ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಎಸ್‌ಜಿ ಸರ್ಕಾರಿ ಕಾಲೇಜು: ಸೌಕರ್ಯ ಕೊರತೆ, 52 ಹುದ್ದೆ ಖಾಲಿ

Last Updated 5 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರುಜಿಲ್ಲೆಯಲ್ಲಿ 14 ಸರ್ಕಾರಿ ಪದವಿ ಕಾಲೇಜುಗಳು ಇವೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಇದ್ದಾರೆ. ಬಹಳಷ್ಟು ಕಾಲೇಜುಗಳು ಮೂಲಸೌಕರ್ಯಗಳು ಇಲ್ಲದೆ ನಲುಗಿವೆ. ಈ ಕಾಲೇಜುಗಳ ಸ್ಥಿತಿಗತಿ ಸರಣಿ ಇಂದಿನಿಂದ.

***

ಚಿಕ್ಕಮಗಳೂರು: ಅತಿಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು ಎಂಬ ಹೆಗ್ಗಳಿಕೆಯ ನಗರದ ಐಡಿಎಸ್‌ಜಿ (ಇಂದಾವರ ದೊಡ್ಡಸಿದ್ದಲಿಂಗೇಗೌಡ) ಪದವಿ ಕಾಲೇಜು ಸೌಲಭ್ಯಗಳ ಕೊರತೆಯಿಂದ ಸೊರಗಿದೆ. ಕಾಯಂ ಬೋಧಕರು, ಬೋಧಕೇತರ ನೌಕರರ ಹುದ್ದೆಗಳು ಬಹಳಷ್ಟು ಖಾಲಿ ಇವೆ.

ಕಟ್ಟಡದ ತಾರಸಿಯ ಹಲವೆಡೆ ಸಿಮೆಂಟ್‌ ಕಳಚಿಬಿದ್ದಿದೆ, ಹಲವು ಕಿಟಕಿ ಬಾಗಿಲುಗಳು ಇಲ್ಲ, ತರಗತಿ ಕೊಠಡಿಗಳಲ್ಲಿ ಕೆಲ ಪೀಠೋಪಕರಣಗಳು ಹಾಳಾಗಿದ್ದು ಮೂಲೆಗುಂಪಾಗಿವೆ, ಹಲವು ಕೊಠಡಿಗಳಲ್ಲಿ ದೂಳು ಇದೆ, ಶೌಚಾಲಯಗಳು ದುಃಸ್ಥಿತಿಯಲ್ಲಿವೆ.

ಆವರಣದಲ್ಲಿ ಪ್ಲಾಸ್ಟಿಕ್‌, ಕಸಕಡ್ಡಿ ಬಿದ್ದಿವೆ, ಕೆಲವೆಡೆ ಗಿಡಗಂಟಿಗಳು ಬೆಳೆದಿವೆ. ಪತ್ರಿಕೋದ್ಯಮ, ಗಣಕ ವಿಜ್ಞಾನ, ಪರಿಸರ ವಿಜ್ಞಾನ ಮೊದಲಾದ ವಿಷಯಗಳಿಗೆ ಒಬ್ಬರೂ ಕಾಯಂ ಬೋಧಕರು ಇಲ್ಲ. ಕೊಠಡಿಗಳ ಕೊರತೆ ಇದೆ.

ಕಾಲೇಜು ಪ್ರದೇಶ ಸುಮಾರು 16 ಎಕರೆ ವಿಸ್ತೀರ್ಣ ಇದೆ. ಮುಖ್ಯ ಕಟ್ಟಡದಲ್ಲಿ 60ಕ್ಕೂ ಹೆಚ್ಚು ಕೊಠಡಿಗಳು ಇವೆ. ಈ ಕಟ್ಟಡ ಶಿಥಿಲಾವಸ್ಥೆಯ ಕಡೆಗೆ ಮುಖ ಮಾಡಿದೆ. ಬಾಲಕರ ಹಾಸ್ಟೆಲ್‌ ಕಟ್ಟಡ ಪಾಳು ಬಿದ್ದಿದೆ.

ಬಿ.ಎಸ್ಸಿ, ಬಿ.ಎ, ಬಿಬಿಎ, ಬಿ.ಕಾಂ ಸ್ನಾತಕ ಪದವಿ ಹಾಗೂ ಎಂ.ಎ, ಎಂ.ಎಸ್ಸಿ, ಎಂಕಾಂ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಇವೆ. ಚಿಕ್ಕಮಗಳೂರು ತಾಲ್ಲೂಕು ಮಾತ್ರವಲ್ಲದೆ, ಜಿಲ್ಲೆಯ ಇತರ ತಾಲ್ಲೂಕು, ಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು ಇದ್ದಾರೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಹೆಚ್ಚು ಇದ್ದಾರೆ. ಸೌಕರ್ಯಗಳ ಕೊರತೆಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕಮರಿವೆ.

‘ಹೊಸ ಕಟ್ಟಡವೊಂದನ್ನು ನಿರ್ಮಿಸಿಲ್ಲ, ಇನ್ನು ಉದ್ಘಾಟನೆಯಾಗಿಲ್ಲ. ಕಟ್ಟಡವನ್ನು ತಗ್ಗು ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ನೀರು ನಿಲ್ಲುತ್ತದೆ’ ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೌಚಾಲಯ ಅವ್ಯವಸ್ಥೆ: ಪುರುಷ ಮತ್ತು ಮಹಿಳೆಯರು ಶೌಚಾಲಯಗಳಲ್ಲಿ ಅವ್ಯವಸ್ಥೆಗಳು ಇವೆ. ನೀರಿನ ಪೂರೈಕೆ ಕೊರತೆ ಇದೆ, ನಿರ್ವಹಣೆ ಸಮಸ್ಯೆ ಇದೆ. ಕೆಲ ಕಮೋಡ್‌, ಬಾಗಿಲು ಹಾಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT