ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕುಂಬಳ ಬೀಜಕ್ಕೆ ವಿದೇಶದಲ್ಲಿ ಬೇಡಿಕೆ

ಕಡೂರು, ಬೀರೂರು ಭಾಗದಲ್ಲಿ ಸಿಹಿ ಕುಂಬಳ ಬೀಜ ಉತ್ಪಾದನೆಗೆ ಒತ್ತು
Published 10 ಫೆಬ್ರುವರಿ 2024, 5:04 IST
Last Updated 10 ಫೆಬ್ರುವರಿ 2024, 5:04 IST
ಅಕ್ಷರ ಗಾತ್ರ

ಚಿಕ್ಕಮಗಳೂರು:‌ ಸಿಹಿ ಕುಂಬಳವನ್ನು ಸ್ಥಳೀಯವಾಗಿ ತರಕಾರಿಯಾಗಿ ಅಷ್ಟೇ ಬಳಸಿ ಅದರೊಳಗಿನ ಬೀಜವನ್ನು ಬಿಸಾಡುವುದೇ ಹೆಚ್ಚು. ಕಡೂರು ಮತ್ತು ಬೀರೂರು ಭಾಗದ ರೈತರು ಬೀಜವನ್ನಷ್ಟೇ ತೆಗೆದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಸಿಹಿ ಕುಂಬಳದ ಬೀಜಕ್ಕೆ ಜಪಾನ್, ಅಮೆರಿಕಾ, ಚೀನಾ ದೇಶಗಳಲ್ಲಿ ಬಲು ಬೇಡಿಕೆ ಇದ್ದು, ಈ ಭಾಗದ ರೈತರಿಗೆ ಲಾಭದ ಬೆಳೆಯಾಗಿದೆ.

ಮಣ್ಣಿನ ಗುಣ ಮತ್ತು ಹವಾಮಾನಕ್ಕೆ ಹೊಂದಿಕೆಯಾದರಷ್ಟೇ ಗುಣಮಟ್ಟದ ಕುಂಬಳ ಕಾಯಿಗಳನ್ನು ಬೆಳೆಯಲು ಸಾಧ್ಯ. ಆದ್ದರಿಂದಲೇ ಕಡೂರು ತಾಲ್ಲೂಕಿನ ಹಲವು ಹಳ್ಳಿಗಳನ್ನು ಗುರುತಿಸಿ ಬಿತ್ತನೆ ಬೀಜ ಮಾರಾಟ ಮಾಡುವ ಕಂಪನಿಗಳು ರೈತರ ಮೂಲಕ ಕುಂಬಳ ಕಾಯಿ ಬೆಳೆಸುತ್ತಿವೆ. ಆಸಕ್ತಿ ಇರುವ ರೈತರನ್ನು ಗುರುತಿಸಿ ಕಂಪನಿಗಳ ಪ್ರತಿನಿಧಿಗಳೇ ಬಿತ್ತನೆ ಬೀಜ ವಿತರಣೆ ಮಾಡುತ್ತಾರೆ. ಮೂರು ತಿಂಗಳ ಬಳಿಕ ಉತ್ಪಾದನೆಯಾಗುವ ಬೀಜವನ್ನು ಮತ್ತೆ ಅದೇ ಪ್ರತಿನಿಧಿಗಳು ಮಾರುಕಟ್ಟೆ ದರಕ್ಕೆ ಖರೀದಿ ಮಾಡುತ್ತಾರೆ.

ಸಿಹಿ ಕುಂಬಳ ಕಾಯಿ ಒಡೆದು ಅದರಲ್ಲಿನ ಬೀಜ ತೆಗೆದು ಒಣಗಿಸಿ ತೂಕದ ಲೆಕ್ಕದಲ್ಲಿ ರೈತರು ಮಾರಾಟ ಮಾಡುವುದು ಈ ಬೆಳೆಯ ವಿಶೇಷ. ಈ ಬೆಳೆಯಲ್ಲಿ ರೈತರಿಗೆ ಬೀಜವಷ್ಟೇ ಮುಖ್ಯ. ಬೀಜ ತೆಗೆದ ಬಳಿಕ ಕುಂಬಳ ಕಾಯಿ ಲೆಕ್ಕಕ್ಕಿಲ್ಲ.

ಬೀಜಕ್ಕಾಗಿ ಬೆಳೆಯುವ ಈ ಕುಂಬಳ ಸಾಮಾನ್ಯ ಬೆಳೆ ಪದ್ಧತಿಗಿಂತ ಭಿನ್ನ. ಕುಂಬಳದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ವಿಧಗಳಿವೆ. ಎರಡನ್ನೂ ಪ್ರತ್ಯೇಕವಾಗಿ ರೈತರು ಬೆಳೆಯುತ್ತಾರೆ. ಗಂಡು ಕುಂಬಳನ್ನು 10 ದಿನ ಮೊದಲೇ ಬಿತ್ತನೆ ಮಾಡುತ್ತಾರೆ. ಹೆಣ್ಣು ಕುಂಬಳದ ಗಿಡದಲ್ಲಿ ಮೊಗ್ಗು ಹೊರಡುವ ಸಂದರ್ಭಕ್ಕೆ ಸರಿಯಾಗಿ ಗಂಡು ಕುಂಬಳದ ಗಿಡದಲ್ಲಿ ಹೂವುಗಳು ಅರಳುತ್ತವೆ.

ಗಂಡು ಕುಂಬಳದ ಹೂವುಗಳನ್ನು ಕಿತ್ತು ಹೆಣ್ಣು ಕುಂಬಳದ ಮೊಗ್ಗಿಗೆ ಪರಾಗಸ್ಪರ್ಶ ಮಾಡುತ್ತಾರೆ. ಬಳಿಕ ಆ ಮೊಗ್ಗಿಗೆ ಜೇನುಹುಳ ಸೇರಿದಂತೆ ಯಾವುದೇ ಹುಳುಗಳ ಸ್ಪರ್ಶವಾಗದಂತೆ ಪೇಪರ್‌ ಕಟ್ಟಿ ಕಾಪಾಡುತ್ತಾರೆ. ಜೇನುಹುಳು ಅಥವಾ ಬೇರೆ ಹುಳುಗಳ ಸ್ಪರ್ಶವಾದರೆ ತಳಿಯ ಗುಣಮಟ್ಟ ಹಾಳಾಗುತ್ತದೆ ಎಂಬ ಕಾರಣಕ್ಕೆ ಈ ತಂತ್ರವನ್ನು ರೈತರು ಅನುರಿಸುತ್ತಾರೆ. ಹೂವು ಕಿತ್ತ ಬಳಿಕ ಗಂಡು ಕುಂಬಳ ಪ್ರಯೋಜನಕ್ಕೆ ಬರುವುದಿಲ್ಲ. ಹೆಣ್ಣು ಕುಂಬಳದ ಒಳಗಿರುವ ಬೀಜ ಬಲಿಯಲು ಮೂರು ತಿಂಗಳು ಬೇಕಾಗುತ್ತದೆ. ಅಲ್ಲಿಯ ತನಕ ಅವುಗಳನ್ನು ಸಲಹುತ್ತಾರೆ. ಕಾಯಿ ಒಡೆದು ಬೀಜಗಳನ್ನು ಪ್ರತ್ಯೇಕಿಸಿ ಒಣಗಿಸುತ್ತಾರೆ. 

ಸಿಹಿ ಕುಂಬಳದ ಬೀಜದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಆರೋಗ್ಯದಾಯಕ ಎಂಬ ಕಾರಣಕ್ಕೆ ಬೇಡಿಕೆ ಹೆಚ್ಚಿದೆ ಎಂದು ಈ ಕಂಪನಿಗಳ ಪ್ರತಿನಿಧಿಗಳು ವಿವರಿಸುತ್ತಾರೆ.

ಎಕರೆ ₹1 ಲಕ್ಷ ವರಮಾನ
ಕ್ವಿಂಟಾಲ್‌ಗೆ ₹80 ಸಾವಿರದಿಂದ ₹1 ಲಕ್ಷದ ತನಕ ಬೆಲೆ ಇದೆ. ಬೀಜ ವಿತರಿಸಿ ರೈತರಿಂದ ಖರೀದಿಸುವ ಹಲವು ಕಂಪನಿಗಳಿದ್ದು ನಾಮ್ದಾರಿ ತಳಿಗೆ ಹೆಚ್ಚಿನ ಬೆಲೆ ಇದೆ. ಜಪಾನ್ ಅಮೆರಿಕಾ ಮತ್ತು ಚೀನಾದಲ್ಲಿ ಬೇಡಿಕೆ ಇದೆ. ಆದ್ದರಿಂದಲೇ ಹೆಚ್ಚಿನ ಬೆಲೆ ಇದೆ ಎಂದು ರೈತರು ವಿವರಿಸುತ್ತಾರೆ. ಕಡೂರು ತಾಲ್ಲೂಕು ಬೀರೂರು ಹೋಬಳಿ ಜೋಡಿ ತಿಮ್ಮಾಪುರ ದೊಡ್ಡಘಟ್ಟ ಕಾರಿಹಳ್ಳಿ ಹುಲ್ಲೆಹಳ್ಳಿ ಎರೇಹಳ್ಳಿ ಗಾಳಿಹಳ್ಳಿ ಕಡೂರು ಕಸಬಾ ಹೋಬಳಿಯ ಕೊಪ್ಪಲು ನೀಲೇಗೌಡನ ಕೊಪ್ಪಲು ಹೊಸಹಳ್ಳಿ ಕುರುಬಗೆರೆ ಸುತ್ತಮುತ್ತಲ ರೈತರು ಹೆಚ್ಚಿನದಾಗಿ ಈ ಬೆಳೆಯನ್ನು ಆಶ್ರಯಿಸಿದ್ದಾರೆ. ಅದರಲ್ಲೂ ಜೋಡಿ ತಿಮ್ಮಾಪುರದ ಪ್ರತಿ ಮನೆಯ ರೈತರೂ ಈ ಬೆಳೆ ಬೆಳೆಯುತ್ತಾರೆ. ಮೂರು ತಿಂಗಳ ಬೆಳೆ ಆಗಿರುವುದರಿಂದ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಸಾಧ್ಯವಿದೆ. ಎಕರೆಗೆ ಕನಿಷ್ಠ ₹1 ಲಕ್ಷದಿಂದ ₹2 ಲಕ್ಷ ತನಕ ಆದಾಯ ಇದೆ. ಬಿತ್ತನೆ ಬೀಜ ಔಷಧಿ ಮತ್ತು ಕಾರ್ಮಿಕರ ಕೂಲಿ ಸೇರಿ ಎಕರೆಗೆ ಒಂದು ಬೆಳೆಗೆ ₹25 ಸಾವಿರ ಖರ್ಚಾಗುತ್ತದೆ. ಎರಡು ಬೆಳೆ ಬೆಳೆಯುವುದರಿಂದ ಎಕರೆಗೆ ₹3 ಲಕ್ಷದಿಂದ ₹3.50 ಲಕ್ಷ ಉಳಿತಾಯ ಆಗುತ್ತದೆ ಎಂದು ಜೋಡಿ ತಿಮ್ಮಾಪುರದ ರೈತ ಷಣ್ಮುಖಪ್ಪ ಹೇಳುತ್ತಾರೆ. ಕಡೂರು ತಾಲ್ಲೂಕಿನಲ್ಲೇ ಸಿಹಿ ಕುಂಬಳ ಬೆಳೆ ಅತೀ ಹೆಚ್ಚಿದೆ. 2022–23ನೇ ಸಾಲಿನಲ್ಲಿ 183 ಎಕರೆಯಲ್ಲಿ ಕುಂಬಳ ಬೆಳೆ ಇತ್ತು. ಈ ವರ್ಷ ಇನ್ನೂ ಹೆಚ್ಚಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT