತಿದ್ದರೂ, ಪಟ್ಟಣದ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿಗೆ ಕೊಳವೆ ಬಾವಿಯೇ ಆಸರೆಯಾಗಿದೆ.

ಪಟ್ಟಣದ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು ಸುಮಾರು 7,458 ಜನಸಂಖ್ಯೆ ಇದೆ. ಒಟ್ಟು 2,638 ಮನೆಗಳಿದ್ದು 1,478 ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಇದೆ. ಕೆಲವು ಮನೆಗಳಿಗೆ ಸ್ವಂತ ಕೊಳವೆಬಾವಿ ಇದೆ. ಕುಡಿಯುವ ನೀರು ಪೂರೈಸಲು ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ವ್ಯಾಪ್ತಿಯಲ್ಲಿ 39 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. 6 ಓವರ್ ಹೆಡ್ ಟ್ಯಾಂಕ್‌ಗಳ ಮೂಲಕ ಪ್ರತಿನಿತ್ಯ 1ಎಂಎಲ್‌ಡಿ ನೀರು ಸರಬರಾಜು ಆಗುತ್ತದೆ. ನಲ್ಲಿ ಸಂಪರ್ಕವಿರುವ ಮನೆಗೆ ಪ್ರತಿ ದಿನ 1 ಗಂಟೆ ನೀರು ಪೂರೈಸಲಾಗುತ್ತದೆ.

ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಮೆಣಸೂರು ಗ್ರಾಮದ ಹೊಸ ಸೇತುವೆ ಬಳಿಯ ಕಬ್ಬಿನ ಹಳ್ಳಕ್ಕೆ ₹10ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲಾಗಿತ್ತು. ಆದರೆ, ಬ್ಯಾರೇಜ್‌ನಲ್ಲಿ ನಿರೀಕ್ಷಿತ ಪ್ರಮಾಣದ ನೀರು ಶೇಖರಣೆ ಆಗದೆ, ವಿಫಲವಾಗಿದ್ದರಿಂದ ಇದು ಪಟ್ಟಣ ಪಂಚಾಯಿತಿಗೆ ಇನ್ನೂ ಹಸ್ತಾಂತರಗೊಂಡಿಲ್ಲ. ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಹೆಬ್ಬೆ ಹತ್ತಿರದ ಭದ್ರಾ ಎಡದಂಡೆಯಿಂದ ಪಟ್ಟಣಕ್ಕೆ ಹಾಗೂ ಮಾರ್ಗ ಮಧ್ಯೆ ಬರುವ 20 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಯಾರಿಸಿದ್ದ ₹42.70 ಕೋಟಿ ಮೊತ್ತದ ಅಂದಾಜು ಪಟ್ಟಿಯನ್ನು 2016ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಬದಲಾದ ಬೆನ್ನಲ್ಲೇ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಜಲಜೀವನ್ ಮಿಷನ್ ಯೋಜನೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಮತ್ತು ಇತರೆ 155 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಯೋಜನೆಯ ಪ್ರಸ್ತಾವವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಕ್ಕೆ ಪಟ್ಟಣ ಪಂಚಾಯಿತಿಯಿಂದ ಸಲ್ಲಿಸಲಾಗಿತ್ತು. ಮುತ್ತಿನಕೊಪ್ಪ ಗ್ರಾಮದ ಹತ್ತಿರವಿರುವ ತುಂಗಾ ನದಿಯಿಂದ ನೀರೆತ್ತಿ, ಗ್ರಾಮೀಣ ಭಾಗದ ಮನೆಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ. ಪ್ರಸ್ತುತ ಅಮೃತ್ 1.0 ಯೋಜನೆಗೆ ಪಟ್ಟಣ ಪಂಚಾಯಿತಿ ಆಯ್ಕೆಯಾಗಿದೆ.

ನರಸಿಂಹರಾಜಪುರದ ಪಟ್ಟಣದದಲ್ಲಿರುವ ಓವರ್ ಹೆಡ್ ಟ್ಯಾಂಕ್
ನರಸಿಂಹರಾಜಪುರದ ಪಟ್ಟಣದದಲ್ಲಿರುವ ಓವರ್ ಹೆಡ್ ಟ್ಯಾಂಕ್

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 9ನೇ ವಾರ್ಡ್ ವ್ಯಾಪ್ತಿಯಲ್ಲಿರುವ ರಾಘವೇಂದ್ರ ಬಡಾವಣೆಯಲ್ಲಿ ಹಲವು ತಿಂಗಳಿನಿಂದ ನೀರಿನ ಸಮಸ್ಯೆಯಿದೆ. ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಲಿ

-ಮಂಜುನಾಥ್ ರಾಘವೇಂದ್ರ ಬಡಾವಣೆ ಎನ್‌.ಆರ್‌.ಪುರ

ಪ್ರತಿನಿತ್ಯ 1 ಗಂಟೆ ನೀರು

ನರಸಿಂಹರಾಜಪುರದ ಪಟ್ಟಣದ ವ್ಯಾಪ್ತಿಯಲ್ಲಿ ಸದ್ಯ ಪ್ರತಿನಿತ್ಯ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದೇವೆ. ಕುಡಿಯುವ ನೀರಿಗಾಗಿ ಅನುದಾನ ಮೀಸಲಿಡಲಾಗಿದೆ. ನೀರಿನ ಸಮಸ್ಯೆ ಉದ್ಭವವಾದರೆ ಖಾಸಗಿ ಕೊಳವೆ ಬಾವಿ ಹೊಂದಿರುವವರ ಮಾಹಿತಿ ಸಂಗ್ರಹಿಸಲಾಗಿದ್ದು ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಪ್ರಜಾವಾಣಿಗೆ ತಿಳಿಸಿದರು.

ಅಂಕಿ ಅಂಶಗಳು

11 ವಾರ್ಡ್‌ಗಳು

2638 ಮನೆಗಳು

1478 ನಲ್ಲಿ ಸಂಪರ್ಕ

39 ಕೊಳವೆ ಬಾವಿ

10ಲಕ್ಷ ಲೀಟರ್ ನೀರು ಪ್ರತಿನಿತ್ಯ ಪೂರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT