ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿ ಟ್ರ್ಯಾಕ್ಟರ್ ಎಳೆದರು!

ಕರುಮಾರಿಯಮ್ಮ ಕರಗ ಉತ್ಸವದಲ್ಲಿ ಮೌಢ್ಯ ಆಚರಣೆ
Published 3 ಮೇ 2024, 14:09 IST
Last Updated 3 ಮೇ 2024, 14:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡು ಟ್ರ್ಯಾಕ್ಟರ್, ಗೂಡ್ಸ್‌ ಆಟೊ ಎಳೆದರು, ವಾಹನದ ಮೇಲೆ ಕಟ್ಟಿದ್ದ ಮರದ ಕಂಬಕ್ಕೆ ಬೆನ್ನಿಗೆ ಚುಚ್ಚಿದ್ದ ಕೊಂಡಿಗಳಿಂದ ನೇತಾಡಿದರು... ಇದು ನಗರದ ತಮಿಳು ಕಾಲೊನಿ ಕರುಮಾರಿಯಮ್ಮ ದೇವಿ ಕರಗ ಮಹೋತ್ಸವದ ಅಂಗವಾಗಿ ಭಕ್ತರು ಹರಕೆ ತೀರಿಸಿದ ಪರಿ.

ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿ ಹಲವು ಸಮಸ್ಯೆಗಳಿಗೆ ದೇವಿಯ ಬಳಿ ಹರಕೆ ಕಟ್ಟಿಕೊಳ್ಳುವ ಭಕ್ತರು, ಜಾತ್ರೆಯ ದಿನ ಹರಕೆ ತೀರಿಸಲು ಮುಂದಾಗುತ್ತಾರೆ. ದಂಟರಮಕ್ಕಿ ಕೆರೆ ಏರಿಯ ಮಧ್ಯಭಾಗದಿಂದ ಆರಂಭವಾಗುವ ಮೆರವಣಿಗೆ ಸಂತೆ ಮೈದಾನದಲ್ಲಿರುವ ಕರುಮಾರಿಯಮ್ಮ ದೇಗುಲಕ್ಕೆ ತಲುಪುತ್ತದೆ.

ಬೆನ್ನಿಗೆ ಮೊದಲೇ ಕಬ್ಬಿಣದ ಕೊಂಡಿಗಳನ್ನು ಚುಚ್ಚಿಸಿಕೊಳ್ಳುವ ನಾಲ್ವರು, ಅದನ್ನು ಟ್ರ್ಯಾಕ್ಟರ್‌ಗೆ ಕಟ್ಟಿಕೊಂಡು ಎಳೆಯುತ್ತಾರೆ. ಇನ್ನೊಂದು ಗೂಡ್ಸ್‌ ಆಟೊವನ್ನು ಇದೇ ಮಾದರಿಯಲ್ಲಿ ಒಬ್ಬ ವ್ಯಕ್ತಿ ಎಳೆಯುತ್ತಾರೆ. ಅದೇ ವಾಹನಕ್ಕೆ ಮೇಲ್ಭಾಗದಲ್ಲಿ ಮುಂಭಾಗಕ್ಕೆ ಚಾಚಿದಂತೆ ಮರದ ಕಂಬವೊಂದನ್ನು ಕಟ್ಟಿ ಅದಕ್ಕೆ ಮತ್ತೊಬ್ಬರು ಬೆನ್ನಿಗೆ ಮತ್ತು ತೊಡೆಗಳಿಗೆ ಚುಚ್ಚಿದ ಕೊಂಡಿಗಳಿಂದ ಜೋತು ಬೀಳುತ್ತಾರೆ. ಈ ಮೆರವಣಿಗೆ ಸುಮಾರು ಅರ್ಧ ಕಿಲೋ ಮೀಟರ್‌ ದೂರ ಸಾಗುತ್ತದೆ. ದೇವಿಯ ಉತ್ಸವಮೂರ್ತಿ ಕೂಡ ಇದರೊಂದಿಗೆ ಸಾಗುತ್ತದೆ. ನೂರಾರು ಭಕ್ತರು ಮೆರವಣಿಗೆಲ್ಲಿ ಹೆಜ್ಜೆ ಹಾಕುತ್ತಾರೆ. ಬಳಿಕ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಧನ್ಯತೆ ಮೆರೆಯುತ್ತಾರೆ.

ಈ ಮೆರವಣಿಗೆ ನಡೆದಿರುವ ಮಾಹಿತಿ ದೊರೆತ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್, ಡಿವೈಎಸ್ಪಿ ಶೈಲೇಂದ್ರ, ತಹಶೀಲ್ದಾರ್ ಸುಮಂತ್‌ಕುಮಾರ್‌ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ‘ಮೌಢ್ಯ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಈ ರೀತಿಯ ಅಮಾನುಷ ಆಚರಣೆಗಳಿಗೆ ಅವಕಾಶ ಇಲ್ಲ. ಆದರೂ ಆಚರಣೆ ಮಾಡಿರುವುದು ತಪ್ಪು’ ಎಂದು ದೇವಾಲಯ ಸಮಿತಿಯ ಸದಸ್ಯರಿಗೆ ಮನವರಿಕೆ ಮಾಡಿದರು.

‘ಮೌಢ್ಯ ಆಚರಣೆ ಮಾಡಿದ್ದಕ್ಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನೂರಾರು ವರ್ಷಗಳಿಂದ ಇರುವ ಆಚರಣೆಯನ್ನು ಹಂತ– ಹಂತವಾಗಿ ಕಡಿಮೆ ಮಾಡಿದ್ದೇವೆ. ಮೊದಲು ಲಾರಿಯನ್ನೇ ಕಟ್ಟಿಕೊಂಡು ಎಳೆಯುತ್ತಿದ್ದರು. ಈಗ ಟ್ರ್ಯಾಕ್ಟರ್ ಎಳೆದಿದ್ದಾರೆ. ಅಧಿಕಾರಿಗಳು ಕಾಯ್ದೆ ಬಗ್ಗೆ ಮನವರಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಳಿಸಲಾಗುವುದು’ ಎಂದು ದೇವಾಲಯ ಸಮಿತಿ ಗೌರವಾಧ್ಯಕ್ಷ ರಘು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT