ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗದಡಿ ಬಾಕ್ಸ್‌ ಅಳವಡಿಕೆ ಪೂರ್ಣ

ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾಮಗಾರಿ
Last Updated 18 ಜೂನ್ 2020, 11:33 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಬಳಿ ರೈಲು ಮಾರ್ಗದಡಿ ಫ್ಯಾಬ್ರಿಕೇಟೆಡ್‌ ಬಾಕ್ಸ್‌ (ಸುರಂಗ) ಅಳವಡಿಕೆ ಕಾರ್ಯವನ್ನು ಬುಧವಾರ ಮುಗಿಸಿ, ದ್ವಿಪಥದಲ್ಲಿ ರೈಲು
ಗಳ ಸಂಚಾರಕ್ಕೆ ಅನುವು ಮಾಡಲಾಗಿದೆ.

ಅಜ್ಜಂಪುರ ಮತ್ತು ಶಿವನಿ ರೈಲು ನಿಲ್ದಾಣ ನಡುವೆ ಹೆಬ್ಬೂರು ಬಳಿ ರೈಲು ಮಾರ್ಗದಡಿ ಫ್ಯಾಬ್ರಿಕೇಟೆಡ್‌ ಬಾಕ್ಸ್‌ ತೂರಿಸುವ ಕಾರ್ಯವನ್ನು ರೈಲ್ವೆ ಎಂಜಿನಿಯರಿಂಗ್‌ ವಿಭಾಗ ಕೈಗೆತ್ತಿಕೊಂಡಿತ್ತು.

‘ಅವಳಿಕಿಂಡಿಯ ಕಾಂಕ್ರಿಟ್‌ ಬಾಕ್ಸ್‌ ಅನ್ನು ಮಾರ್ಗದ ಕೆಳಗೆ ತೂರಿಸಲಾಗಿದೆ. 26 ದಿನಗಳಲ್ಲಿ ಈ ಕಾರ್ಯ ಮುಗಿಸಲಾಗಿದೆ. ಈ ಬಾಕ್ಸ್‌ 42 ಮೀಟರ್‌ ಉದ್ದ, ಅಗಲ 14 ಮೀಟರ್‌ ಹಾಗೂ ಎತ್ತರ 7 ಮೀಟರ್‌ ಇದೆ. ಸುಮಾರು 40 ಸಿಬ್ಬಂದಿ ಅಲ್ಲಿಯೇ ಬೀಡುಬಿಟ್ಟು ಕಾರ್ಯನಿರ್ವಹಿಸಿ, ಅತ್ಯಂತ ವೇಗವಾಗಿ ಕೆಲಸ ಮುಗಿಸಿದ್ದಾರೆ’ ಎಂದು ಮೈಸೂರು ರೈಲ್ವೆ ವಿಭಾಗದ ಎಂಜಿನಿಯರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಕ್ಸ್‌ ಅಳವಡಿಕೆ ಬಹಳ ಸವಾಲಿನ ಕೆಲಸ ಇದಾಗಿತ್ತು. ನಿತ್ಯ 25ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದವು. ಅತ್ಯಾಧುನಿಕ ತಂತ್ರಜ್ಞಾನ, ವಿಧಾನಗಳನ್ನು ಬಳಸಿ ತ್ವರಿತವಾಗಿ ಮುಗಿಸಿದ್ದೇವೆ. ಕೋವಿಡ್‌ ತಲ್ಲಣದ ನಡುವೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಹೇಳಿದರು.

‘ರೈಲ್ವೆಯವರು ಅವರ ಬಾಬ್ತಿನ ಕೆಲಸ ಪೂರೈಸಿದ್ದಾರೆ. ಇನ್ನು ರಕ್ಷಣಾ ಗೋಡೆ ನಿರ್ಮಾಣದಂತಹ ಸಣ್ಣಪುಟ್ಟ ಕೆಲಸಗಳಿವೆ. ಇನ್ನು 15 ದಿನಗಳಲ್ಲಿ ಅದು ಮುಗಿಯಲಿದೆ’ ಎಂದು ಎಂದು ಭದ್ರಾ ಮೇಲ್ಡಂಡೆ ಅಜ್ಜಂಪುರ ವಿಭಾಗದ ಕಿರಿಯ ಎಂಜಿನಿಯರ್‌ ರಾಕೇಶ್‌ ಆನಂದ್‌ ತಿಳಿಸಿದರು.

ಕಾಮಗಾರಿ ನಿಟ್ಟಿನಲ್ಲಿ ದ್ವಿಪಥ ಮಾರ್ಗದಲ್ಲಿ (ಅಜ್ಜಂಪುರ– ಶಿವನಿವರೆಗೆ) ಏಕಪಥ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲಾಗಿತ್ತು. ಬಾಕ್ಸ್‌ ತೂರಿಸುವ ಒಂದು ಪಥದ ಹಳಿಗಳನ್ನು ತೆಗೆಯಲಾಗಿತ್ತು. ಈಗ ಮತ್ತೆ ಅಳವಡಿಸಲಾಗಿದೆ.

ರೈಲು ಮಾರ್ಗದ ಕೆಳಗೆ ಬಾಕ್ಸ್‌ ಅಳವಡಿಸಬೇಕಿದ್ದ ಸ್ಥಳಕ್ಕೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರು ಈಚೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಾಮಗಾರಿ ವೇಗವಾಗಿ ಮಾಡಿಸಿಕೊಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT