ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣಗುಡುತ್ತಿದ್ದ ಶಾಲೆಯಲ್ಲಿ ಪುಟಾಣಿಗಳ ಕಲರವ

ಸರ್ಕಾರಿ ಶಾಲೆಗೆ ಗತ ವೈಭವ ತರುವ ಪಣ
Last Updated 18 ಜನವರಿ 2023, 5:42 IST
ಅಕ್ಷರ ಗಾತ್ರ

ಬೀರೂರು: ಶತಮಾನ ಕಂಡ ಸರ್ಕಾರಿ ಶಾಲೆಯೊಂದು ಕಳೆದ ಶತಮಾನದಲ್ಲಿ ವಿಜೃಂಭಿಸಿ, ಖಾಸಗಿ ಶಾಲೆಗಳ ಭರಾಟೆಗೆ ನಲುಗಿ 2005ರಿಂದ ಈಚೆಗೆ ವಿದ್ಯಾರ್ಥಿಗಳ ಕೊರತೆಯಿಂದ ಬಳಲಿದ್ದನ್ನು ತಪ್ಪಿಸಲು ಶಾಲೆಯ ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿಗಳ ಸಂಘ, ಎಸ್‌ಡಿಎಂಸಿ ಸಮಿತಿ ಕೈಗೊಂಡ ಅನೇಕ ಕ್ರಮಗಳು ಫಲಕಾರಿಯಾಗಿ ಪರಿಣಮಿಸಿದ್ದು, 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಚಿಲಿಪಿಲಿ ಶಾಲಾವರಣವನ್ನು ತುಂಬಿದೆ.

1887ರಲ್ಲಿ ಆಂಗ್ಲೋ ವೆರ್ನಾಕ್ಯುಲರ್‌ ಶಾಲೆಯಾಗಿ ಬೀರೂರಿನಲ್ಲಿ ಆರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರದ ದಿನಗಳಲ್ಲಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಾಗಿ, ಶಾಸಕರ ಮಾದರಿ ಶಾಲೆಯಾಗಿ, ಸದ್ಯ ಹಿರಿಯ ಪ್ರಾಥಮಿಕ ಶಾಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಸಜ್ಜಿತ ಕಟ್ಟಡ, ವಿಶಾಲ ಮೈದಾನ ಒಳಗೊಂಡು "ಎಚ್‌ಪಿಬಿಎಸ್‌ʼ ಎಂದೇ ಹೆಸರಾದ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ,ವಿದೇಶಗಳಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿದ್ದಾರೆ.

ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಈಗ ಇಲ್ಲಿ 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಆಧುನಿಕ ಯುಗದಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಎನ್ನುವುದು ಅನಿವಾರ್ಯವಾಗಿರುವ ಪರಿಸ್ಥಿತಿಯಲ್ಲಿ 2014-15ರಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಆರಂಭಿಸುವ ಆಶಯಕ್ಕೆ ಒತ್ತಾಸೆಯಾಗಿ ನಿಂತವರು ಹಳೆಯ ವಿದ್ಯಾರ್ಥಿಗಳು.‌ ಈಗ ಇಲ್ಲಿ ಒಂದರಿಂದ ಮೂರು ಮತ್ತು 6ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ. ಶಾಲೆಯಲ್ಲಿ ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರೆ, ಇಬ್ಬರು ನಿಯೋಜಿತ ಉಪಾಧ್ಯಾಯರು ಇದ್ದಾರೆ.

ಹಿರಿಯ ವಿದ್ಯಾರ್ಥಿಗಳು ಮತ್ತು ಎಸ್‌ಡಿಎಂಸಿ ಸಮಿತಿ, ಪೋಷಕರ ನೆರವಿನಿಂದ ನಾಲ್ವರು ಗೌರವ ಶಿಕ್ಷಕರು ಬೋಧನೆಯಲ್ಲಿ ತೊಡಗಿದ್ದರೆ, ಶಿವಮೊಗ್ಗದ ಬಿಜಿಎಸ್‌ ಟ್ರಸ್ಟ್‌ನ ಸಂಸ್ಕಾರ ಭಾರತಿ ನೆರವಿನಿಂದ ಒಬ್ಬ ಸಂಸ್ಕೃತ ಅಧ್ಯಾಪಕರೂ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಶಾಲೆಯ ಏಳಿಗೆಗೆ ಪೂರಕವಾಗಿ ಶಿಕ್ಷಣ ಇಲಾಖೆಯ ಮುಂದುವರೆದ ಅನುದಾನದಲ್ಲಿ ಶಾಸಕರ ನೆರವಿನಿಂದ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಂಡಿದೆ. ಒಂದು ಹಂತದಲ್ಲಿ ವಿದ್ಯಾರ್ಥಿಗಳ ಕೊರತೆ ನೆಪ ಒಡ್ಡಿ ಇಬ್ಬರು ಶಿಕ್ಷಕರನ್ನು ಹೆಚ್ಚುವರಿ ಎಂದು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಈಗ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅವಲಂಬನೆಯ ಬದಲು ಶಿಕ್ಷಕರನ್ನು ನಿಯೋಜಿಸಬೇಕು ಎನ್ನುವುದು ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರ ಒತ್ತಾಯವಾಗಿದೆ.

ಶಾಲೆಯು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎನ್ನುವ ಆಶಯ ಹೊಂದಿದ ಹಲವು ಹಳೆಯ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ನೆರವು ನೀಡಿದ್ದಾರೆ. ಒಬ್ಬರು ಮಕ್ಕಳ ಸಮವಸ್ತ್ರ ಕೊಡುಗೆಯಾಗಿ ನೀಡಿದರೆ ಮತ್ತೊಬ್ಬರು ಕೊಳವೆಬಾವಿ ಕೊರೆಸಿ ನೀರಿನ ಚಿಂತೆ ದೂರ ಮಾಡಿದ್ದಾರೆ. ಕೆಲವರು ಗೌರವ ಶಿಕ್ಷಕರಿಗೆ ವೇತನ ನೀಡಲು ಧನ ಸಹಾಯ ಮಾಡಿದರೆ, ಮಕ್ಕಳಿಗೆ ಕೂರಲು ಅನುಕೂಲ ಕಲ್ಪಿಸಲು ರೂ.2.5ಲಕ್ಷ ವೆಚ್ಚದಲ್ಲಿ 100 ಡೆಸ್ಕ್‌ ಕೊಡುಗೆಯಾಗಿ ಬಂದಿದೆ. ಕೊಠಡಿಗಳು ಸೋರದಿರಲು ಹೆಂಚಿನ ಸಹಾಯ ಒದಗಿಬಂದಿದೆ, ಶಾಲೆಯ ಶಿಕ್ಷಕರು,ಎಸ್‌ಡಿಎಂಸಿ ಸದಸ್ಯರೇ ಸೇರಿ ಶಾಲೆಗೆ ಸುಣ್ಣ-ಬಣ್ಣ ಮಾಡಿದ್ದಾರೆ. ಕೋವಿಡ್‌ ಕಾಲದಲ್ಲಿ ಆನ್‌ಲೈನ್‌ ತರಗತಿಗಳಿಗೆ ನೆರವು, ಶಾಲೆಗೆ ಎಲ್‌ಇಡಿ ಟಿವಿ ಕೂಡಾ ಕಾಲಿಡಲು ಹಳೆಯ ವಿದ್ಯಾರ್ಥಿಗಳು ಸಹಾಯಹಸ್ತ ಚಾಚಿದ್ದಾರೆ.

ಇಷ್ಟೆಲ್ಲ ಹೇಳಲು ಕಾರಣವಿದೆ, ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗೂ ಕಡಿಮೆ ಇಲ್ಲ ಎನ್ನುವಂತೆ ಶನಿವಾರ ಶಾಲೆಯ ಮೈದಾನದಲ್ಲಿ ನಡೆಸಿದ ವಾರ್ಷಿಕೋತ್ಸವ ಮತ್ತು ಸಂಭ್ರಮದಿಂದ ಪಾಲ್ಗೊಂಡ ಪೋಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ಶಾಲಾ ವರದಿ. ಭರತನಾಟ್ಯದಿಂದ ಹಿಡಿದು ಡಿಸ್ಕೋವರೆಗೆ ಹಲವು ಪ್ರಕಾರಗಳ ನೃತ್ಯಪ್ರದರ್ಶನ ನೀಡಿದ ಮಕ್ಕಳು ಎಲ್ಲರ ಮನಸೂರೆಗೊಂಡರೆ, ಎಲ್‌ಕೆಜಿ ವಿದ್ಯಾರ್ಥಿಗಳು ತಮ್ಮ ತಾಯಂದಿರೊಡನೆ ನೀಡಿದ " ದಿಲ್‌ಹೆ ಛೋಟಾಸಾ... ಛೋಟೀಸಿ ಆಶಾ....ʼ ನೃತ್ಯಕ್ಕೆ ಕಿವಿ ಗಡಚಿಕ್ಕುವ ಸಿಳ್ಳೆ, ಚಪ್ಪಾಳೆಗಳು ದೊರೆತವು.

ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಪ್ರತಿ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗೆ ಪುರಸ್ಕಾರ ನೀಡಿ ಗೌರವಿಸಿದರೆ, ಪೋಷಕರಿಗೆ ಆಯೋಜಿಸಿದ್ದ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ, ಶಾಲೆಯ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗೆ ಪ್ರಶಸ್ತಿಪತ್ರ ಮತ್ತು ಪದಕ ವಿತರಣೆ ನಿಜಕ್ಕೂ ಇದು ಸರ್ಕಾರಿ ಶಾಲೆಯ ಕಾರ್ಯಕ್ರಮವೇ? ಎನ್ನುವ ಅಚ್ಚರಿ ಅಲ್ಲಿ ಸೇರಿದವರಲ್ಲಿ ಮೂಡಿಸಿತ್ತು.

"ಕಾರ್ಯಕ್ರಮದ ಯಶಸ್ಸು ಮನತುಂಬಿಕೊಂಡ ಎಸ್‌ಡಿಎಂಸಿ ಅಧ್ಯಕ್ಷರು ವೇದಿಕೆಯಲ್ಲಿಯೇ ಮುಂದಿನ ಬಾರಿಯಿಂದ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಯಾಗುವ ಇಬ್ಬರಲ್ಲಿ ಒಬ್ಬರಿಗೆ ಒಂದು ಗ್ರಾಂ ತೂಕದ ಬಂಗಾರದ ಪದಕ, ಇನ್ನೊಬ್ಬರಿಗೆ ಬೆಳ್ಳಿ ಪದಕ ನೀಡುವುದಾಗಿ ಘೋಷಿಸಿದರು. ಇದು ಕಲಿಕೆಯ ಪೈಪೋಟಿ ಹೆಚ್ಚಿಸುವ ಜತೆಗೆ ಶಾಲೆಯ ವಾತಾವರಣಕ್ಕೆ ಮತ್ತಷ್ಟು ಹುಮ್ಮಸ್ಸು ಮೂಡಿಸಲಿದೆ, ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಮುಂದಾಗಲಿದ್ದಾರೆʼ ಎನ್ನುವ ಭರವಸೆ ಪದವೀಧರ ಮುಖ್ಯಶಿಕ್ಷಕ ಜಯಣ್ಣ ಅವರದ್ದಾಗಿದೆ.

ಒಟ್ಟಾರೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವ ಹುಯಿಲಿನ ನಡುವೆಯೇ ನೂರೈವತ್ತು ವರ್ಷ ಪೂರೈಸುವ ಹಾದಿಯಲ್ಲಿ ದಾಪುಗಾಲಿಟ್ಟಿರುವ ಸರ್ಕಾರಿ ಶಾಲೆಯೊಂದು ಮತ್ತೆ ಉಚ್ಛ್ರಾಯ ಸ್ಥಿತಿಗೆ ಮರಳುತ್ತಿರುವುದು ಹೊಸಭರವಸೆಯ ಪ್ರತೀಕವಾಗಿದೆ ಎಂದರೆ ತಪ್ಪಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT