ಚಿಕ್ಕಮಗಳೂರು: ನಾಲ್ಕೈದು ದಿನಗಳಿಂದ ಅಬ್ಬರಿಸಿದ್ದ ಮಳೆ ಕೊಂಚ ಕಡಿಮೆಯಾಗಿದ್ದು, ಗುರುವಾರ ಬೆಳಿಗ್ಗೆಯ ನಂತರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮುಳ್ಳಯ್ಯನಗಿರಿ ಸೇರಿ ಇಡೀ ಗಿರಿಭಾಗಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಗಿರಿಭಾಗದಲ್ಲಿ ಬುಧವಾರ ರಾತ್ರಿ ಜೋರು ಮಳೆ ಸುರಿದಿದ್ದು, ಕಡೂರು ತಾಲ್ಲೂಕಿನ ಕಾಮೇನಹಳ್ಳಿ ಹಳ್ಳದ ಹರಿವು ಹೆಚ್ಚಾಗಿತ್ತು. ನೀರು ರಸ್ತೆಯಲ್ಲಿ ಹರಿದಿದ್ದರಿಂದ ಕೆಲವು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿತ್ತು. ಮಧ್ಯಾಹ್ನದ ಬಳಿಕ ನೀರಿನ ಹರಿವು ಕಡಿಮೆಯಾಗಿ ವಾಹನ ಸಂಚಾರ ಸುಗಮವಾಯಿತು. ಚಿಕ್ಕಮಗಳೂರು ತಾಲ್ಲೂಕಿನ ಹಾಂದಿ ಸಮೀಪ ಮರವೊಂದು ರಸ್ತೆಗೆ ಬಿದ್ದು, ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಬಳಿ ರಸ್ತೆ ಕುಸಿದು ಶಾಂತುಕೂಡಿಗೆ, ಶುಂಠಿ ಕೂಡಿಗೆ, ಬಿಟ್ಟ ಕೂಡಿಗೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿತ್ತು. ಸಿರಿಮನೆ ಜಲಪಾತದಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು.
ಮಳೆ ವಿವರ(ಸೆಂಟಿ ಮೀಟರ್‌ಗಳಲ್ಲಿ)
ತಾಲ್ಲೂಕು; ಮಳೆ ಪ್ರಮಾಣ
ಚಿಕ್ಕಮಗಳೂರು; 3
ಕಡೂರು; 1
ಕೊಪ್ಪ; 5
ಮೂಡಿಗೆರೆ; 3
ಎನ್.ಆರ್.ಪುರ; 3
ಶೃಂಗೇರಿ; 6
ತರೀಕೆರೆ; 1
ಅಜ್ಜಂಪುರ; 1
ಜಿಲ್ಲೆಯ ಸರಾಸರಿ; 3
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.