ಜಯಪುರ (ಬಾಳೆಹೊನ್ನೂರು): ಮೂರು ಗ್ರಾಮ ಪಂಚಾಯಿತಿಗಳ ಗಡಿಯಲ್ಲಿರುವ ಜಲದುರ್ಗ ಸೈಟ್ ಯಾವ ಪಂಚಾಯಿತಿಗೆ ಸೇರಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲದ ಕಾರಣ ಇಲ್ಲಿನ ಜನರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ವಿಚಾರದಲ್ಲಿ ಸ್ಪಷ್ಟತೆಯನ್ನು ನೀಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಗುಡ್ಡೇತೋಟ, ಜಯಪುರ ಹಾಗೂ ಹೇರೂರು ಗ್ರಾಮ ಪಂಚಾಯಿತಿ ನಡುವಿನಲ್ಲಿರುವ ಜಲದುರ್ಗ ಸೈಟ್, ಬಾಳೆಹೊನ್ನೂರು- ಜಯಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿ ಸುಮಾರು 26 ಮನೆಗಳಿವೆ. ಅವ್ಯವಸ್ಥೆ, ಸೌಲಭ್ಯದ ಕೊರತೆಯಿಂದ ಇಲ್ಲಿ ವಾಸಿಸಲಾಗದೆ ಹಲವರು ಹೊರಹೋಗಿದ್ದು, ಪ್ರಸ್ತುತ 13 ಕುಟುಂಬಗಳು ಇಲ್ಲಿವೆ. ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು ಮಣ್ಣಿನ ಗೋಡೆ, ತಗಡಿನ ಶೀಟ್ ಮನೆಗಳಲ್ಲೇ 9 ವರ್ಷದಿಂದ ವಾಸ ಮಾಡುತ್ತಿದ್ದಾರೆ.
ಇಲ್ಲಿನ 56 ಮಂದಿ ಮತದಾರರು ಪ್ರತಿ ಬಾರಿ ಜಯಪುರದಲ್ಲೇ ಮತದಾನ ಮಾಡುತ್ತಾರೆ. ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲೂ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಕೊನೆಗೆ ಶಾಸಕರ ಸೂಚನೆ ಮೇರೆಗೆ ಸಂಪರ್ಕ ನೀಡಿದ್ದಾರೆ. ಇದಕ್ಕಾಗಿ ಮೆಸ್ಕಾಂ ಅಧಿಕಾರಿಗಳು ಪ್ರತಿ ಮನೆಯಿಂದ ₹8 ಸಾವಿರ ಪಡೆದಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ನಾಗಪ್ಪ.
ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ನಾವು ಯಾರನ್ನು ಕೇಳಬೇಕು ಎಂದು ಅಳಲು ತೋಡಿಕೊಂಡಿದ್ದು ಶಾಂತಾ.
‘ನಮಗೆ ತಕ್ಷಣ ಹಕ್ಕುಪತ್ರ ನೀಡಬೇಕು. ಜೊತೆಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಈ ಬಾರಿ ನಾವು ಮತದಾನದಿಂದ ದೂರ ಉಳಿಯುತ್ತೇವೆ’ ಎನ್ನುತ್ತಾರೆ ಬಾಲು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.