ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ನಗರಸಭೆ ಚುನಾವಣೆ: ಪ್ರವಾಸ ತೆರಳಿದ ಬಿಜೆಪಿ ಸದಸ್ಯರು

Published 20 ಆಗಸ್ಟ್ 2024, 5:36 IST
Last Updated 20 ಆಗಸ್ಟ್ 2024, 5:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ನಿಗದಿಯಾಗಿದ್ದು(ಆ.22), ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಚುರುಕು ಪಡೆದುಕೊಂಡಿದೆ.

ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಸಿವೆ. ಎರಡೂ ಪಕ್ಷದ ಮುಖಂಡರು ಈಗಾಗಲೇ ಒಟ್ಟಾಗಿಯೇ ಸಭೆ ನಡೆಸಿ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲೇ ಸಭೆ ನಡೆಸಿದೆ.

ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯ 18 ಸದಸ್ಯರಿದ್ದಾರೆ. ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ. ಅವರ ನಡೆ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ಅಧಿಕಾರದಲ್ಲಿ ಮುಂದುವರಿಯಲು ಸಹಕಾರ ನೀಡಿದ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್‌ನ 12 ಸದಸ್ಯರಿದ್ದು, ಜೆಡಿಎಸ್ 2, ಎಸ್‌ಡಿಪಿಐ 1, ಪಕ್ಷೇತರ ಇಬ್ಬರು ಸದಸ್ಯರಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಅಧಿಕಾರ ಹಿಡಿಯಲಿದೆ ಎಂಬಂತೆ ಕಾಣಿಸುತ್ತಿದೆ. ಆದರೆ, ವರಸಿದ್ದಿ ವೇಣುಗೋಪಾಲ್ ಹೊರತಾಗಿಯೂ ಇನ್ನಿಬ್ಬರು ಸದಸ್ಯರು ಬಿಜೆಪಿಯ ಸಂಪರ್ಕಕ್ಕೆ ಸಿಕ್ಕಿಲ್ಲ. ಇಬ್ಬರು ಸದಸ್ಯರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ.

ಸದಸ್ಯಕ್ಕೆ 15 ಬಿಜೆಪಿ ಸದಸ್ಯರು, ಜೆಡಿಎಸ್‌ನ ಇಬ್ಬರು ಮತ್ತು ಪಕ್ಷೇತರ ಒಬ್ಬ ಸದಸ್ಯರು ಸೇರಿ 18 ಸದಸ್ಯರು ಪ್ರವಾಸ ತೆರಳಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ ಮತಗಳು ಗಣನೆಗೆ ಬರಲಿದ್ದು, ಒಟ್ಟು 22 ಮತಗಳಿವೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ವರಸಿದ್ಧಿ ವೇಣುಗೋಪಾಲ್‌ಗೆ ಬೆಂಬಲ ನೀಡುವ ಮೂಲಕ ಪರೋಕ್ಷವಾಗಿ ನಗರಸಭೆ ಆಡಳಿದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್, ಈಗ ಮತ್ತೆ ಅಧಿಕಾರ ಹಿಡಿಯುವ ಕಸರತ್ತು ನಡೆಸಲಿದೆ. ಕಾಂಗ್ರೆಸ್ 12 ಸದಸ್ಯರು, ವರಸಿದ್ಧಿ ವೇಣುಗೋಪಾಲ್, ಬಿಜೆಪಿಯಿಂದ ದೂರ ಇರುವ ಇಬ್ಬರು ಸದಸ್ಯರು ಕಾಂಗ್ರೆಸ್ ಬೆಂಬಲಿಸಿದರೆ, ಎಸ್‌ಡಿಪಿಐನ ಒಬ್ಬರು, ಪಕ್ಷೇತರ ಒಬ್ಬರ ಬೆಂಬಲ ದೊರೆತರೆ ಕಾಂಗ್ರೆಸ್‌ ಬಲ 17ಕ್ಕೆ ಏರಿಕೆಯಾಗಲಿದೆ. ಶಾಸಕರ ಮತ ಸೇರಿ ಒಟ್ಟು 18 ಮತಗಳಿವೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಅಧಿಕಾರ ಹಿಡಿಯಲು ಅಗತ್ಯ ಇರುವ ಇನ್ನಷ್ಟು ಸದಸ್ಯರನ್ನು ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಇದೆ. ಎಲ್ಲವೂ ಗುರುವಾರ ಗೊತ್ತಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.

ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ. 22 ಮತಗಳು ಬಿಜೆಪಿ ಜತೆಗೆ ಇವೆ. ಕಾಂಗ್ರೆಸ್ ಏನೇ ಕಸರತ್ತು ನಡೆಸಿದರೂ ಅವರ ಪ್ರಯತ್ನ ವಿಫಲವಾಗಲಿದೆ.
–ಟಿ.ರಾಜಶೇಖರ್ ನಗರಸಭೆ ಬಿಜೆಪಿ ಸದಸ್ಯ
ಎಲ್ಲರಿಗೂ ವ್ಹಿಪ್ ಜಾರಿ
ಬಿಜೆಪಿಯ ಇನ್ನಷ್ಟು ಸದಸ್ಯರನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ತೆರೆ ಮರೆಯಲ್ಲಿ ಮಾಡುತ್ತಿದೆ ಎನ್ನಲಾಗಿದೆ. ಈ ನಡುವೆ ಕಮಲ ಚಿಹ್ನೆಯಡಿ ಗೆದ್ದಿರುವ ಎಲ್ಲಾ 18 ಸದಸ್ಯರಿಗೂ ಬಿಜೆಪಿ ವ್ಹಿಪ್ ಜಾರಿಗೊಳಿಸಿದೆ. 15 ಜನ ಸ್ವೀಕರಿಸಿದ್ದರೆ ಮೂವರು ಸ್ವೀಕಾರ ಮಾಡಿಲ್ಲ. ಅವರ ಮನೆಯ ಬಾಗಿಲಿಗೆ ವ್ಹಿಪ್ ಅಂಟಿಸಿ ಫೋಟೊ ತೆಗೆದುಕೊಂಡಿದ್ದಾರೆ. ವ್ಹಿಪ್ ಸ್ವೀಕಾರ ಮಾಡದ ಮೂವರು ಅಡ್ಡಮತದಾನ ಮಾಡುವ ಸಾಧ್ಯತೆ ಇದೆ. ಹಾಗೇನಾದರೂ ಮಾಡಿದರೆ ಅವರ ಸದಸ್ಯತ್ವವನ್ನು ಕಾನೂನಿನ ಮೂಲಕವೇ ಅನರ್ಹಗೊಳಿಸಲು ಬೇಕಿರುವ ದಾಖಲೆಗಳನ್ನು ಬಿಜೆಪಿ ಹೊಂದಿಸಿಕೊಳ್ಳುತ್ತಿದೆ.  ನೋಟಿಸ್ ನೀಡಲು ತಯಾರಿ ಮಾಡಿಕೊಂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT