ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ವಹಣೆ ಕಾಣದ ಯಂತ್ರಗಳು, ರೋಗಿಗಳಲ್ಲಿ ಆತಂಕ: ಡಯಾಲಿಸಿಸ್ ಕೇಂದ್ರಕ್ಕೆ ಬೇಕು ಚಿಕಿತ್ಸೆ

Published : 9 ಜೂನ್ 2023, 20:30 IST
Last Updated : 9 ಜೂನ್ 2023, 20:30 IST
ಫಾಲೋ ಮಾಡಿ
Comments

ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿನ ಯಂತ್ರಗಳಿಗೆ ನಿರ್ವಹಣೆಯೇ ಇಲ್ಲವಾಗಿದ್ದು, ಕಾರ್ಯ ಸ್ಥಗಿತಗೊಳ್ಳುವ ಆತಂಕದಲ್ಲಿ ರೋಗಿಗಳಿದ್ದಾರೆ.

‌‌ಕೇಂದ್ರದಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿವೆ. ಒಂದು ಯಂತ್ರದಲ್ಲಿ ದಿನಕ್ಕೆ ಮೂರು ಜನರಿಗೆ ಡಯಾಲಿಸಿಸ್ ಮಾಡಬಹುದು. ಒಬ್ಬ ರೋಗಿಗೆ ನಾಲ್ಕು ಗಂಟೆ ಡಯಾಲಿಸಿಸ್ ಮಾಡಬೇಕಾಗುತ್ತದೆ. ಒಟ್ಟು 14 ಜನ ವಾರಕ್ಕೆ ಎರಡು ಬಾರಿ ಸರದಿಯಲ್ಲಿ‌ ಈ ಸೌಲಭ್ಯ ಪಡೆಯುತ್ತಿದ್ದಾರೆ.

ಇನ್ನೂ 20 ಜನ ಚಿಕಿತ್ಸೆಗೆ ಹೆಸರು ನೊಂದಾಯಿಸಿದ್ದು, ಡಯಾಲಿಸಿಸ್‌ಗೆ ಕಾಯುತ್ತಿದ್ದಾರೆ. ಇವರೆಲ್ಲರಿಗೂ ಸಮರ್ಪಕ ಚಿಕಿತ್ಸೆ ದೊರೆಯಲು ಇನ್ನೂ ಎರಡು ಡಯಾಲಿಸಿಸ್ ಯಂತ್ರಗಳ ಅವಶ್ಯಕತೆ ಇದೆ.

ಪ್ರತಿ ಐದು ವರ್ಷಕ್ಕೊಮ್ಮೆ ಟೆಂಡರ್ ಮೂಲಕ ಈ ಕೇಂದ್ರಗಳ ನಿರ್ವಹಣೆ ಹೊಣೆಯನ್ನು ರಾಜ್ಯ ಮಟ್ಟದಲ್ಲಿ ಒಂದು ಸಂಸ್ಥೆಗೆ ನೀಡಲಾಗುತ್ತದೆ. 2022ರ ಜನವರಿಯಿಂದ ಈ ಕೇಂದ್ರದ ನಿರ್ವಹಣೆಯನ್ನು ಕಲ್ಕತ್ತಾದ ಎಸ್ಕಾಗ್ ಸಂಜೀವಿನಿ ಪ್ರೈ ಲಿಮಿಟೆಡ್ ಎಂಬ ಸಂಸ್ಥೆ ಮಾಡುತ್ತಿದೆ.

ಕೇಂದ್ರದಲ್ಲಿನ ಎರಡು ಡಯಾಲಿಸಿಸ್ ಯಂತ್ರಗಳಿಗೆ ಒಂದೂವರೆ ವರ್ಷದಿಂದ ನಿರ್ವಹಣೆಯನ್ನೇ ಮಾಡಿಲ್ಲ. ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ವಯಂಚಾಲಿತ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ. ರೋಗಿಗೆ ಚಿಕಿತ್ಸೆ ಸಮಯ ಮುಗಿದ ಕೂಡಲೇ  ಶಬ್ಧ ಬರುವ ವ್ಯವಸ್ಥೆಯಿದ್ದರೂ ಅದು ಕೆಟ್ಟು ವರ್ಷಗಳೇ ಕಳೆದಿವೆ. ಆದರೂ ಅಂದಾಜಿನಲ್ಲಿ ಸಮಯ ನಿಗದಿ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಒಬ್ಬರಿಗೆ ಡಯಾಲಿಸಿಸ್ ಮಾಡಲು 130 ಲೀಟರ್ ನೀರು ಅಗತ್ಯವಿದೆ. ಇದನ್ನು ಪೂರೈಸುವ ನೀರಿನ ಘಟಕ ಸಹ ನಿರ್ವಹಣೆ ಕಂಡಿಲ್ಲ. ಗಡಸು ನೀರನ್ನು ಪರಿವರ್ತಿಸುವ ಸಾಫ್ಟ್‌ನರ್ ಬದಲಾಯಿಸಿಲ್ಲ. ಇದರಿಂದ ಚಿಕಿತ್ಸೆ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎನ್ನುತ್ತಾರೆ ರೋಗಿಗಳು.

ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಬೇರೆ ಊರುಗಳಿಗೆ ಹೋಗುವುದನ್ನು ತಪ್ಪಿಸಿ ಇಲ್ಲೇ ಚಿಕಿತ್ಸೆ ದೊರೆಯುತ್ತಿದ್ದುದು ರೋಗಿಗಳಿಗೆ ಅನುಕೂಲಕ ಆಗಿದೆ. ಆದರೇ, ಈ ಕೇಂದ್ರದಲ್ಲಿನ ಅಸಮರ್ಪಕ ನಿರ್ವಹಣೆಯಿಂದ ರೋಗಿಗಳಲ್ಲಿ ಆತಂಕ ಕಾಡುತ್ತಿದೆ. ಯಂತ್ರಗಳ ನಿರ್ವಹಣೆ ಮಾಡುವ ವ್ಯವಸ್ಥೆಯಾಗಬೇಕು ಎನ್ನುತ್ತಾರೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಮನ್ಸೂರ್.

ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸಲು ರಾಜ್ಯಮಟ್ಟದಲ್ಲಿ ಟೆಂಡರ್ ನಡೆಯಬೇಕಿದೆ. ಸರ್ಕಾರದ ಆದೇಶದಂತೆ ಡಯಾಲಿಸಿಸ್ ಕೇಂದ್ರಗಳಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಔಷಧಿ ಮತ್ತಿತರ ವಸ್ತುಗಳನ್ನು ಆಸ್ಪತ್ರೆಯಿಂದಲೇ ಭರಿಸಲಾಗುವುದು.
ಡಾ.ಉಮೇಶ್.ಜಿಲ್ಲಾ ಆರೋಗ್ಯ ಮತ್ತು ಕುಟುಂಭಕಲ್ಯಾಣಾಧಿಕಾರಿ
ಯಂತ್ರಗಳ ನಿರ್ವಹಣೆ; ತುರ್ತು ವ್ಯವಸ್ಥೆಯಾಗಬೇಕಿದೆ
ಸಂಜೀವಿನಿ ಸಂಸ್ಥೆಯವರು ಯಂತ್ರಗಳ ನಿರ್ವಹಣೆ ಮಾಡುತ್ತಿಲ್ಲ. ಆದರೆ ಡಯಾಲಿಸಿಸ್‌ಗೆ ಅಗತ್ಯವಿರುವ ಔಷಧಿಗಳನ್ನು ನೀಡಿದ್ದಾರೆ.  ಡಯಾಲಿಸಿಸ್‌ಗೆ ಅಗತ್ಯವಿರುವ ಚುಚ್ಚುಮದ್ದುಗಳನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ದೀಪಕ್ ಸಮರ್ಪಕವಾಗಿ ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ. ಯಂತ್ರಗಳ ಸಮರ್ಪಕ ನಿರ್ವಹಣೆ ಮಾಡಲು ತುರ್ತು ವ್ಯವಸ್ಥೆಯಾಗಬೇಕಿದೆ ಎಂದು ಹೆಸರು ಹೇಳಲಿಚ್ಚಿಸದ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT