ಶನಿವಾರ, ಡಿಸೆಂಬರ್ 5, 2020
19 °C
ಭಾರತೀಯ ಅರಣ್ಯ ಸರ್ವೇಕ್ಷಣೆ ಸಂಸ್ಥೆ ವರದಿ – ವೃಕ್ಷ ದಟ್ಟಣೆ ಪ್ರಮಾಣ ಶೇ 63.5ಕ್ಕೆ ಏರಿಕೆ

ದ.ಕ. ಜಿಲ್ಲೆಯಲ್ಲಿ ‘ಹಸಿರು ಹೊದಿಕೆ’ ಹೆಚ್ಚಳ

ಪ್ರದೀಶ್‌ ಎಚ್‌. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಭಾರತೀಯ ಅರಣ್ಯ ಸರ್ವೇಕ್ಷಣೆ ಸಂಸ್ಥೆ (ಎಫ್‌ಎಸ್‌ಐ) ಬಿಡುಗಡೆಗೊಳಿಸಿರುವ ಅರಣ್ಯ ಸ್ಥಿತಿ ವರದಿ– 2019 ಪ್ರಕಾರ ಅರಣ್ಯ ಪ್ರದೇಶ ವಿಸ್ತೀರ್ಣ ಹೆಚ್ಚಳ ಪ್ರಮಾಣದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017ರಲ್ಲಿ ಶೇ 60.17ರಷ್ಟು ಇದ್ದ ವೃಕ್ಷ ದಟ್ಟಣೆ ಪ್ರಮಾಣ, ಎರಡು ವರ್ಷಕ್ಕೆ ಶೇ 63.5ಕ್ಕೆ ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಐಆರ್‌ಎಸ್ ರಿಸೋರ್ಸ್ ಸ್ಯಾಟ್-2 ಎಲ್ಐಎಸ್ಎಸ್ ಐಐಐ ಉಪಗ್ರಹದ ದತ್ತಾಂಶದ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ಅರಣ್ಯೀಕರಣ ಚಟುವಟಿಕೆ, ವೃಕ್ಷಾರೋಪಣ ಅಭಿಯಾನ, ಉತ್ತಮ ಸಂರಕ್ಷಣಾ ಕ್ರಮಗಳು, ಕಾಡಿನ ಸುಸ್ಥಿರತೆ, ಅರಣ್ಯ ಕೃಷಿಯಿಂದಾಗಿ ವೃಕ್ಷಗಳ ಪ್ರಮಾಣ ಹಿಗ್ಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಎಫ್‌ಎಸ್‌ಐ ವರದಿ ಪ್ರಕಾರ 2017ರಿಂದ ಜಿಲ್ಲೆಯಲ್ಲಿ 140 ಚ.ಕಿ.ಮೀ.ನಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಮಂಗಳೂರು ಅರಣ್ಯ ವಿಭಾಗ ಮತ್ತು ಜಿಲ್ಲೆಯ ಕೆಲ ಭಾಗಗಳನ್ನು ಒಳಗೊಂಡ ಕುಂದಾಪುರ ವಿಭಾಗದ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ಈ ಹೆಚ್ಚಳ ಕಂಡುಬಂದಿದೆ.

ಜಿಲ್ಲೆಯ ಭೌಗೋಳಿಕ ಪ್ರದೇಶ ವ್ಯಾಪ್ತಿ 4.86 ಲಕ್ಷ ಹೆಕ್ಟೇರ್‌ ಇದೆ. ಈ ಪೈಕಿ ಮೀಸಲು ಅರಣ್ಯ 1.13 ಲಕ್ಷ ಹೆಕ್ಟೇರ್‌ ಸೇರಿದಂತೆ ಒಟ್ಟು 1.26 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವೃಕ್ಷ ಸಂಪತ್ತಿದೆ. ಜಿಲ್ಲೆಯ ಒಟ್ಟು ಪ್ರದೇಶದಲ್ಲಿ ಶೇ 26ರಷ್ಟು ಅರಣ್ಯ ಪ್ರದೇಶವಿದೆ.

‘ಮಂಗಳೂರು ಅರಣ್ಯ ವಿಭಾಗದಲ್ಲಿ ಪ್ರತಿವರ್ಷ 4ರಿಂದ 5 ಲಕ್ಷ ಗಿಡಗಳನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ನೆಡುತ್ತಿದ್ದೇವೆ. ಇನ್ನುಳಿದ 5–6 ಲಕ್ಷ ಗಿಡಗಳನ್ನು ಕೃಷಿ– ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಾರ್ವಜನಿಕರಿಗೆ ಸಹಾಯಧನದಲ್ಲಿ ವಿತರಿಸಲಾಗಿದೆ. ಈ ಯೋಜನೆಯಡಿ ರೈತರಿಗೆ ₹ 100 ಪ್ರೋತ್ಸಾಹಧನ (ಮೊದಲ ವರ್ಷ ₹ 30, ಎರಡನೇ ವರ್ಷ ₹ 30 ಹಾಗೂ 3ನೇ ವರ್ಷ ₹ 40) ನೀಡಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಈ ಪ್ರೋತ್ಸಾಹಧನವನ್ನು ₹ 125ಕ್ಕೆ (35+40+50) ಏರಿಸಲಾಗಿದೆ. ಕಳೆದ ವರ್ಷ ಸುಮಾರು ₹ 22 ಲಕ್ಷ ವಿತರಿಸಲಾಗಿದೆ. ಈ ವರ್ಷ ಸುಮಾರು ₹ 30 ಲಕ್ಷ ಬೇಕಾಗಬಹುದು’ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ. ಕರಿಕಲನ್‌.

‘ಮಂಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಗರದೊಳಗೆ ಅರಣ್ಯ ಕಡಿಮೆಯಾಗುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಈಗಾಗಲೇ ಎಂಆರ್‌ಪಿಎಲ್‌ ಆವರಣಗೊಳಗೆ 20 ಸಾವಿರ, ಒಎಂಪಿಎಲ್‌ನಲ್ಲಿ 13 ಸಾವಿರ ಗಿಡಗಳನ್ನು ನೆಟ್ಟು, ಹನಿ ನೀರಾವರಿ ಕಲ್ಪಿಸಲಾಗಿದೆ. ಎಡಪದವಿನಲ್ಲಿ ಅತಿಕ್ರಮಣವಾಗಿದ್ದ 40 ಎಕರೆ ಪ್ರದೇಶವನ್ನು ತೆರವು ಮಾಡಿ, ನೀರಿನ ವ್ಯವಸ್ಥೆಯೊಂದಿಗೆ ನೆಡುತೋಪು ಮಾಡಿದ್ದೇವೆ’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್‌.

‘ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅವರ ಸೂಚನೆಯಂತೆ ಕಳೆದ ವರ್ಷಚರ್ಚ್‌ಗಳ ಆವರಣದಲ್ಲಿ 80 ಸಾವಿರಕ್ಕೂ ಅಧಿಕ ಗಿಡಗಳನ್ನು ನಡೆಸಲಾಗಿದೆ. ರೋಟರಿ ಸಂಸ್ಥೆಯವರು 25 ಸಾವಿರಕ್ಕೂ ಅಧಿಕ ಗಿಡ ನೆಟ್ಟಿದ್ದಾರೆ. ಬೆಂಗ್ರೆಯಲ್ಲಿ 25 ಎಕರೆ ನೆಡುತೋಪು ಅಭಿವೃದ್ಧಿಗೆ ಎಂಆರ್‌ಪಿಎಲ್‌ನ ಸಿಎಸ್‌ಆರ್‌ ನಿಧಿಯಿಂದ 5 ವರ್ಷಕ್ಕೆ ₹ 1.25 ಕೋಟಿ ನೀಡಲಾಗುತ್ತಿದೆ. ಹೀಗೆ, ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿದ ಫಲವಾಗಿ ವೃಕ್ಷ ಸಂಪತ್ತು ಸಹಜವಾಗಿಯೇ ಹೆಚ್ಚಳವಾಗಿದೆ’ ಎನ್ನುತ್ತಾರೆ ಅವರು.

‘ಸ್ಯಾಟ್‌ಲೈಟ್‌ ಆಧಾರದಲ್ಲಿ ಅರಣ್ಯವನ್ನು ಅಳೆಯುವ ಮಾನದಂಡ ಸರಿಯಲ್ಲ’ ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ. ಸ್ಯಾಟ್‌ಲೈಟ್‌ ಚಿತ್ರದ ಮೂಲಕ ಲೆಕ್ಕ ಹಾಕಿದರೆ ಅರಣ್ಯ ಅತಿಕ್ರಮಣ ಪ್ರದೇಶವೂ ಹಸಿರಾಗಿಯೇ ಕಾಣುತ್ತದೆ. ಮಾತ್ರವಲ್ಲ ಖಾಸಗಿಯವರು ಬೆಳೆಸಿದ ರಬ್ಬರ್‌, ಕಾಫಿ, ಟೀ, ಅಡಿಕೆ ತೋಟ
ಗಳೂ ಹಸಿರಾಗಿಯೇ ಕಾಣುತ್ತದೆ. ಆ ಮಾನದಂಡದಲ್ಲಿ ಅರಣ್ಯ ವಿಸ್ತರಣೆಯಾಗಿದೆ ಎಂದು ಹೇಳುವುದು ಸರಿಯಲ್ಲ’ಎಂಬುದು ಅವರ ಅಭಿಪ್ರಾಯ.

‘ಕೋವಿಡ್‌: ಅರಣ್ಯ ವಿಸ್ತರಣೆ ಅನುದಾನ ಕಡಿತ’

‘ಕೋವಿಡ್‌ ಕಾರಣಕ್ಕಾಗಿ 2021ನೇ ಸಾಲಿಗೆ ಬಹುತೇಕ ಯೋಜನೆಗಳಿಗೆ ಅನುದಾನ ಕಡಿತವಾಗಿದೆ. ಕೃಷಿ– ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ 5 ಲಕ್ಷ ಗಿಡಗಳನ್ನು ಈ ವರ್ಷ ವಿತರಿಸುವ ಗುರಿ ನೀಡಲಾಗಿತ್ತು. ಎರಡೇ ತಿಂಗಳಲ್ಲಿ ಅವು ಮುಗಿದಿತ್ತು. ಮುಂದಿನ ವರ್ಷಕ್ಕೆ ಕೇವಲ 1.5 ಲಕ್ಷ ಗುರಿ ನೀಡಲಾಗಿದೆ’ ಎಂದು ಡಿಸಿಎಫ್‌ ಡಾ.ವಿ. ಕರಿಕಲನ್‌ ಬೇಸರ ವ್ಯಕ್ತಪಡಿಸಿದರು.

‘ಒಟ್ಟು ಬೇಡಿಕೆಯ ಶೇ 80ರಷ್ಟು ಗುರಿ ಕಡಿಮೆ ಮಾಡಿದ್ದರಿಂದ ವಿತರಣೆ ಮಾಡುವುದು ಕಷ್ಟವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು, ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಡಿಸೆಂಬರ್‌ನಲ್ಲಿ ಸಕಾರಾತ್ಮಕ ಸುದ್ದಿಯ ನಿರೀಕ್ಷೆಯಲ್ಲಿದ್ದೇವೆ. ಡಿಸೆಂಬರ್‌ ಅಂತ್ಯದಲ್ಲಿ ಗಿಡಗಳನ್ನು ಬೆಳೆಸಲು ಆರಂಭ ಮಾಡಬೇಕಿದೆ. ಅಳಿವಿನ ಅಂಚಿನಲ್ಲಿರುವ ಹಾಗೂ ಪಶ್ಚಿಮ ಘಟ್ಟಗಲ್ಲಿ ಬೆಳೆಯುವ ವಿಶೇಷ ತಳಿಗಳನ್ನು (ರಾಂಪತ್ರೆ, ದಾಲ್ಚಿನ್ನಿ, ಪುನರ್‌ಪುಲಿ, ಉಂಡೆಹುಲಿ...) ಬೆಳೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು