ಸೋಮವಾರ, ಮಾರ್ಚ್ 8, 2021
31 °C
ಲಿಂಗಾಪುರ ಪಾಳು ಬಿದ್ದ ಕೈಗಾರಿಕಾ ವಸಾಹತು ಪ್ರದೇಶ

ಕೋಟ್ಯಂತರ ಹಣ ಪೋಲು

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Deccan Herald

ನರಸಿಂಹರಾಜಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿ ರಾಜ್ಯ ಸಣ್ಣ ಕೈಗಾರಿಕೆ ನಿಗಮದಿಂದ ಸುಮಾರು ₹ 1.30 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೈಗಾರಿಕಾ ವಸಾಹತು ಪ್ರದೇಶ ಪ್ರಸ್ತುತ ಪಾಳು ಕೊಂಪೆಯಾಗಿ ಪರಿಣಮಿಸಿದ್ದು, ಸರ್ಕಾರದ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ.

ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿ, ಗ್ರಾಮೀಣ ಪ್ರದೇಶದಿಂದ ಪ್ರತಿಭಾ ಪಲಾಯನವನ್ನು ತಡೆಗಟ್ಟುವ ಉದ್ದೇಶದಿಂದ 10 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಪ್ರದೇಶ ನಿರ್ಮಿಸಿ, ಕೈಗಾರಿಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಈ ಪ್ರದೇಶಕ್ಕೆ ನೀರು, ರಸ್ತೆ, ವಿದ್ಯುತ್‌ನಂತಹ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿತ್ತು.

ಕೈಗಾರಿಕಾ ವಸಾಹತು ಪ್ರದೇಶವು ನಿರ್ಮಾಣವಾಗುವವರೆಗೂ ಚಕಾರ ಎತ್ತದ ಅರಣ್ಯ ಇಲಾಖೆ ಏಕಾಏಕಿ 1940ರ ಮುಂಚಿನ ಮಹಾರಾಜರ ಕಾಲದ ಆದೇಶವನ್ನು ಮುಂದಿಟ್ಟುಕೊಂಡು ಸದರಿ ಪ್ರದೇಶ ಕಿರು ಅರಣ್ಯ ವ್ಯಾಪ್ತಿಗೆ ಸೇರಿದ್ದು ಎಂದು ತಡೆಯೊಡ್ಡಿದ ಪರಿಣಾಮವಾಗಿ ಕೈಗಾರಿಕಾ ಸ್ಥಾಪಿಸಲು ಮುಂದೆ ಬಂದವರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. ಮಲೆನಾಡಿನ ಭಾಗದಲ್ಲಿ ಕೃಷಿ ಪ್ರಮುಖ ವೃತ್ತಿಯಾಗಿದ್ದು ಇತ್ತೀಚೆಗೆ ಹೆಚ್ಚು ರಬ್ಬರ್, ಅಡಿಕೆ ಬೆಳೆಯುತ್ತಿದ್ದುದರಿಂದ ಇದಕ್ಕೆ ಸಂಬಂಧಪಟ್ಟ ಕೈಗಾರಿಕೆ, ಸಿದ್ಧ ಉಡುಪು ತಯಾರಿಕಾ ಘಟಕ ಸ್ಥಾಪಿಸಲು ಹೆಚ್ಚಿನ ಅವಕಾಶವಿತ್ತು. ಆದರೆ, ಇದು ಇದುವರೆಗೂ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.

ಕೈಗಾರಿಕಾ ವಸಾಹತು ಪ್ರದೇಶ ನಿರ್ಮಾಣಗೊಂಡು ಏಳು ವರ್ಷಕ್ಕೂ ಹೆಚ್ಚು ಅವಧಿ ಕಳೆದಿದ್ದರೂ ಇದರ ಅಧಿಕೃತ ಉದ್ಘಾಟನೆ ಈವರೆಗೂ ನಡೆದಿಲ್ಲ. ಇಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಗಳೆಲ್ಲವೂ ಹಾಳಾಗಿ ಹೋಗಿದೆ. ಈ ಪ್ರದೇಶ ಹಾಳು ಕೊಂಪೆಯಾಗಿದ್ದು, ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣವಾಗಿರುವುದರಿಂದ 10ಎಕರೆ ಜಾಗಕ್ಕೆ ಬದಲಿಯಾಗಿ 20 ಎಕರೆ ಜಾಗವನ್ನು ಕೊಡಬೇಕೆಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಇದು ಸಾಕಾರವಾಗದೆ ಕೈಗಾರಿಕಾ ವಸಾಹತು ಪ್ರದೇಶದ ಸಮಸ್ಯೆ ಹಾಗೆಯೇ ಉಳಿದಿದೆ ಎನ್ನುತ್ತಾರೆ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್.

ಅರಣ್ಯ ಇಲಾಖೆ ಜಾಗದಲ್ಲಿ ಮಿನಿವಿಧಾನ ಸೌಧ ನಿರ್ಮಿಸಿದಾಗ ಅದಕ್ಕೆ ಪರ್ಯಾಯವಾಗಿ ಬೇರೆ ಜಾಗ ನೀಡಿದಂತೆ ಕೈಗಾರಿಕಾ ವಸಾಹತು ಪ್ರದೇಶದ ಜಾಗಕ್ಕೂ ಪರ್ಯಾಯ ಜಾಗ ನೀಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆಪಿ.ಅಂಶುಮಂತ್ ತಿಳಿಸಿದ್ದಾರೆ.

ಕೈಗಾರಿಕಾ ವಸಾಹತು ಪ್ರದೇಶ ಇರುವ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಭೂಮಿ, ತಲಾ ತಲಾಂತರಗಳಿಂದ ಜನವಸತಿಯೂ ಸಹ ಇದೆ. ಪ್ರಸ್ತುತ ಕಿರು ಅರಣ್ಯಪ್ರದೇಶವೆಂದು ಅರಣ್ಯ ಇಲಾಖೆ 1940ರ ಮುಂಚಿನ ಆದೇಶ ತಂದು ಹೇಳುತ್ತಿದೆ. ಜಿಲ್ಲೆಯ ಕುದುರೆಮುಖ ವ್ಯಾಪ್ತಿಯ 1,600 ಎಕರೆ ಕಂದಾಯ ಜಮೀನನ್ನು ಜಿಲ್ಲಾಡಳಿತ ಬೇರೆ ಜಿಲ್ಲೆಗೆ ವರ್ಗಾಯಿಸಿದೆ ಎಂಬ ಮಾಹಿತಿ ಇದೆ. ಈ ಜಮೀನನ್ನು ಜಿಲ್ಲೆಯ ವ್ಯಾಪ್ತಿಯ ಜನವಸತಿ ಇರುವ ಅರಣ್ಯ ಪ್ರದೇಶದ ಸಮಸ್ಯೆಗಳಿಗೆ ನೀಡಿದ್ದರೆ ಮೂಲ ನಿವಾಸಿಗಳಿಗೆ ಅನುಕೂಲವಾಗುತ್ತಿತ್ತು. ಅಲ್ಲದೆ ಕೈಗಾರಿಕೆಗಳು ಸ್ಥಾಪಿಸಬಹುದಿತ್ತು ಎಂಬುದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.