ಗುರುವಾರ , ಮೇ 19, 2022
20 °C
ಭೂಮಿ ಕೇಂದ್ರದಲ್ಲಿ ಅವ್ಯವಹಾರ– ಕೆಪಿಸಿಸಿ ಸದಸ್ಯ ಆನಂದ್ ಆಗ್ರಹ

ಜಿಲ್ಲಾಧಿಕಾರಿಯೇ ಸಮಗ್ರ ತನಿಖೆ ನಡೆಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ‘ತಾಲ್ಲೂಕು ಕಚೇರಿ ಮತ್ತು ಭೂಮಿ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಒತ್ತಾಯಿಸಿದರು.

ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಮ್ಮೆದೊಡ್ಡಿ ಪ್ರದೇಶದಲ್ಲಿ ಅತ್ಯಂತ ಫಲವತ್ತಾದ ಭೂಮಿಯಿದ್ದು, ಅದರ ಮೇಲೆ ಬಹಳಷ್ಟು ಜನರು ಕಣ್ಣಿಟ್ಟಿದ್ದಾರೆ. ಬಡವರಿಗೆ ಜೀವನ ನಡೆಸಲು ಭೂಮಿ ನೀಡುವ ಕಾರ್ಯ ನಿರ್ವಹಿಸುವ ಬಗರ್ ಹುಕುಂ ಸಮಿತಿ ನಡಾವಳಿಯನ್ನೇ ತಿದ್ದಿ ಅಧಿಕಾರಿಗಳು ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಜಮೀನು ಮಂಜೂರು ಮಾಡಿ ಕೊಂಡಿರುವುದು ಬಹುದೊಡ್ಡ ಹಗರಣವೇ ಆಗಿದೆ. ಇದನ್ನು ಪ್ರಶ್ನಿಸ ಬೇಕಾದ ಶಾಸಕರ ಮೌನ ಹಲವು ಅನು ಮಾನಗಳಿಗೆ ಕಾರಣವಾಗಿದೆ’ ಎಂದರು.

‘ಎಮ್ಮೆದೊಡ್ಡಿ ಸರ್ವೆ ನಂ. 70 ರಲ್ಲಿನ ಜಮೀನನ್ನು ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವವರಿಗೇ ಇನ್ನೂ ಸಾಗುವಳಿ ಪತ್ರ ದೊರೆತಿಲ್ಲ. ಆದರೆ, ಅಧಿಕಾರಿಗಳ ಕುಟುಂಬ ಸದಸ್ಯರ ಹೆಸರಿಗೆ ಮಂಜೂರಾತಿ, ಖಾತೆ ಬರುವುದು ವಿಸ್ಮಯ. ಎಷ್ಟೋ ಪ್ರಕರಣಗಳಲ್ಲಿ ಮೂಲ ದಾಖಲಾತಿಯಿಲ್ಲದೆ ಮಂಜೂರಾತಿ ನೀಡಲಾಗಿದೆ. ಹಳೆಯ ಬಗರ್ ಹುಕುಂ ಸಮಿತಿ ನಡಾವಳಿಗಳನ್ನು ತಿದ್ದಿ, ತಮಗೆ ಬೇಕಾದವರ ಹೆಸರನ್ನು ಸೇರಿಸಿ, ಆ ಆಧಾರದ ಮೇಲೆ ಗ್ರಾಂಟ್ ನೀಡಲಾಗಿದೆ. ಇದೆಲ್ಲವನ್ನೂ ಜಿಲ್ಲಾಧಿಕಾರಿ ಸಮಗ್ರ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅನರ್ಹರಿಗೆ ನೀಡಿರುವ ಮಂಜೂರಾತಿ ರದ್ದುಪಡಿಸಿ, ಅರ್ಹ ಬಡ ಜನತೆಗೆ ಅದನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ಶಾಸಕ ಬೆಳ್ಳಿಪ್ರಕಾಶ್ ಅವರೇ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಅಕ್ರಮಗಳನ್ನೆಲ್ಲ ಪರಿಶೀಲಿಸಿ, ಸರಿಯಿಲ್ಲದ್ದನ್ನು ರದ್ದುಪಡಿಸಿ ಅದನ್ನು ಬಡವರಿಗೆ ನೀಡುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ಅವರ ಕಾರ್ಯಕ್ಷಮತೆ ಬಗ್ಗೆಯೇ ಅನುಮಾನ ಉಂಟಾಗುವುದು ಸಹಜ’ ಎಂದರು.

‘ಜಿಲ್ಲಾಧಿಕಾರಿ ಕೂಡಲೇ ಈ ಹಗರಣದ ಪೂರ್ಣ ತನಿಖೆ ನಡೆಸಬೇಕು. ಅಲ್ಲಿಯವರೆಗೂ ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ಅಮಾನತಿನಲ್ಲಿಡಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತೇವೆ’ ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಅಸಂದಿ ಕಲ್ಲೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮುಗಳೀಕಟ್ಟೆ ಲಿಂಗರಾಜು, ಕಾಂಗ್ರೆಸ್ ಮುಖಂಡ ಕೆ.ಜಿ. ಶ್ರೀನಿವಾಸ್ ಇದ್ದರು.

‘ಬಡವರ ಮೇಲೆ ಮಾತ್ರ ದರ್ಪ’
‘ಹಾಲಿ ತಹಶೀಲ್ದಾರ್ ಅವರ ಅಜ್ಜಿ ಮತ್ತು ಅಜ್ಜಿಯ ತಮ್ಮನ ಹೆಸರಿನಲ್ಲಿ ತಲಾ 4 ಎಕರೆ 38 ಗುಂಟೆ ಜಮೀನು 1994ರಲ್ಲಿ ಬಗರ್ ಹುಕುಂ ಸಮಿತಿ ಮಂಜೂರಾತಿ ನೀಡಿದೆ. ಸ್ಥಳೀಯ ನಿವಾಸಿ ಎಂಬುದಕ್ಕೆ ಯಾವ ದಾಖಲೆಯಿಲ್ಲ. ವಿಳಾಸದ ಪುರಾವೆ, ವಿದ್ಯುತ್ ಬಿಲ್ ದಾಖಲೆಯಿಲ್ಲದವರಿಗೆ ಹೇಗೆ ಮಂಜೂರಾತಿ ಸಾಧ್ಯವೆಂಬುದನ್ನು ಅವರೇ ಹೇಳಬೇಕು’ ಎಂದು ಕೆ.ಎಸ್.ಆನಂದ್ ತಿಳಿಸಿದರು.

‘ಪುರಸಭೆ ಮುಖ್ಯಾಧಿಕಾರಿ ತಮ್ಮ ಮಗಳ ಹೆಸರಿಗೆ ಬೆಳ್ಳಿಗುತ್ತಿ ಸಮೀಪ ಮೂರು ಎಕರೆ ಜಮೀನು ಮಾಡಿಸಿಕೊಳ್ಳುತ್ತಾರೆ. ಮೂವತ್ತು ವರ್ಷಗಳಿಂದ ಬಗರ್ ಹುಕುಂ ಅರ್ಜಿ ಸಲ್ಲಿಸಿದವರಿಗೆ ಸರ್ವೆ ಸ್ಕೆಚ್ ಮಾಡಿಕೊಡಲು ಸತಾಯಿಸುವ ಸರ್ವೆಯರ್ ಮುಖ್ಯಾಧಿಕಾರಿ ಮಗಳ ಹೆಸರಿಗೆ ಸರ್ವೆ ಸ್ಕೆಚ್ ತರಾತುರಿಯಲ್ಲಿ ನೀಡುತ್ತಾರೆ. ಈಗಾಗಲೇ ಅಲ್ಲಿ ಕೃಷಿಗೆ ಪೂರಕ ಚಟುವಟಿಕೆ ಆರಂಭವಾಗಿದೆ. ಈ ಅಧಿಕಾರಿಗೆ ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಯಾವ ತೊಂದರೆ ಕೊಟ್ಟಿಲ್ಲ. ಬಡವರ ಮೇಲೆ ಮಾತ್ರ ದರ್ಪ ತೋರುತ್ತಾರೆ. ಅಲ್ಲಿ ಮುಖ್ಯಾಧಿಕಾರಿ ಪಟ್ಟಾ ಜಮೀನು ಖರೀದಿಸಲು ಅಭ್ಯಂತರವಿಲ್ಲ. ಆದರೆ, ದರ್ಖಾಸ್ತು ಜಮೀನು ಮಂಜೂರು ಮಾಡಿಸಿಕೊಳ್ಳಲು ಹೇಗೆ ಸಾಧ್ಯ’ ಎಂದ ಆನಂದ್ ಅವರು ಪೂರಕ ದಾಖಲೆಗಳನ್ನು ಪ್ರದರ್ಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು