ಬುಧವಾರ, ಜೂನ್ 29, 2022
27 °C
‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ: ಕಳಸ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕಕ್ಕೆ ಒತ್ತಾಯ

ಕಳಸ: ಸಮಸ್ಯೆಗಳ ಅನಾವರಣ, ಜಿಲ್ಲಾಧಿಕಾರಿ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ಯಡೂರು ಗ್ರಾಮದಲ್ಲಿ ಶುಕ್ರವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಗಮನ ಸೆಳೆದರು.

‘ಕುದುರೆಮುಖ ದಿನಗೂಲಿಗಳು 37 ದಿನಗಳ ಕಾಲ ತಮ್ಮ ನಿವೇಶನಕ್ಕಾಗಿ ಸತತ ಧರಣಿ ನಡೆಸಿದ್ದು, ಈ ಮಳೆಗಾಲದಲ್ಲಿ ಅವರ ಮನೆಗಳು ಕುಸಿದು ಬೀಳುವ ಸಾಧ್ಯತೆ ಇದೆ. ಅವರಿಗೆ ಕೂಡಲೇ ನಿವೇಶನದ ಹಕ್ಕುಪತ್ರ ನೀಡಬೇಕು’ ಎಂದು ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಗಮನ ಸೆಳೆದರು.

‘ಕಳಸ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದೆ ಸಾವಿರಾರು ಕಾರ್ಮಿಕರು ಬಳಲುತ್ತಿದ್ದಾರೆ. ಆರೋಗ್ಯ ಸೇವೆಗಾಗಿ ದುಬಾರಿ ಹಣ ವೆಚ್ಚ ಮಾಡುವ ಜೊತೆಗೆ ಪ್ರಾಣಕ್ಕೂ ಕೆಲವೊಮ್ಮೆ ಸಂಚಕಾರ ಬರುತ್ತಿದೆ. ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯರನ್ನು ಕೂಡಲೇ ನೇಮಕ ಮಾಡಿ, ದಿನದ 24 ಗಂಟೆಯೂ ಆರೋಗ್ಯ ಸೇವೆ ಸಿಗುವಂತೆ ಕ್ರಮ ವಹಿಸಬೇಕು’ ಎಂದು ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಆಗ್ರಹಿಸಿದರು.

ಕಳಸ ಸರ್ಕಾರಿ ಆಸ್ಪತ್ರೆಯ ಎಕ್ಸ್‌ರೇ ಸಿಬ್ಬಂದಿ ಒಂದು ವರ್ಷದಿಂದ ಕೆಲಸಕ್ಕೆ ಗೈರಾಗಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ರಮೇಶ್ ಕೆಳಗೂರು ದಾಖಲೆ ಸಹಿತ ದೂರಿದರು.

ಓಡಿನಕುಡಿಗೆ ಕಾಲೊನಿಯಲ್ಲಿ ಚನ್ನಡಲಿನ ನಿರಾಶ್ರಿತರಿಗೆ ನೀರಿನ ವ್ಯವಸ್ಥೆ ಮತ್ತು ನಿವೇಶನದ ಜಿಪಿಎಸ್ ಮಾಡಬೇಕು ಎಂದು ಸಂತ್ರಸ್ತರು ಒತ್ತಾಯಿಸಿದರು. ಮೂರು ದಿನದಲ್ಲೇ ಈ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಪಿಡಿಒಗೆ ಆದೇಶ ಮಾಡಿದರು. ಕೂಡಲೇ ನಿವೇಶನದ ಹಕ್ಕುಪತ್ರ ನೀಡುವಂತೆಯೂ ಸಂತ್ರಸ್ತರು ಕೋರಿದರು.

ಯಡೂರು- ಬಾಳೆಕಾನು ರಸ್ತೆಗೆ ಅನುದಾನ ನೀಡಬೇಕು. ಹಿರೇಬೈಲು ಸರ್ಕಾರಿ ಆಸ್ಪತ್ರೆ ಮುಂಭಾಗ ಬಸ್‌ನಿಲ್ದಾಣ ಮತ್ತು ಆಟೊ ನಿಲ್ದಾಣ ಸ್ಥಾಪಿಸಬೇಕು ಎಂಬ ಬೇಡಿಕೆ ಕೇಳಿ ಬಂತು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ‘ಬಾಳೆಕಾನು-ಯಡೂರು ರಸ್ತೆಗೆ ₹ 2 ಕೋಟಿ ಅನುದಾನ ಮಂಜೂ ರಾಗಿದೆ. ಯಡೂರು- ಹಿರೇಬೈಲು ರಸ್ತೆ ಕಾಮಗಾರಿ ನಡೆಯುತ್ತಿದೆ. ಕಳಸಕ್ಕೆ ಹೊಸದಾಗಿ ₹ 13 ಕೋಟಿ ಮೊತ್ತದ ಕಾಮಗಾರಿಗಳು ಸಿಕ್ಕಿವೆ’ ಎಂದರು.

ಕುಂಬಳಡಿಕೆ ಕಾಲೊನಿ ನಿವಾಸಿಗಳು ತಮ್ಮ ಕಾಲೊನಿಗೆ ರಸ್ತೆ, ನೀರು ಒದಗಿಸುವಂತೆ ಕೋರಿದರು. ಯಡೂರು ಕಾಲೊನಿಯ ನಿವಾಸಿಗಳು ಕಾಂಕ್ರೀಟ್ ರಸ್ತೆಯ ಮನವಿ ಮಾಡಿದರು. ಅನೇಕ ನಿವಾಸಿಗಳು ನಿವೇಶನಕ್ಕೆ ಮತ್ತು ಕೃಷಿ ಭೂಮಿಗೆ ಹಕ್ಕುಪತ್ರ ನೀಡುವಂತೆ ಅರ್ಜಿ ಸಲ್ಲಿಸಿದರು.

ಕಳಸ ಕೆಪಿಎಸ್ ಬಾಲಕರ ಮತ್ತು ಬಾಲಕಿಯರ ಶಾಲೆ ವಿಲೀನ ಮಾಡುವಂತೆ ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ ಗಮನ ಸೆಳೆದರು.

ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣಾಧಿಕಾರಿಗೆ ಸೂಚಿಸಲಾಯಿತು.

ತಹಶೀಲ್ದಾರ್ ರಮೇಶ್, ಉಪ ತಹಶೀಲ್ದಾರ್ ಹೇಮಂತ್, ಅರಣ್ಯ, ಕಂದಾಯ ಇಲಾಖೆ ಸಿಬ್ಬಂದಿ, ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್, ಸದಸ್ಯ ವಿಜಯ್‍ ಗೌಡ, ಶ್ರೇಣಿಕ, ರಫೀಕ್ ಭಾಗವಹಿಸಿದ್ದರು.

15 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ’

ಚಿಕ್ಕಮಗಳೂರು: ಕಂದಾಯ ಇಲಾಖೆ ವತಿಯಿಂದ ತಾಲ್ಲೂಕಿನ ಕಳಸಾಪುರದಲ್ಲಿ ಶುಕ್ರವಾರ ನಡೆದ ‘ಗ್ರಾಮ ಭೇಟಿ –ವಾಸ್ತವ್ಯ’ ಕಾರ್ಯಕ್ರಮದಲ್ಲಿ 60 ಅಹವಾಲುಗಳು ಸಲ್ಲಿಕೆಯಾಗಿವೆ. ‌

ತಹಶೀಲ್ದಾರ್‌ ವಿನಾಯಕ ಸಾಗರ್, ಇತರ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಿದರು. ಅವುಗಳನ್ನು ಪರಿಶೀಲನೆ ಮಾಡಿದರು.

ಗ್ರಾಮದಲ್ಲಿ ಪಶು ಆಸ್ಪತ್ರೆ ಇದೆ, ಆದರೆ ವೈದ್ಯಾಧಿಕಾರಿ ಇಲ್ಲ. ವೈದ್ಯಾಧಿಕಾರಿ ನೇಮಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಮದಲ್ಲಿ ರಸಗೊಬ್ಬರ, ಕೀಟನಾಶಕ ಮಳಿಗೆ ಇಲ್ಲ. ರೈತರು ಪಕ್ಕದ ಊರಿಗೆ ಹೋಗಿ ತರಬೇಕು. ಹೀಗಾಗಿ, ಗ್ರಾಮದಲ್ಲಿ ಮಳಿಗೆ ತೆರೆಯಲು ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಕ್ರಮ ವಹಿಸಲಾಗುವುದು ಎಂದು ಕೃಷಿ ಅಧಿಕಾರಿ ತಿಳಿಸಿದರು.

ಸಾಮಾಜಿಕ ಭದ್ರತೆ (ವಿವಿಧ ಮಾಸಾಶನ) ಯೋಜನೆಗಳಿಗೆ ಸಂಬಂಧಿಸಿದವು 15, ಒತ್ತುವರಿ ಇತ್ಯಾದಿಗೆ ಸಂಬಂಧಿಸಿದವು– 15, ಪೌತಿ ಖಾತೆಗೆ ಸಂಬಂಧಿಸಿದ– 10, ಮೆಸ್ಕಾಂಗೆ ಸಂಬಂಧಿಸಿದವು– 5, ಇನ್ನಿತರ 15 ಅರ್ಜಿಗಳು ಸಲ್ಲಿಕೆಯಾಗಿದ್ದವು.

ವಿದ್ಯುತ್‌ ತಂತಿಗೆ ತಾಗುವ ಕೊಂಬೆಗಳನ್ನು ಕತ್ತರಿಸಬೇಕು, ಶಿಥಿಲಾವಸ್ಥೆಗೆ ತಲುಪಿರುವ ವಿದ್ಯುತ್‌ ಕಂಬಗಳನ್ನು ಬದಲಿಸಬೇಕು, ಹಾಳಾಗಿರುವ ವಿದ್ಯುತ್‌ ಪರಿವರ್ತಕ ಸರಿಪಡಿಸಬೇಕು ಎಂದು ಮೆಸ್ಕಾಂ ಎಂಜಿನಿಯರ್‌ಗೆ ಗ್ರಾಮಸ್ಥರು ಕೋರಿದರು.

ತಹಶೀಲ್ದಾರ್‌ ವಿನಾಯಕ ಸಾಗರ್‌ ‘ಪ್ರಜಾವಾಣಿ’ಯೊಂದಿಗೆ ಮಾನತಾಡಿ, ‘60 ಅರ್ಜಿಗಳ ಪೈಕಿ 15ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಬಾಕಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು’ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಪೂರ್ಣಿಮಾ, ಕೃಷಿ ಅಧಿಕಾರಿ ಸುರೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು