ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಬೀದಿ ಬೀದಿಯಲ್ಲಿ ಆಂಧ್ರ ಮೂಸಂಬಿ ಮಾರಾಟ; ಕೆ.ಜಿಗೆ ₹40

Published 30 ಆಗಸ್ಟ್ 2024, 5:25 IST
Last Updated 30 ಆಗಸ್ಟ್ 2024, 5:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಆಂಧ್ರ ಮೂಸಂಬಿ ಜಿಲ್ಲೆಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನಗರದ ಎಲ್ಲೆಡೆ ಬೀದಿ ಬೀದಿಗಳಲ್ಲಿ ಮೂಸಂಬಿ ಹಣ್ಣಿನ ಚೀಲಗಳು ಮಾರಾಟವಾಗುತ್ತಿವೆ.

ಆಂಧ್ರ ಪ್ರದೇಶದ ಅನಂತಪುರದಲ್ಲಿ ಮೂಸಂಬಿಗೆ ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆ ಎರಡನೇ ದರ್ಜೆಯ ಮೂಸಂಬಿಯನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು ಮಾರಾಟ ಮಾಡಲಾಗತ್ತಿದೆ. ನಗರದ ಐ.ಜಿ.ರಸ್ತೆ, ತೊಗರಿಹಂಕಲ್ ವೃತ್ತ, ಎಂ.ಜಿ.ರಸ್ತೆ, ರತ್ನಗಿರಿ ರಸ್ತೆ, ಅಂಬೇಡ್ಕರ್ ರಸ್ತೆ(ಮಾರ್ಕೇಟ್ ರಸ್ತೆ), ಬಸವನಹಳ್ಳಿ ರಸ್ತೆ, ಎ.ಐ.ಟಿ.ವೃತ್ತ, ಬೈಪಾಸ್ ರಸ್ತೆ, ಬೇಲೂರು ರಸ್ತೆ ಸೇರಿ ಅಲ್ಲಲ್ಲಿ 25ಕ್ಕೂ ಹೆಚ್ಚು ಕಡೆ ರಸ್ತೆ ಬದಿಯಲ್ಲಿ ಹಣ್ಣಿನ ಚೀಲದ ರಾಶಿ ಕಾಣಿಸುತ್ತಿದೆ.

ಚಿತ್ರದುರ್ಗದ ವ್ಯಾಪಾರಿಗಳು ಅನಂತರಪುದಿಂದ ಲಾರಿಯಲ್ಲಿ ತಂದಿರುವ ಹಣ್ಣನ್ನು ಬೀದಿಗಳಲ್ಲಿ ಮಾರಾಟ ಮಾಡಿಸುತ್ತಿದ್ದಾರೆ. ವ್ಯಾಪಾರ ಮಾಡಲು ಕಾರ್ಮಿಕರನ್ನೂ ನಿಯೋಜಿಸಿಕೊಂಡಿದ್ದಾರೆ. ಅಲ್ಲಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಅನಂತಪುರದಿಂದಲೇ ಎರಡೂವರೆ ಕೆ.ಜಿ. ತೂಕದ ಹಣ್ಣು ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಪ್ರತಿ ಬ್ಯಾಗಿಗೆ ₹100 ನಿಗದಿ ಮಾಡಿದ್ದಾರೆ. ಪ್ರತಿ ಕೆ.ಜಿಗೆ ₹40ಕ್ಕೆ ಮೂಸಂಬಿ ದೊರೆಯುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಚೀಲದಲ್ಲಿರುವ ಹಣ್ಣುಗಳು ಗಾತ್ರದಲ್ಲಿ ಒಂದೇ ಸಮನಾಗಿಲ್ಲ. ನಿಂಬೆಹಣ್ಣಿನ ಗಾತ್ರದ ಹಣ್ಣಿಂದ ಆದಿಯಾಗಿ ದೊಡ್ಡ ಗಾತ್ರದ ಹಣ್ಣುಗಳು ಇವೆ.  ಕಡಿಮೆ ದರ ಆಗಿರುವುದರಿಂದ ಜನ ಖರೀದಿ ಮಾಡುತ್ತಿದ್ದಾರೆ.

‘ಗುಣಮಟ್ಟ ಇಲ್ಲದ ಹಣ್ಣು’

ಮೂಸಂಬಿ ಹಣ್ಣಿನ ದರ ಕಡಿಮೆಯಾಗಿಲ್ಲ. ಕೆ.ಜಿಗೆ ₹100ಕ್ಕೆ ಚಿಲ್ಲರೆ ವ್ಯಾಪಾರ ಮಾಡಲಾಗುತ್ತಿದೆ ಎಂದು ಸ್ಥಳೀಯ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ. ಅನಂತಪುರದ ಮಾರುಕಟ್ಟೆಯಲ್ಲಿ ಗ್ರೇಡಿಂಗ್ ಮಾಡಿ ಖರೀದಿಸಿ ಉಳಿದ ಹಣ್ಣುಗಳನ್ನು ಒಟ್ಟಾಗಿ ಖರೀದಿ ತಂದು ರಸ್ತೆಯಲ್ಲಿ ಕೆ.ಜಿಗೆ ₹40 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಳಪೆ ಗುಣಮಟ್ಟದ ಹಣ್ಣಾಗಿದ್ದರೆ ಮಾತ್ರ ಇಷ್ಟು ಕಡಿಮೆ ದರದಲ್ಲಿ ವ್ಯಾಪಾರ ಮಾಡಲು ಸಾಧ್ಯ ಎನ್ನುತ್ತಾರೆ. ಗೊತ್ತಿಲ್ಲದ ಜನ ಖರೀದಿ ಮಾಡುತ್ತಾರೆ. ಮನೆಗೆ ಹೋಗಿ ನೋಡಿದ ಬಳಿಕ ಅದರಲ್ಲಿ ಹಣ್ಣಿನ ರಸ ಇಲ್ಲದಿರುವುದು ಗೊತ್ತಾಗಿ ಮತ್ತೊಮ್ಮೆ ಖರೀದಿಸುವುದಿಲ್ಲ. ಈಗ ರಸ್ತೆಯ ಮೇಲಿರುವ ಚಿತ್ರದುರ್ಗದ ವ್ಯಾಪಾರಿಗಳು ಒಂದೆರಡು ದಿನದಲ್ಲಿ ಹಣ ಸಂಪಾದಿಸಿಕೊಂಡು ಜಾಗ ಖಾಲಿ ಮಾಡುತ್ತಾರೆ ಎಂಬುದು ಸ್ಥಳೀಯ ವ್ಯಾಪಾರಿಗಳು ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT