ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆಶಾಕಿರಣ

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು
ರಘು ಕೆ.ಜಿ.
Published 7 ಮೇ 2024, 8:32 IST
Last Updated 7 ಮೇ 2024, 8:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಎನ್‌.ಎಂ.ಸಿ ವೃತ್ತದ ಮಲ್ಲಂದೂರು ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉನ್ನತ ವ್ಯಾಸಂಗ ಬಯಸುವ ಗ್ರಾಮೀಣ ಹಾಗೂ ನಗರ ಭಾಗದ ನೂರಾರು ವಿದ್ಯಾರ್ಥಿನಿಯರಿಗೆ ಆಶಾಕಿರಣವಾಗಿದೆ. 

ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದಿದ್ದರೂ ವಾಣಿಜ್ಯ ಮತ್ತು ಕೈಗಾರಿಕಾ ತರಬೇತಿ ಇಲಾಖೆ ಜಾಗದ ಕನಿಷ್ಠ ಕೊಠಡಿಗಳಲ್ಲಿಯೇ 2014–15ರಿಂದ ತರಗತಿಗಳನ್ನು ಕಾರ್ಯಾರಂಭ ಮಾಡಿದೆ. ಪ್ರತಿವರ್ಷ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ.

ಕಾಲೇಜಿನಲ್ಲಿ ಬಿ.ಎ. ಮತ್ತು ಬಿ.ಕಾಂ ಪದವಿ ಕೋರ್ಸ್‌ಗಳಿವೆ. ಬಿ.ಎ. ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಐಚ್ಛಿಕ ಕನ್ನಡ ಕೋರ್ಸ್‌ಗಳಿದ್ದು, ಪ್ರಸ್ತುತ ಕಾಲೇಜಿನಲ್ಲಿ 474 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 7 ಮಂದಿ ಖಾಯಂ ಬೋಧಕರು, 14 ಅತಿಥಿ ಉಪನ್ಯಾಸಕರು, 5 ಬೋಧಕೇತರ ಸಿಬ್ಬಂದಿ ಹಾಗೂ ಇಬ್ಬರು ಸಿಡಿಸಿ ನೌಕರರು ಇದ್ದಾರೆ. ಪ್ರಮುಖವಾಗಿ ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್‌, ದೈಹಿಕ ಶಿಕ್ಷಣ ಉಪನ್ಯಾಸಕರ ಖಾಯಂ ಹುದ್ದೆಗಳ ಕೊರತೆ ಇದೆ.

ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕ ವರ್ಗವಿದೆ. ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಉಪನ್ಯಾಸಕರು, ಸಿಬ್ಬಂದಿ ಹಾಗೂ ಬೋಧನಾ ತರಗತಿ ಒಳಗೊಂಡಂತೆ ಒಟ್ಟು 18 ಕೊಠಡಿಗಳಿವೆ. ಆಯ್ದ ನಾಲ್ಕು ತರಗತಿ ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಕಾಲೇಜು ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ಯಾನಿಟರಿ ಪ್ಯಾಡ್ ವಿಲೇವಾರಿ ಯಂತ್ರಗಳನ್ನು ಅಳವಡಿಸಲಾಗಿದ್ದು, ಕಾಲೇಜು ಸುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್‌.ಎಂ. ನಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಹಾಗೂ ಖಾಸಗಿ ಸಂಘ ಸಂಸ್ಥೆ ವತಿಯಿಂದಲೂ ವಿದ್ಯಾರ್ಥಿವೇತನದ ಸವಲತ್ತು ನೀಡಲಾಗುತ್ತಿದೆ. ವಿವಿಧ ಉದ್ಯೋಗವಕಾಶ ಪಡೆಯಲು ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ, ವೃತ್ತಿ ಮಾರ್ಗದರ್ಶನದ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

ಎನ್‌ಎಸ್‌ಎಸ್‌, ರೇಂಜರ್ಸ್‌, ಸಾಂಸ್ಕೃತಿಕ ವೇದಿಕೆ ಹಾಗೂ ರೆಡ್‌ ಕ್ರಾಸ್‌ ವೇದಿಕೆ ಘಟಕ ಕಾಲೇಜಿನಲ್ಲಿವೆ. ಶಿಕ್ಷಣಕ್ಕೆ ಅನುಕೂಲವಾಗುವಂತೆ ಕಂಪ್ಯೂಟರ್ ಲ್ಯಾಬ್‌ನಲ್ಲಿ ಉಚಿತ ವೈ–ಪೈ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ಮೂಲಕ ವಿದ್ಯಾರ್ಥಿನಿಯರ ಯೋಗಕ್ಷೇಮ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.

2022ರಲ್ಲಿ ಕಾಲೇಜಿಗೆ ನ್ಯಾಕ್‌ ಮೌಲ್ಯಮಾಪನ ಸಮಿತಿಯಿಂದ ಮಾನ್ಯತೆ ಪಡೆದಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶದ ಜತೆಗೆ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣವು ಹೆಚ್ಚುತ್ತಿದೆ. ಇಲ್ಲಿನ ಮಹಿಳಾ ಸರ್ಕಾರಿ ಕಾಲೇಜು ಹೆಚ್ಚಾಗಿ ಗ್ರಾಮೀಣ, ಬಡ, ಮಧ್ಯಮ ವರ್ಗದ ವಿದ್ಯಾರ್ಥಿನಿಯರಿಗೆ ಹೆಚ್ಚು ಅನುಕೂಲವಾಗಿದೆ. ಪ್ರಸ್ತುತ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ವಿದ್ಯಾರ್ಥಿನಿಯರು ದಾಖಲಾಗುವ ಮೂಲಕ ಸದುಪಯೋಗಪಡೆದುಕೊಳ್ಳುವಂತೆ ಕೋರಿದರು.

ಚಿಕ್ಕಮಗಳೂರಿನ ಎನ್‌ಎಂಸಿ ವೃತ್ತದ ಬಳಿ ಇರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನೋಟ
ಚಿಕ್ಕಮಗಳೂರಿನ ಎನ್‌ಎಂಸಿ ವೃತ್ತದ ಬಳಿ ಇರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನೋಟ

ಆಟದ ಮೈದಾನ ಕೊಠಡಿ ಕೊರತೆ ರಾಮನಹಳ್ಳಿಯ ಡಯೆಟ್‌ ಆವರಣದ ಸರ್ಕಾರಿ ಜಾಗದಲ್ಲಿ ನೂತನ ಮಹಿಳಾ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ 2.20 ಎಕರೆ ಜಾಗ ಮಂಜೂರಾಗಿದೆ. ಮೊದಲ ಹಂತದಲ್ಲಿ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭವಾಗಬೇಕಿದೆ ಎಂದು ಪ್ರಾಂಶುಪಾಲ ಎಸ್‌.ಎಂ. ನಟೇಶ್‌ ತಿಳಿಸಿದರು. ಸದ್ಯ ಕಾಲೇಜಿನಲ್ಲಿ ಬಿಎಸ್‌ಸಿ ಬಿಬಿಎ ಒಳಗೊಂಡಂತೆ ಸ್ನಾತಕ ಕೋರ್ಸ್‌ಗಳನ್ನು ಆರಂಭಿಸುವ ಚಿಂತನೆ ಇದೆ. ಆದರೆ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಕೊರತೆ ಇದೆ. ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದ್ದು ತ್ವರಿತವಾಗಿ ಕಾಮಗಾರಿ ಪೂರ್ಣಗೊಂಡರೆ ವರ್ಷದೊಳಗೆ ಅಲ್ಲಿಯೇ ತರಗತಿಗಳು ಆರಂಭವಾಗುವ ವಿಶ್ವಾಸವಿದೆ ಎಂದರು. ಕಾಲೇಜಿಗೆ ಆಟದ ಮೈದಾನದ ಕೊರತೆ ಇದೆ. ಸ್ವಂತ ಕಟ್ಟಡವಿಲ್ಲದ ಕಾರಣ ಸರ್ಕಾರದಿಂದ ಮೂಲಸೌಕರ್ಯಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗಿಲ್ಲ. ಕೆಲವು ಸಂಸ್ಥೆಗಳು ಕಾಲೇಜಿಗೆ ಕಂಪ್ಯೂಟರ್ ಪುಸ್ತಕಗಳ ಸವಲತ್ತು ಕೊಡುಗೆ ನೀಡಿದೆ. ಸದ್ಯ ಪೀಠೋಪಕರಣಗಳ ಕೊರತೆ ಇಲ್ಲ ಇರುವ ಕೊಠಡಿಗಳಲ್ಲಿ ಬೋಧನೆ ನಡೆಯುತ್ತಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT