ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಗ್ರಾಮ ಪಂಚಾಯಿತಿಗಳಲ್ಲಿ ದೂಳು ಹಿಡಿಯುತ್ತಿರುವ ಕಿಟ್‌ಗಳು

Last Updated 28 ಏಪ್ರಿಲ್ 2021, 6:06 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಎರಡು ತಿಂಗಳ ಹಿಂದೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಿದ್ದು, ಆ ವಸ್ತುಗಳು ಉಪಯೋಗವಾಗದ ಕಾರಣ ದೂಳು ಹಿಡಿದಿವೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಕ್ಕೆ ಸಂಬಂಧಿತ ವಸ್ತುಗಳನ್ನು ಖರೀದಿಸಲು ಆದೇಶ ನೀಡಲಾಗಿತ್ತು. ಪ್ರತಿ ಗ್ರಾಮ ಪಂಚಾಯಿತಿ ಸುಮಾರು ₹ 1.5 ಲಕ್ಷದಿಂದ ₹ 2 ಲಕ್ಷವರೆಗಿನ ಮೌಲ್ಯದ ಮೌಲ್ಯದ ಸಲಕರಣೆಗಳನ್ನು ಖರೀದಿಸಿತ್ತು. ಇದರ ಖರ್ಚನ್ನು ಗ್ರಾಮ ಪಂಚಾಯಿತಿಗಳೇ 15ನೇ ಹಣಕಾಸು ಮತ್ತು ಸ್ವಂತ ಸಂಪನ್ಮೂಲದಿಂದ ಭರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು. ನಿರ್ದಿಷ್ಟ ಕಂಪನಿ ಈ ಸಲಕರಣೆಗಳನ್ನು ಪೂರೈಕೆ ಮಾಡಿದೆ. ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ಸಲಕರಣೆಗಳು ಈಗ ಧೂಳು ಹಿಡಿಯುತ್ತಿವೆ.

ಈ ಖರೀದಿ ಪ್ರಕ್ರಿಯೆ ನಡೆದಾಗ ಕೋವಿಡ್ ಆರ್ಭಟ ಬಹಳಷ್ಟು ಕಡಿಮೆಯಿತ್ತು. ಆಂತಹ ಸಮಯದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಗತ್ಯ ಏನಿತ್ತೆಂದು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ತಾಲ್ಲೂಕು ಪಂಚಾಯಿತಿ ಸಭೆಯಲ್ಲೂ ಇದು ಪ್ರತಿಧ್ವನಿಸಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ಈಗ ಕೋವಿಡ್ ಎರಡನೇ ಅಲೆ ವ್ಯಾಪಿಸಿದೆ. ಈ ಸಮಯದಲ್ಲಿಯೂ ಈ ವಸ್ತುಗಳನ್ನು ಉಪಯೋಗಿಸಿಕೊಳ್ಳುವ ಉಸಾಬರಿಗೆ ಬಹುತೇಕ ಗ್ರಾಮ ಪಂಚಾಯಿತಿಗಳು ಹೋಗಿಲ್ಲ. ಈ ಸಲಕರಣೆಗಳನ್ನು ಹೇಗೆ ಉಪಯೋಗಿಸಬೇಕೆಂಬ ಬಗ್ಗೆ ಯಾವುದೇ ನಿರ್ದೇಶನಗಳಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಪ್ರಮುಖರು.

ಪಟ್ಟಣದ ಹತ್ತಿರದಲ್ಲೆ ಇರುವ ಗ್ರಾಮ ಪಂಚಾಯಿತಿ ಒಂದರಲ್ಲಿ ಈ ಸಲಕರಣೆಗಳ ಪೈಕಿ ಕೆಲ ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್ ಸ್ಪ್ರೇಯರ್ ಮಾತ್ರ ಉಪಯೋಗಿಸಲಾಗಿದೆ. ಅದೂ ಕೋವಿಡ್‌ನಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಅಂತ್ಯ ಸಂಸ್ಕಾರದ ಸಮಯದಲ್ಲಿ. ಮಿಕ್ಕಂತೆ ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ಯಾನರ್, ಡಿಸ್ ಇನ್ಫೆಕ್ಟೆಡ್ ಬಾಕ್ಸ್ ಯಾವುದನ್ನೂ ಹೊರತೆಗೆದಿಲ್ಲ. ಆಟೊ ಸ್ಯಾನಿಟೈಸರ್ ಡಿಸ್ಪೆನ್ಸರ್ ಅನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಪಯೋಗಿಸಿದರೆ ಅಲ್ಲಿಗೆ ಬರುವವರಿಗೆ ಅನುಕೂಲವಾಗುತ್ತದೆ. ಆದರೆ, ಅದರ ಪ್ಯಾಕ್ ಸಹ ಬಿಚ್ಚಲಾಗಿಲ್ಲ. ಇನ್ನೊಂದು ರಾಸಾಯನಿಕವನ್ನು ಯಾವ ಸಂದರ್ಭದಲ್ಲಿ ಉಪಯೋಗಿಸಬೇಕೆಂಬ ಬಗ್ಗೆ ಪಿಡಿಒಗಳಿಗೇ ಮಾಹಿತಿ ಇಲ್ಲ ಎನ್ನುತ್ತಾರೆ ಅವರು.

ಈ ಸಲಕರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು,ನಂತರ ಬಳಕೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ. ದೇವರಾಜ ನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT