ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಗಂಗಾಧರನಾಥ ಸ್ವಾಮೀಜಿ ಜೀವನ ಯಾತ್ರೆ ಪವಿತ್ರ ಯಜ್ಞ

ಬಿಜಿಎಸ್‌ ಶಿಕ್ಷಣ ಟ್ರಸ್ಟ್‌ನ ಸುವರ್ಣ ಸಂಭ್ರಮ: ನಿರ್ಮಲಾನಂದನಾಥ ಸ್ವಾಮೀಜಿ ನುಡಿನಮನ
Published 28 ಡಿಸೆಂಬರ್ 2023, 7:37 IST
Last Updated 28 ಡಿಸೆಂಬರ್ 2023, 7:37 IST
ಅಕ್ಷರ ಗಾತ್ರ

ಶೃಂಗೇರಿ: ‘ವಿಜ್ಞಾನ-ತಂತ್ರಜ್ಞಾನದಿಂದ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತಿದ್ದ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ದೂರದೃಷ್ಟಿತ್ವ ಮತ್ತು ಚಿಂತನೆ ಎಂದೆಂದಿಗೂ ಪ್ರಸ್ತುತ' ಎಂದು ಆದಿಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

ಶೃಂಗೇರಿಯ ಬಿಜಿಎಸ್ ಆವರಣದ ಬಾಲಗಂಗಾಧರನಾಥ ಸ್ವಾಮೀಜಿ ವೇದಿಕೆಯಲ್ಲಿ ಆಯೋಜಿಸಿದ್ದ ಗುರುಪಾದುಕೆಗೆ 108 ಸ್ವರ್ಣ ಪುಷ್ಪಾರ್ಚನೆ, ಶಿಕ್ಷಣ ಟ್ರಸ್ಟ್‌ನ ಸುವರ್ಣ ಸಂಭ್ರಮ, ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ, ವೈಚಾರಿಕವಾಗಿ ದೇಶ-ವಿದೇಶಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಮನ್ನಣೆ ಪೆಯಲು ಬಾಲಗಂಗಾಧರನಾಥ ಸ್ವಾಮೀಜಿ ನೀಡಿದ ಕೊಡುಗೆ ಅನನ್ಯ. ಬದುಕಿನ ಕಾವಲುದಾರಿಯ ನಡುವೆ ದಿಟ್ಟ ಹೆಜ್ಜೆ ಇಟ್ಟ ಅವರ ಧೀರ ನಡಿಗೆ ಸರ್ವರಿಗೂ ಮಾದರಿ. ಅವರ ಜೀವನ ಯಾತ್ರೆ ಒಂದು ಪವಿತ್ರವಾದ ಯಜ್ಞ. ಪೂಜ್ಯರನ್ನು ಗ್ರಂಥಗಳ ಮೂಲಕ ವರ್ಣನೆ ಮಾಡಲು ಸಾಧ್ಯವಿಲ್ಲ. ಕಾರಣ ಅವರೊಬ್ಬ ದೇಶ ಕಂಡ ಗಿರಿತುಂಗ ಭಾಸ್ಕರಾಗಿದ್ದು, ಅವರ ಮಹೋನ್ನತವಾದ ಹೆಜ್ಜೆ ಗುರುತು ನಮ್ಮೊಳಗೆ ಅಂತರ್ಗತವಾಗಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, `ಪ್ರಸ್ತುತ ಕಲಿಯುಗದಲ್ಲಿ ಕೃಷಿ ಸಂಸ್ಕೃತಿಯನ್ನು ನಾವು ಉಳಿಸಬೇಕು. ದೇಶಕ್ಕೆ ಸೈನಿಕ ಎಷ್ಟು ಮುಖ್ಯವೋ ಅನ್ನದಾತನು ಅಷ್ಟೇ ಪ್ರಾಮುಖ್ಯ. ಅವನ ಪ್ರಾಮಾಣಿಕ ಹಕ್ಕುಗಳನ್ನು ನ್ಯಾಯಯುತವಾಗಿ ನಾವು ನೀಡಬೇಕು. ಇದರ ಕುರಿತು ಗಂಭೀರವಾದ ಚಿಂತನೆ ಎಲ್ಲಾರಲ್ಲೂ ಮೂಡಬೇಕು’ ಎಂದರು.

ಚಿಕ್ಕಮಗಳೂರಿನ ಭಕ್ತರು ಸಲ್ಲಿಸಿದ ವಾದ್ಯ, ಚೆಂಡೆವಾದನಗಳ ಜೊತೆ ಪಲ್ಲಕ್ಕಿಯಲ್ಲಿ ಬಂದ ಗುರುಪಾದುಕೆಗೆ 108 ಸ್ವರ್ಣಾ ಪುಷ್ಪಾರ್ಚನೆಯನ್ನು ನಿರ್ಮಲಾನಂದನಾಥ ಸ್ವಾಮೀಜಿ ನೆರವೇರಿಸಿದರು. ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿಯವರು ರಚಿಸಿದ ‘ಮಹಾಗುರುವಿನ ದ್ವಾದಶ ಸೇವೆಗಳು’ ಕೃತಿ ಬಿಡುಗಡೆಗೊಳಿಸಿದರು. 

ಶಾಸಕರಾದ ಕೆ.ಎಸ್. ಆನಂದ್, ಎಚ್.ಡಿ. ತಮ್ಮಯ್ಯ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಬಿಜೆಪಿ ಮುಖಂಡರಾದ ಡಿ.ಎನ್ ಜೀವರಾಜ್, ಸಿ.ಟಿ ರವಿ, ಮುಖಂಡ ಎಚ್.ಜಿ ವೆಂಕಟೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಜಿಲ್ಲಾ ಪ್ರತಿನಿಧಿ ಪೂರ್ಣೇಶ್ ಭಾಗವಹಿಸಿದ್ದರು.

‘ಬಾಲಗಂಗಾಧರನಾಥ ಸ್ವಾಮೀಜಿ ಕ್ರಾಂತಿ ಅಮರ’

‘ಪ್ರಾಚೀನ ಕಾಲದಿಂದ ಆದಿಚುಂಚನಗಿರಿ ಕ್ಷೇತ್ರ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ತ್ಯಾಗ ಮಾಡಿದ್ದಾರೆ. ‌‌ಶಿಕ್ಷಣ ಕ್ಷೇತ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ‌ಅವರು ಮಾಡಿರುವ ಕ್ರಾಂತಿ ಅಮರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‍ ಹೇಳಿದರು. ‘ಯಾವುದೇ ಮಠಗಳು ಉತ್ತಮವಾಗಿ ಕೆಲಸ ಮಾಡಿದಾಗ ಸಮಾಜ ಅವರ ಜೊತೆ ಕೈಜೋಡಿಸುತ್ತದೆ. ವಸುದೇವ ಕುಟುಂಬಕಂ ಎಂಬ ಭಾವನೆಯಿಂದ ನಾವು ಜೀವನ ಸಾಗಿಸಬೇಕು. ಯಾರು ಒಳ್ಳೆಯದು ಮಾಡುತ್ತಾರೋ ಅದು ನಿಜವಾದ ಧರ್ಮ. ಎಲ್ಲಾ ಧರ್ಮಕ್ಕೂ ನಾವು ಗೌರವ ಕೊಡಬೇಕು‍’‍ ಎಂದರು. ‘ಮಧ್ಯಮ ವರ್ಗದ ಜನರಿಗೆ ಆದಾಯಗಿಂತ ಖರ್ಚು ಹೆಚ್ಚಾಗಿದೆ. ಹಾಗಾಗಿ ಸರ್ಕಾರವು ಗ್ಯಾರಂಟಿಗಳನ್ನು ನೀಡಿ ಜನಹಿತವನ್ನು ಕಾಪಾಡಿದೆ. ಎಲ್ಲಾ ಜನಾಂಗದವರು ಒಂದೇ ಎಂಬ ಭಾವದಿಂದ ಮುನ್ನಡೆಯಬೇಕು. ಎಲ್ಲಾ ಧರ್ಮದ ಹಿತಕ್ಕಾಗಿ ದುಡಿಯುವುದೇ ನಿಜವಾದ ಸೇವೆ. ಜನರ ನಂಬಿಕೆಯನ್ನು ನಾವು ಗಳಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT