ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರ ನೆಕ್ಕಿಸಿದ ಆರೋಪ: ಸಿಐಡಿ ತಂಡದಿಂದ ತನಿಖೆ ಶುರು

Last Updated 24 ಮೇ 2021, 14:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪಿಎಸ್‌ಐ ಅರ್ಜುನ್‌ ಅವರು ಮೂತ್ರ ನೆಕ್ಕಿಸಿದ್ದಾರೆ ಎಂದು ಪರಿಶಿಷ್ಟ ಜಾತಿಯ ಕೆ.ಎಲ್‌.ಪುನೀತ್‌ ದಾಖಲಿಸಿರುವ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಸೋಮವಾರ ತನಿಖೆ ಆರಂಭಿಸಿದೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣೆಗೆ ಭೇಟಿ ನೀಡಿದ ತಂಡ ಪರಿಶೀಲನೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದೆ.

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಸಿ.ಸಿ ಟಿ.ವಿ ದೃಶ್ಯ‌ ಎಲ್ಲವನ್ನು ಸಿಐಡಿ ತಂಡಕ್ಕೆ ಹಸ್ತಾಂತರಿಸಲಾಗಿದೆ. ತನಿಖೆಗೆ ಎಲ್ಲ ಸಹಕಾರ ನೀಡುವಂತೆ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ತಿಳಿಸಿದರು.

‘ಇದೊಂದು ಅತ್ಯಂತ ಗಂಭೀರವಾದ ದೂರು. ಪಿಎಸ್‌ಐ ಅವರು ಯುವಕನನ್ನು ಕರೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ಸಮಯದಲ್ಲಿ ಏನಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದರು.

‘ಪಿಎಸ್‌ಐ ವಿರುದ್ಧ ದೂರು ನೀಡಿರುವ ಪುನೀತ್‌ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆ ದೂರಿನ ತನಿಖೆಯನ್ನೂ ಸಿಐಡಿಗೆ ವಹಿಸಲಾಗಿದೆ’ ಎಂದರು.

ಪುನೀತ್‌ ವಿರುದ್ಧ ವಿವಾಹಿತೆ ದೂರು ದಾಖಲು

ಮೂತ್ರ ನೆಕ್ಕಿಸಿದ್ದಾರೆ ಎಂದು ಆರೋಪಿಸಿರುವ ಪುನೀತ್‌ ವಿರುದ್ಧ ವಿವಾಹಿತೆಯೊಬ್ಬರು ಗೋಣಿಬೀಡು ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಪುನೀತ್‌ ಇದೇ 10ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮನೆಗೆ ಬಂದು ನನ್ನ ಬಾಯಿಮುಚ್ಚಿ ಹಿಡಿದಿದ್ದರು. ಕೂಗಾಡಲು ಮುಂದಾದಾಗ ಕೆನ್ನೆಗೆ ಹೊಡೆದಿದ್ದರು. ಮಗು ಆಡಿಸಲು ಮಕ್ಕಳು ಬಂದ್ದದ್ದನ್ನು ಕಂಡು ಹಿಂಬಾಗಿಲಿನಿಂದ ಓಡಿ ಹೋಗಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮತ್ತೊಂದು ದಿನ ಮನೆಗೆ ಬಂದಿದ್ದರು. ಫೋನ್‌ ಮಾಡದಿದ್ದರೆ ನಿನ್ನ ಫೋಟೊ, ವಿಡಿಯೊ ಎಲ್ಲ ಮೊಬೈಲ್‌ಗೆ ಕಳಿಸುತ್ತೀನಿ ಎಂದು ಹೇಳಿದ್ದರು. ನನ್ನ ಸಂಸಾರವನ್ನು ಪುನೀತ್‌ ಹಾಳು ಮಾಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಪುನೀತ್ ವಿರುದ್ಧ ಐಪಿಸಿ 354 –ಎ(ಲೈಂಗಿಕ ಕಿರುಕುಳ), 354 (ಬಿ), 323 (ಹಲ್ಲೆ), 341( ಅಕ್ರಮ ತಡೆ), 506 (ಜೀವ ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT