ಬುಧವಾರ, ಜನವರಿ 19, 2022
18 °C

ಕಡೂರು: ಕಾಲುಬಾಯಿ ಜ್ವರ ಉಲ್ಬಣ, ಹೈನುಗಾರರ ಆದಾಯಕ್ಕೆ ಭಾರಿ ಹೊಡೆತ

ಬಾಲು ಮಚ್ಚೇರಿ Updated:

ಅಕ್ಷರ ಗಾತ್ರ : | |

Prajavani

ಕಡೂರು: ಅಕಾಲಿಕ ಮಳೆಯಿಂದ ರೈತರಿಗೆ ಬೆಳೆ ನಷ್ಟ ಒಂದೆಡೆಯಾದರೆ, ಮತ್ತೊಂದೆಡೆ ಜಾನುವಾರುಗಳಿಗೆ ಉಲ್ಬಣಿಸಿರುವ ಕಾಲುಬಾಯಿ ಜ್ವರ ರೋಗ ಆತಂಕ ಹೆಚ್ಚಿಸಿದೆ.

ಕಾಲುಬಾಯಿ ಜ್ವರಕ್ಕೆ ತುತ್ತಾದ ಹಸುಗಳು ಇದ್ದಕ್ಕಿದ್ದಂತೆ ಮಂಕಾಗಿ ನೆಲಹಿಡಿದು ಮಲಗುತ್ತವೆ. ಏನನ್ನೂ ತಿನ್ನದೆ ನಿಶ್ಯಕ್ತಿಗೊಳಗಾಗಿ ಮಲಗಿದಲ್ಲೇ ನರಳುತ್ತವೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ರೋಗಬಾಧೆ ಗೊಳಗಾದ ಹಸು ಓಡಾಡಿದ ಜಾಗದಲ್ಲಿ ಆರೋಗ್ಯವಂತ ಹಸು ಓಡಾಡಿದರೆ ಅದಕ್ಕೂ ಜ್ವರ ಬರುತ್ತದೆ. ಈ ಕಾರಣದಿಂದಲೇ ರೈತರು ಹಸುಗಳನ್ನು ಮೇಯಿಸಲು ಹೊರಬಿಡಲು ಹಿಂದೇಟು ಹಾಕುತ್ತಿದ್ದಾರೆ. ಮನೆಯೊಳಗೇ ಕಟ್ಟಿ ಹುಲ್ಲು ಮೇಯಿಸುವ ಅನಿವಾರ್ಯತೆ ಎದುರಾಗಿದೆ.

ಹೈನುಗಾರಿಕೆಗೆ ರೈತರು ಹೆಚ್ಚಾಗಿ ಎಚ್.ಎಫ್. ಹಸುಗಳನ್ನೇ ಸಾಕಿದ್ದಾರೆ. ಇವುಗಳಿಗೆ ರೋಗ ತಗುಲಿದರೆ ಚೇತರಿಸಿಕೊಳ್ಳಲು ಬಹು ಸಮಯ ಬೇಕಿದೆ. ನಾಟಿ ಹಸುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಹೆಚ್ಚು ತೊಂದರೆಯಾಗದೆ ಚೇತರಿಸಿಕೊಳ್ಳುತ್ತವೆ. ಈಗ ಕಾಲು ಬಾಯಿ ಜ್ವರ ಬಂದಿರುವ ಬಹುತೇಕ ಹಸುಗಳು ಎಚ್.ಎಫ್. ಹಸುಗಳೇ ಆಗಿವೆ ಎಂಬುದು ಹೈನುಗಾರರೊಬ್ಬರ ಅಳಲು.

ತಾಲ್ಲೂಕಿನಲ್ಲಿ ಉಳುಮೆ ಎತ್ತುಗಳೂ ಸೇರಿದಂತೆ 85 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಪಶು ಸಂಗೋಪನಾ ಇಲಾಖೆಯಲ್ಲಿ ಕಾಲು ಬಾಯಿ ಜ್ವರಕ್ಕೆ ಅಗತ್ಯ ಲಸಿಕೆಗಳು ಇನ್ನೂ ಸರಬರಾಜು ಆಗಿಲ್ಲ. ಒಂದು ವಾರದೊಳಗೆ ಲಸಿಕೆ ಪೂರೈಕೆಯಾಗಲಿದೆ ಎಂಬ ಉತ್ತರ ಇಲಾಖೆಯಿಂದ ಬಂದಿದೆ. ಇದರ ನಡುವೆ ಸುಮಾರು 15 ಸಾವಿರ ಲಸಿಕೆಗಳನ್ನು ರೋಗಪೀಡಿತ ಗ್ರಾಮಗಳಲ್ಲಿ ನೀಡಲಾಗಿದೆ. ಆದರೂ ಹಸುಗಳಲ್ಲಿ ಜ್ವರದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಗರ್ಭ ಧರಿಸಿರುವ ಹಸುಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ.

ಡಿಸೆಂಬರ್ ಮೊದಲ ವಾರದಲ್ಲಿ ಈ ಜ್ವರಕ್ಕೆ ಬೇಕಾದ ಲಸಿಕೆ ರಾಷ್ಟ್ರೀಯ ಅಭಿಯಾನದಡಿ ಪೂರೈಕೆಯಾಗಲಿದೆ. ತಾಲ್ಲೂಕಿನಲ್ಲಿ ಕುರಿ ಮತ್ತು ಮೇಕೆಗಳನ್ನು ಹೊರತುಪಡಿಸಿ 85 ಸಾವಿರ ಡೋಸ್ ಲಸಿಕೆಯ ಅಗತ್ಯವಿದೆ. ತುರ್ತು ಚಿಕಿತ್ಸಾ ಕ್ರಮಗಳಿಗೆ ಬೇಕಾದ ಫಾಸ್ಪರಸ್, ಮಿನರಲ್ಸ್, ಮಿಕ್ಸ್ಚರ್ಸ್, ಐರನ್ ಟಾನಿಕ್‌ಗಳು ಉಚಿತವಾಗಿ ಪಶು ಇಲಾಖೆಯಲ್ಲಿ ಲಭ್ಯವಿದೆ. ಆದರೆ, ಕೆಲವೆಡೆ ರೈತರು ಖಾಸಗಿಯಾಗಿ ಖರೀದಿಸಿ ಪಶುಗಳಿಗೆ ಸ್ವಯಂ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಇದು ತಪ್ಪು. ಪಶುಗಳಿಗೆ ಯಾವ ರೋಗ ಬಂದಿದೆ, ಚಿಕಿತ್ಸೆ ಏನೆಂಬುದನ್ನು ಪಶು ಇಲಾಖೆಯ ಸಿಬ್ಬಂದಿ ಪರಿಶೀಲಿಸಿ ಅಗತ್ಯ ಚಿಕಿತ್ಸೆ ನೀಡುತ್ತಾರೆ. ರೈತರು ಇದನ್ನು ಗಮನಿಸಬೇಕು. ಕಾಲು ಬಾಯಿ ಜ್ವರದಿಂದ ಪಶುಗಳ ಮರಣ ಪ್ರಮಾಣ ಶೇ 0.3 ಇದೆ. ಹೆಚ್ಚಿನ ಆತಂಕ ಬೇಡ. ಆದರೂ ಎಚ್ಚರಿಕೆ ಅಗತ್ಯ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಬಿ.ಉಮೇಶ್.

ಕಾಲುಬಾಯಿ ಜ್ವರ ಹೆಚ್ಚಿರುವ ಗ್ರಾಮಗಳು: ಸಿಂಗಟಗೆರೆ, ಬೀರೂರು, ದೇವನೂರು, ನಿಡಘಟ್ಟ,ದೇವನೂರು, ಮಚ್ಚೇರಿ, ಎಂ.ಕೋಡಿಹಳ್ಳಿ, ಮಲ್ಲಿದೇವಿಹಳ್ಳಿ.

ಹಸುಗಳಿಗೆ ಕಾಲುಬಾಯಿ ಜ್ವರ ಹರಡುತ್ತಿರುವುದರಿಂದ ಹೈನುಗಾರಿಕೆ ನಡೆಸುತ್ತಿರುವ ರೈತರು ಆತಂಕ ಕ್ಕೊಳಗಾಗಿದ್ದು, ಶೀಘ್ರ ಲಸಿಕೆ ನೀಡುವಲ್ಲಿ ಸಂಬಂಧಿಸಿದವರು ಮುಂದಾಗ ಬೇಕೆಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು