ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿ ದರ ಕುಸಿತ; ಬೆಳೆಗಾರ ಕಂಗಾಲು

ಕಾಫಿನಾಡಿನ ವಿವಿಧೆಡೆ ಶುಂಠಿ ಕೃಷಿ– ಇನ್ನಷ್ಟು ದರ ಇಳಿಕೆಯಾಗುವ ಆತಂಕ
Last Updated 14 ನವೆಂಬರ್ 2020, 3:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೆಲ ತಿಂಗಳ ಹಿಂದೆ ಕ್ವಿಂಟಲ್‌ಗೆ ₹ 3,500 ವರೆಗೆ ಇದ್ದ ಶುಂಠಿ ಬೆಳೆ ಧಾರಣೆ ₹ 1,500ಕ್ಕೆ ಇಳಿಕೆಯಾಗಿದೆ. ದರ ಕುಸಿತದಿಂದ ಬೆಳೆಗಾರರು ನಷ್ಟ, ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲ್ಲೂಕು, ಮಲೆನಾಡು ಭಾಗದ ಹಲವೆಡೆ ಶುಂಠಿ ಬೆಳೆಯಲಾಗಿದೆ. ರೋಗ ಬಾಧೆ, ನೀರಿನ ಸಮಸ್ಯೆ ಇತ್ಯಾದಿ ತೊಡಕುಗಳ ನಡುವೆ ರೈತರು ಶುಂಠಿ ಬೆಳೆದಿದ್ದಾರೆ.

ಒಂದು ಎಕರೆ ಶುಂಠಿ ಬೆಳೆ ನಿರ್ವಹಣೆಗೆ (ಬೀಜ, ಔಷಧ, ಗೊಬ್ಬರ, ನೀರು ಪೂರೈಕೆ…) ಎರಡೂವರೆ ಲಕ್ಷದ ವರೆಗೆ ವೆಚ್ಚವಾಗುತ್ತದೆ. ಈಗಿರುವ ದರಕ್ಕೆ ಮಾರಾಟ ಮಾಡಿದರೆ ಉತ್ಪಾದನೆಗೆ ತಗುಲಿದ ವೆಚ್ಚವೂ ಸಿಗುವುದಿಲ್ಲ ಎಂಬುದು ರೈತರು ಅಳಲು.

ಬೆಳೆಗಾರರು ಶುಂಠಿಯನ್ನು ಸ್ಥಳೀಯ ವರ್ತಕರು, ಎಪಿಎಂಸಿ ಮಾರು ಕಟ್ಟೆಯಲ್ಲಿ ಮಾರಾಟ ಮಾಡು ತ್ತಾರೆ. ಮುಂಬೈ. ಕೋಲ್ಕತ್ತ, ನವದೆಹಲಿ, ಚೆನ್ನೈ, ಹೈದರಾಬಾದ್‌ ಮೊದಲಾದ ಕಡೆಗಳಿಗೆ ಶುಂಠಿ ಕಳಿಸುತ್ತಾರೆ. ಧಾರಣೆ ಇನ್ನು ಕುಸಿಯಬಹುದೆಂಬ ಭಯದಲ್ಲಿ ಹಲವು ಬೆಳೆಗಾರರು ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾರೆ.

‘ರೈತರು ಒಮ್ಮೆಲೆ ಶುಂಠಿ ಕೀಳಲು ಶುರು ಮಾಡಿದಾಗ ಮಾಲು ಯಥೇಚ್ಛವಾಗಿ ಪೂರೈಕೆಯಾಗುತ್ತದೆ. ಮಾರುಕಟ್ಟೆಯಲ್ಲಿ ಮಾಲು ಜಾಸ್ತಿ ಇದ್ದರೆ ಬೆಲೆ ಕುಸಿಯುವುದು ಸಹಜ. ಈ ಬಾರಿ ಇಳುವರಿಯೂ ಕಡಿಮೆ ಇದೆ. ಸ್ವಲ್ಪ ದಿನ ತಾಳಿದರೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ’ ಎಂದು ತಾಲ್ಲೂಕಿನ ಮತ್ತಾವರದ ಬೆಳೆಗಾರ ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಊರಿನಲ್ಲಿ ಶೇ 90 ರಷ್ಟು ಬೆಳೆಗಾರರು ಶುಂಠಿ ಮಾರಾಟ ಮಾಡಿದ್ದಾರೆ. ಶುಂಠಿ ಬೆಳೆ ಜಾಸ್ತಿ ಇದೆ, ಬೆಲೆ ಇನ್ನು ಕಡಿಮೆಯಾಗುತ್ತದೆ ಸ್ಥಳೀಯ ಮಧ್ಯವರ್ತಿಗಳು, ವರ್ತಕರು ರೈತರನ್ನು ದಾರಿತಪ್ಪಿಸುತ್ತಾರೆ. ಅದಕ್ಕೆಲ್ಲ ಕಿವಿಗೊಡಬಾರದು’ ಎಂದು ಹೇಳಿದರು.

ವರ್ಷದ ಹಿಂದೆ ಶುಂಠಿಗೆ ಬಂಪರ್‌ ಬೆಲೆ ಇದ್ದಿದ್ದರಿಂದ ಹಲವರು ಶುಂಠಿ ಕೃಷಿ ಕಡೆಗೆ ವಾಲಿದ್ದಾರೆ. ಬೆಳೆದಿರುವವರಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು ಇದ್ದಾರೆ. ಕೆಲವರು ಜಮೀನು ಗೇಣಿಗೆ ಪಡೆದು ಶುಂಠಿ ಬೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT