ಚಿಕ್ಕಮಗಳೂರು: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಗುರುವಾರ ದಿನವಿಡೀ ಕುಂದು–ಕೊರತೆ ವಿಚಾರಣೆ ಮತ್ತು ಬಾಕಿ ಪ್ರಕರಣಗಳ ವಿಲೇವಾರಿ ಮಾಡಿ ಸ್ಥಳದಲ್ಲೇ ಆದೇಶ ಹೊರಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ದೂರುದಾರರ ಸಭೆಯಲ್ಲಿ ಲೋಕಾಯುಕ್ತದಲ್ಲಿ ಬಾಕಿ ಇರುವ ಜಿಲ್ಲೆಯ 84 ಪ್ರಕರಣಗಳನ್ನು ಕೈಗೆತ್ತಿಕೊಂಡರು.

ಬಹುತೇಕ ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆಗಳು, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ನಿವೇಶನ ಸಮಸ್ಯೆ, ಜಮೀನುಗಳ ಅಳತೆ ವಿಳಂಬ, ಇನಾಂ ಭೂಮಿ ಸಮಸ್ಯೆ, ಪಿಂಚಣಿ ಸೇರಿದಂತೆ ಹಲವು ಸಮಸ್ಯೆಗಳು ಅನಾವರಣಗೊಂಡವು.

ಶೃಂಗೇರಿ ತಾಲೂಕಿನ ಶಾರದಮ್ಮ ಎಂಬುವರ ಪ್ರಕರಣದಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಅವರ ಪತಿ ಮರಣ ಹೊಂದಿ 15 ವರ್ಷ ಕಳೆದರೂ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯ ತಲುಪಿಲ್ಲ. ಸೇವಾ ರಿಜಿಸ್ಟರ್(ಎಸ್.ಆರ್) ಇಲ್ಲ ಎಂಬ ಕಾರಣಕ್ಕೆ ವಿಳಂಬ ಮಾಡಲಾಗಿದೆ ಎಂಬ ವಿಷಯ ವಿಚಾರಣೆ ವೇಳೆ ಬಹಿರಂಗವಾಯಿತು.

‘ಇದಕ್ಕೆ ನೇರವಾಗಿ ಅಧಿಕಾರಿಗಳೆ ಕಾರಣ. ಇಂತವರು ಬಂದಾಗ ಮೊದಲು ಸಹಾಯಮಾಡಿ. ಮೂರು ತಿಂಗಳಲ್ಲಿ ಈ ಬಗ್ಗೆ ಸಂಪೂರ್ಣ ವರದಿ ನೀಡಬೇಕು’ ಎಂದು ಶೃಂಗೇರಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಇದ್ದರು.

‘ಸಾರ್ವಜನಿಕ ಆಡಳಿತಕ್ಕೆ ವಕೀಲರ ಪಾತ್ರ ಮಹತ್ವದ್ದು’

ಸಾರ್ವಜನಿಕ ಆಡಳಿತದ ಮೂರು ಅಂಗಗಳಿಗೆ ಸಹಕಾರ ಸಲಹೆ ನೀಡುವ ಜೊತೆಗೆ ಸಾರ್ವಜನಿಕ ಆಡಳಿತ ಸುಗಮಗೊಳಿಸಲು ವಕೀಲರ ಪಾತ್ರ ಮಹತ್ವದ್ದು ಎಂದು ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯಾಂಗ ಘಟಕ ಮತ್ತು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ವಕೀಲರೊಂದಿಗೆ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದೆ ರಾಷ್ಟ್ರ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ವದಾಗಿತ್ತು. ಬಹುತೇಕ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ವಕೀಲರಾಗಿದ್ದರು. ಮೇಲ್ಪಂಕ್ತಿಯ ಸಮುದಾಯ ಇದು. ಸರ್ಕಾರದ ಇತರೆ ಅಂಗಗಳಿಗಿಂತ ನ್ಯಾಯಾಂಗದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ವಿಶ್ವಾಸ ಇದೆ. ವಕೀಲರು ನ್ಯಾಯಾಧೀಶ ಸಂಖ್ಯೆ ಕಡಿಮೆ ಇದೆ. ಆದರೂ ವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು. ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಸೇರಿದರೆ ಮಾತ್ರ ಸಾರ್ವಜನಿಕ ಆಡಳಿತ ಸಾಧ್ಯ. ಇಡೀ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ವಕೀಲರು ಧ್ವನಿ ಎತ್ತುವ ಕೆಲಸ ಮಾಡುತ್ತಾ ಬಂದಿದ್ದಾರೆ. ಕಾರಣ ಅವರು ಕಾನೂನು ವಿಶ್ಲೇಷಣೆಯಲ್ಲಿ ತರಬೇತಿ ಹೊಂದಿದ ಸಮುದಾಯ. ಈ ಪರಿಣಿತಿ ಜ್ಞಾನದ ಜೊತೆ ಸಾಮಾಜಿಕ ಪ್ರವೃತ್ತಿಯನ್ನೂ ಬೆಳೆಸಿಕೊಂಡರೆ ಇತರೆ ಅಂಗಗಳಿಗೆ ಒತ್ತಾಸೆಯಾಗಿ ನಿಲ್ಲಬಹುದು ಎಂದು ಅವರು ಪ್ರತಿಪಾದಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ನಿವೃತ್ತ ಜಿಲ್ಲಾ ನ್ಯಾಯಾಧೀಶ ಪೃಥ್ವಿರಾಜ್ ವರ್ಣೀಕರ್ ಶಿವಾಜಿ ಅನಂತ ನಲವಾಡೆ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕರ್ನಾಟಕ ಲೋಕಾಯುಕ್ತ ವಿಶೇಷ ಅಭಿಯೋಜಕ ಥಾಮಸ್ ವಕೀಲರ ಸಂಘದ ಅಧ್ಯಕ್ಷ ಸುಚೇಂದ್ರ ಕಾರ್ಯದರ್ಶಿ ಅನಿಲಕುಮಾರ್ ಇದ್ದರು.

ಕಸ ಗುಡಿಸಿ ಅರಿವು ಮೂಡಿಸಿದ ಉಪಲೋಕಾಯುಕ್ತ

ಮನೆ ಬೀದಿ ಇಡೀ ಊರನ್ನು ಶುಚಿಯಾಗಿ ಇಟ್ಟುಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರ ನಗರಸಭೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮೂಲಕ ಮಾಡಬೇಕು ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು. ನಗರಾಭಿವೃದ್ಧಿ ಇಲಾಖೆ ನಗರಸಭೆ ಆಯೋಜಿಸಿದ್ದ ಸ್ವಚ್ಛೋತ್ಸವ ಕಾರ್ಯಕ್ರಮದ ಅಂಗವಾಗಿ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ತನಕ ನಡೆದ ಜಾಥಾವನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಗಂಟೆ ಕಾಲ ಎಲ್ಲರೂ ಸೇರಿ ನಡೆಸುತ್ತಿರುವ ಶ್ರಮದಾನವಿದು. ಹಾಗೆಂದು ಸ್ವಚ್ಛತಾ ಆಂದೋಲನ ಅಕ್ಟೋಬರ್ ಎರಡಕ್ಕೆ ಮುಕ್ತಾಯವಾಗಬಾರದು. ಆಡಳಿತ ವ್ಯವಸ್ಥೆಗಳು ಈ ವಿಚಾರದಲ್ಲಿ ಕಟಿಬದ್ಧವಾಗಿ ಕಾರ್ಯನಿರ್ವಹಿಸಬೇಕು. ಈ ಆಂದೋಲನ ಹಳ್ಳಿ– ಹಳ್ಳಿಯಲ್ಲೂ ಜನಾಂದೋಲನವಾಗಿ ರೂಪುಗೊಳ್ಳಬೇಕು. ಎಲ್ಲೆಡೆ ಕೆರೆಕಟ್ಟೆಯನ್ನು ಶುಚಿಯಾಗಿ ಉಳಿಸಿಕೊಂಡರೆ ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಸ್ವಚ್ಛತೆ. ಜನರಲ್ಲಿ ಕೂಡ ಈ ಬಗ್ಗೆ ಸಾಮಾಜಿಕ ಕಳಕಳಿಯಾಗಲಿ ಜಾಗೃತಿಯಾಗಲಿ ತಿಳಿವಳಿಕೆಯಾಗಲಿ ಇಲ್ಲ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಬೇಕು. ಜನರನ್ನು ಒಗ್ಗೂಡಿಸಬೇಕು ಎಂದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ ‘ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂದು ಸಂಕಲ್ಪ ಮಾಡಿದ್ದು ಪೌರ ಕಾರ್ಮಿಕರು ಈ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಸ್ವಚ್ಛ ಭಾರತ್ ಯೋಜನೆಯಡಿ ಇಡೀ ನಗರವನ್ನು ಶುಚಿಯಾಗಿ ಇಟ್ಟುಕೊಳ್ಳಲು ನಾವೆಲ್ಲರೂ ಪಣತೊಡಬೇಕು’ ಎಂದು ತಿಳಿಸಿದರು. ಇದೇ ವೇಳೆ ಉಪಲೋಕಾಯುಕ್ತರು ಕಸಪೊರಕೆ ಹಿಡಿದು ಕಸಗುಡಿಸಿ ಚೀಲಗಳಿಗೆ ತುಂಬಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.