ಭಾನುವಾರ, ಜುಲೈ 25, 2021
22 °C

ಕೋವಿಡ್-19 ಗೆದ್ದವರ ಕಥೆಗಳು| ಅಂಟು ಕಾಯಿಲೆಗೆ ಹೆದರಬೇಕಾಗಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾತ್ರಿ 11.25ರ ಹೊತ್ತಿನಲ್ಲಿ ಮಲಗಲು ಅಣಿಯಾಗುತ್ತಿದ್ದಾಗ ಆಸ್ಪತ್ರೆಯಿಂದ ಕರೆ ಬಂತು. ಕೋವಿಡ್‌–19 ಪತ್ತೆಯಾದ 36 ಮಂದಿಯಲ್ಲಿ ನಾನೂ ಒಬ್ಬ ಎಂದು ತಿಳಿದಾಗ ಎದೆಯಲ್ಲಿ ಉಂಟಾಗ ದುಗುಡ ಅಷ್ಟಿಷ್ಟಲ್ಲ. ಬೆಳಿಗ್ಗೆಯಾಗುವಷ್ಟರಲ್ಲಿ ಊರು, ಅಕ್ಕಪಕ್ಕದ ಹಳ್ಳಿಗಳಲ್ಲಿ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಅಕ್ಕಪಕ್ಕದ ಮನೆಗಳು ಬಾಗಿಲು ತೆರೆಯುವುದಿರಲಿ, ಕಿಟಕಿಗಳೂ ಬಂದ್‌ ಆಗಿದ್ದವು.

ಆಸ್ಪತ್ರೆಯ ವಾರ್ಡ್‌ನಲ್ಲಿ ಎಲ್ಲಾ ಥರದ ಜನರಿದ್ದರು. ಬಡವರು, ಶ್ರೀಮಂತರು, ಅಧಿಕಾರಿಗಳು, ನೌಕರರು, ರೈತರು ಒಟ್ಟಿಗೆ ಇದ್ದರು. ಹಿರಿಯರು, ಎಳೆಯ ಮಕ್ಕಳು, ಬಾಲಕರು, ಗರ್ಭಿಣಿಯರೂ ಇದ್ದರು. ಅವರೆಲ್ಲರೂ ವಾರ್ಡ್‌ನ ಕಾರಿಡಾರ್‌ನಲ್ಲಿ ಓಡಾಡುವುದನ್ನು ನೋಡಿ ಭಯ ತೊಲಗಿತು.

ವೈದ್ಯರು ಐದು ದಿನಕ್ಕಾಗಿ ಮಾತ್ರೆ ಕೊಟ್ಟರು. ನನ್ನ ಮನೆಯವರ ವರದಿ ನೆಗೆಟಿವ್‌ ಬಂದ ಕಾರಣ ಕೊಂಚ ಮನಸ್ಸು ನಿರಾಳವಾಯಿತು. ಹಾಸ್ಟೆಲ್‌ನಲ್ಲಿ ಇರುವಂತೆ ಆಸ್ಪತ್ರೆಯಲ್ಲಿ ದಿನ ಕಳೆದೆ.

ಸರಿಯಾಗಿ ಎಂಟನೇ ದಿನಕ್ಕೆ ಮತ್ತೆ ಕೋವಿಡ್‌ ಪರೀಕ್ಷೆ ನಡೆಯಿತು. ವೈದ್ಯರು ನೆಗೆಟಿವ್‌ ಬಂದವರ ಬಿಡುಗಡೆ ವಿಚಾರ ಹೇಳುವಾಗ ನನ್ನ ಹೆಸರನ್ನೂ ಕೂಗಿದರು. ಆಗ ನನ್ನ ಕಣ್ಣಲ್ಲಿ ಆನಂದ ಭಾಷ್ಪ ಸುರಿಯಿತು. ವೈದ್ಯರು, ಶುಶ್ರೂಷಕರು, ಸ್ವಚ್ಛತಾ ಸಿಬ್ಬಂದಿ, ಊಟ ಕೊಡುವವರ ಸೇವೆ ನಿಜವಾದ ದೇವರ ಸೇವೆಯಾಗಿತ್ತು. ಅವರ ಇಚ್ಛಾಶಕ್ತಿಗೆ ನನ್ನ ಶಾಷ್ಟಾಂಗ ನಮಸ್ಕಾರಗಳು.

ಕೋವಿಡ್‌ ಒಂದು ಸಾಮಾನ್ಯ ಅಂಟು ಕಾಯಿಲೆಯಷ್ಟೇ. ಧೈರ್ಯದಿಂದ ಎದುರಿಸಿದರೆ ಯಾವುದೇ ತೊಂದರೆಯಾಗದು. ಅಂತರವೇ ಅದಕ್ಕೆ ಔಷಧಿ. ರೋಗ ಬಂದರೂ ಹೆದರಬೇಕಾಗಿಲ್ಲ. ಬಿಸಿನೀರು ಕುಡಿಯುತ್ತಾ, ಚೆನ್ನಾಗಿ ಊಟ, ನಿದ್ದೆ ಮಾಡುತ್ತಿದ್ದರೆ ರೋಗ ಮಾಯವಾಗುವುದೇ ತಿಳಿಯುವುದಿಲ್ಲ.

ಸೋಮಶೇಖರ್, ಕೊಪ್ಪ, ಶಿಕ್ಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು