ಗುರುವಾರ , ಮೇ 26, 2022
28 °C
‘ನಮ್ಮೂರ ಕೆರೆ ಹಬ್ಬ’ದಲ್ಲಿ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜ್

ಜಲಮೂಲ ಸಂರಕ್ಷಣೆಗೆ ಪಣತೊಡಿ: ಡಾ.ಎಚ್.ಎಲ್. ನಾಗರಾಜ್

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಜನರು ಜಾಗೃತ ರಾಗಬೇಕು. ಜಲಮೂಲ ಸಂರಕ್ಷಣೆಗೆ ಪಣತೊಡಬೇಕು’ ಎಂದು ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಸಲಹೆ ನೀಡಿದರು.

ಕಂದಾಯ ಇಲಾಖೆ, ಲಕ್ಷ್ಮಿಪುರ ಕೆರೆ ಅಭಿವೃದ್ಧಿ ಸಂಘ, ಗ್ರೀನ್‌ ಫೋರ್ಸ್‌, ವಿಷನ್‌–ಚಿಕ್ಕಮಗಳೂರು ಸಹಯೋಗದೊಂದಿಗೆ ತಾಲ್ಲೂಕಿನ ಲಕ್ಷ್ಮಿಪುರದ ಕೆರೆ ಅಂಗಳದಲ್ಲಿ ಈಚೆಗೆ ಆಯೋಜಿಸಿದ್ದ ‘ನಮ್ಮೂರ ಕೆರೆ ಹಬ್ಬ’ ಹಾಗೂ ’ಕಂದಾಯ ಇಲಾಖೆ ನಡಿಗೆ, ಗ್ರಾಮದ ಕಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆರೆ, ಕಟ್ಟೆಗಳು ತುಂಬಿದ್ದರೆ ಜೀವ ವೈವಿಧ್ಯ, ಪರಿಸರ ಉಳಿಯುತ್ತದೆ. ಲಕ್ಷ್ಮಿ ಕೆರೆ ಪುನರುಜ್ಜೀವನಗೊಳಿಸಬೇಕು, ಜನರಲ್ಲಿ ವೈಜ್ಞಾನಿಕ, ಸಾತ್ವಿಕ, ಪರಿಸರ ಸಂರಕ್ಷಣೆ ಮನೋಭಾವ ಜಾಗೃತ ಗೊಳಿಸಬೇಕು ಎಂಬ ಉದ್ದೇಶದಿಂದ ಕೆರೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಆಧುನಿಕ ಜೀವನ ಶೈಲಿಯ ಜತೆಗೆ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳಬೇಕು. ನೀರು, ಗಾಳಿ, ಅಗ್ನಿ, ಆಕಾಶ, ಪರಿಸರವನ್ನು ರಕ್ಷಿಸಬೇಕು ಹಾಗೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಜ್ಞೆ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ಲಕ್ಯಾ, ಹಿರೇಗೌಜ, ಬಿಳೇಕಲ್ಲಹಳ್ಳಿ, ಲಕುಮನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಬರ ಪೀಡಿತ ಪ್ರದೇಶಗಳು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿರುತ್ತದೆ. ನರೇಗಾ ಯೋಜನೆಯಡಿ ಲಕ್ಷ್ಮೀಪುರ ಕೆರೆ ಹೂಳೆತ್ತಲು ಈ ಗ್ರಾಮ ಪಂಚಾಯಿತಿ ಗಳ ಅಧ್ಯಕ್ಷರು, ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಬೇಕು. ಕೆರೆ ಏರಿ ದುರಸ್ತಿಗೆ ಕ್ರಮ ವಹಿಸಬೇಕು. ಕೆರೆ ಏರಿ ದುರಸ್ತಿಗೆ ತಕರಾರು ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸ ಲಾಗಿದೆ. ಅವರು ಸಮ್ಮತಿಸಿದ್ದಾರೆ’ ಎಂದರು.

‘ಲಕ್ಷ್ಮೀಪುರ ಕೆರೆ 40 ಎಕರೆ ಯಲ್ಲಿ ಭೌತಿಕವಾಗಿ ಇದೆ. ಆದರೆ, ದಾಖಲೆಗಳಲ್ಲಿ ಕೆರೆಯೆಂದು ನಮೂದಾಗಿಲ್ಲ. ಕೆರೆ ಸುತ್ತಲಿನ ಸರ್ವೆ ನಂಬರ್ ಜಾಗಗಳನ್ನು ನಿಖರವಾಗಿ ಅಳತೆ ಮಾಡಲು ಕ್ರಮವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೋಜಣಿ ಕಾರ್ಯ ಮುಗಿಯುತ್ತಿದ್ದಂತೆ ಕೆರೆಗೆ ದಾಖಲೆ ಸೃಷ್ಟಿಸಲಾಗುವುದು. ಕೆರೆಗೆ ಜಾಗ ಮಂಜೂರು ಮಾಡುವಂತೆ ಲಕ್ಯಾ, ಹಿರೇಗೌಜ, ಬಿಳೇಕಲ್ಲಹಳ್ಳಿ ಪಂಚಾಯಿತಿ ವತಿಯಿಂದ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಬೇಕು’ ಎಂದರು.

‘ಗ್ರಾಮದ ಕಡೆಗೆ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನಡಿಗೆ’ ಕಾರ್ಯಕ್ರಮ ಸಂಜೆ 5 ಗಂಟೆಗೆ ಆರಂಭವಾಗಿ, ರಾತ್ರಿ 10 ಗಂಟೆವರೆಗೆ ನಡೆಯಿತು. ಪಹಣಿ ತಿದ್ದುಪಡಿ, ವೃದ್ಧಾಪ್ಯ ವೇತನ ಮಂಜೂರು, ಪೌತಿ ಖಾತೆ ಸಹಿತ ವಿವಿಧ ಪ್ರಕ್ರಿಯೆಗಳು ನಡೆದವು. ರಜೆದಿನವೂ ಅಧಿಕಾರಿಗಳು ಕಾರ್ಯನಿರ್ವಹಿಸಿದರು.

ಲಕ್ಯಾ, ಹಿರೇಗೌಜ, ಬಿಳೇಕಲ್ಲಹಳ್ಳಿ, ಲಕುಮನಹಳ್ಳಿ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಡಾ.ಕಾಂತರಾಜ್, ಕಂದಾಯ ಅಧಿಕಾರಿ ಪುಟ್ಟರಾಜು, ವಿಷನ್‌ ಚಿಕ್ಕಮಗಳೂರು ಟ್ರಸ್ಟಿನ ಎ.ಎನ್.ಮಹೇಶ್, ಡಿ.ಎಚ್.ನಟರಾಜ್, ಮಮತಾ, ಗ್ರೀನ್‌ ಫೋರ್ಸ್‌ನ ಪ್ರದೀಪ್‌ಗೌಡ ಇದ್ದರು.

ರಂಗಕರ್ಮಿ ಆರ್‌.ಜಗದೀಶ್‌ ಮತ್ತು ತಂಡದವರು ಜನಪದ ಗೀತೆ ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು