ಕೊಟ್ಟಿಗೆಗಾರ: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಜೆಡಿಎಸ್‌ನಲ್ಲೂ ಬಣ ರಾಜಕೀಯ ಭುಗಿಲೆದ್ದಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅವರಿಗೆ ಜೆಡಿಎಸ್ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ಅದೇ ಪಕ್ಷದ ಕೆಲ ಮುಖಂಡರು, ಕಾರ್ಯಕರ್ತರು ಬಣಕಲ್‌ನಲ್ಲಿ ಸೋಮವಾರ ಬಹಿರಂಗ ಸಭೆ ನಡೆಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಲಕ್ಷ್ಮಣಗೌಡ ಮಾತ ನಾಡಿ, ‘ಬಿ.ಬಿ ನಿಂಗಯ್ಯ ಪಕ್ಷದ ಕಾರ್ಯ ಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಎಚ್.ಡಿ ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ನಿಂಗಯ್ಯ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದರೂ ಮೊದಲ ಪಟ್ಟಿಯಲ್ಲೇ ಅವರ ಹೆಸರು ಸೇರಿಸಿದ್ದು ಸರಿಯಲ್ಲ. ಅವರನ್ನು ಹೊರತು ಪಡಿಸಿ ಬೇರೆ ಯಾರಿಗೇ ಟಿಕೆಟ್ ನೀಡಿದರೂ ಬೆಂಬಲ ನೀಡುತ್ತೇವೆ’ ಎಂದರು.
‘ಪಂಚರತ್ನ ರಥಯಾತ್ರೆ ತಾಲ್ಲೂಕಿಗೆ ಬಂದ ಸಂದರ್ಭದಲ್ಲಿ 5 ಹೋಬಳಿಗಳನ್ನು ಕಡೆಗಣಿಸಲಾಗಿದೆ. ಬಿ.ಬಿ. ನಿಂಗಯ್ಯ ಅವರನ್ನು ಬದಲಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ವಿರೋಧ ವ್ಯಕ್ತಪಡಿಸಲಾಗುವುದು’ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡ ಅಜಿತ್‍ಗೌಡ ಬಾಳೂರು ಮಾತನಾಡಿ, ‘ಬಹಿರಂಗ ಸಭೆಯಲ್ಲಿ ಸೇರಿರುವುದು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು. ಬಿ.ಬಿ ನಿಂಗಯ್ಯ ಅವರ ಬಗ್ಗೆ ಕಾರ್ಯಕರ್ತರಿಗೆ ಬೇಸರವಿದೆ. ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಅವರು ಮತದಾನಕ್ಕೆ ಮೂರು ದಿನ ಇದ್ದಾಗ ಮೊಬೈಲ್ ಸ್ವಿಚ್‌ಆಫ್ ಮಾಡಿ ಪಲಾಯನ ಮಾಡಿದ್ದರು’ ಎಂದು ದೂರಿದರು.
ಮುಖಂಡ ರಮೇಶ್ ಬಾನಳ್ಳಿ ಮಾತನಾಡಿ, ‘ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದ ನಿಂಗಯ್ಯ ಅವರಿಗೆ ಟಿಕೆಟ್ ನೀಡುವುದಕ್ಕೆ ವಿರೋಧವಿದೆ’ ಎಂದರು.
ನಿಂಗಯ್ಯ ವಿರುದ್ಧ ಸಭೆಯಲ್ಲಿ ಸಹಿ ಸಂಗ್ರಹ ಮಾಡಲಾಯಿತು. ಮುಖಂಡ ರಾದ ಕೆಸುವಿನಮನೆ ಬೈರೇಗೌಡ, ಭಾರತಿ ಎಚ್.ಎಸ್. ಮಂಜುನಾಥ್, ಮಂಜುನಾಥ್ ಬೆಟ್ಟಗೆರೆ, ಅಮ್ಜದ್, ಗೋಪಾಲಗೌಡ, ದೇವರಾಜ್, ರಾಜೇಂದ್ರ, ರವಿ, ಮಹೇಶ್, ಅನಿಲ್, ಸುಬ್ಬೆಗೌಡ, ಸೋಮೇಶ್, ರಘು, ಪ್ರವೀಣ್, ಲವ, ಬೈರೇಗೌಡ, ತಮ್ಮಣ್ಣ, ನಾಗರಾಜ್, ವಾಸು, ಆನಂದ್, ದೇವದಾಸ್, ಅಶೋಕ್, ಸುರೇಂದ್ರ, ಶಶಿಕಾಂತ್, ರಮೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.